
ಸರ್ ಸಿ ಆರ್ ರೆಡ್ಡಿ (Sir C R Reddy) ಅವರು ಕನ್ನಡ ನಾಡಿಗಾಗಿ ನೀಡಿದ ಸೇವೆಗಳು ಅಜರಾಮರ. ಆದರೆ, ಈ ಮಹನೀಯರನ್ನು ಕನ್ನಡಿಗರು ಇತಿಹಾಸದ ಪುಟದಲ್ಲಿಯೇ ಉಳಿಸಿರುವುದು ದುರಂತ. ಹೀಗೆ ತೆರೆಮರೆಯಲ್ಲಿ ಉಳಿದಿದ್ದ ಸಿ ಆರ್ ರೆಡ್ಡಿಯವರನ್ನು ಹಿರಿಯ ಸಂಶೋಧಕ ಮೊ ಮು ಆಂಜನಪ್ಪ ರೆಡ್ಡಿ ಅವರು ಕನ್ನಡಿಗರಿಗೆ ಪುನರ್ ಪರಿಚಯಿಸುವ ಕಾರ್ಯ ಮಾಡಿದ್ದಾರೆ…
ಇತಿಹಾಸವು ಕೆಲವೊಮ್ಮೆ ಅನ್ಯಾಯ ಮಾಡುತ್ತದೆ. ಕೆಲವರ ಸಾಧನೆಗಳು ಚಿರಂತನವಾಗಿ ನೆನಪಾಗಿ ಉಳಿಯುತ್ತವೆ. ಆದರೆ, ಮತ್ತೆ ಕೆಲವರು ಅದ್ವಿತೀಯ ಸೇವೆ ಸಲ್ಲಿಸಿದ್ದರೂ ಕೂಡ ಇತಿಹಾಸದ ಪುಟಗಳಲ್ಲಿಯೇ ಮರೆತು ಹೋಗುತ್ತಾರೆ. ಅಂತಹವರಲ್ಲೊಬ್ಬರು ಸರ್ ಸಿ.ಆರ್.ರೆಡ್ಡಿ ಅರ್ಥಾತ್ ಕಟ್ಟಮಂಚಿ ರಾಮಲಿಂಗ ರೆಡ್ಡಿ.

ಸರ್ ಸಿ ಆರ್ ರೆಡ್ಡಿ ಅವರು ಮೂಲತಃ ಆಂಧ್ರ ಪ್ರದೇಶದವರಾದರೂ ಮೈಸೂರು ರಾಜ್ಯದ ಪ್ರಥಮ ಉನ್ನತ ಶಿಕ್ಷಣಾಧಿಕಾರಿ, ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಯ ರೂವಾರಿಯಾಗಿ ಹಾಗೂ ದಲಿತರಿಗಾಗಿ ಶೈಕ್ಷಣಿಕ ಕ್ರಾಂತಿ ಜ್ಯೋತಿ ಹೊತ್ತಿಸಿದ ಶಿಕ್ಷಣ ಶಿಲ್ಪಿಯಾಗಿ ಅವರು ಕನ್ನಡಿಗರಿಗೆ ನೀಡಿದ ಕೊಡುಗೆ ಅವಿಸ್ಮರಣೀಯವಾದಂತವು.
ಕರ್ನಾಟಕದ ದಲಿತ, ಹಿಂದುಳಿದ ವರ್ಗಗಳ ಮಕ್ಕಳಿಗೆ ಅಕ್ಷರದ ಜ್ಯೋತಿ ಹೊತ್ತಿದ ಈ ಮಹಾನ್ ವ್ಯಕ್ತಿತ್ವವನ್ನು ಲೇಖಕರು ಮತ್ತು ಸಂಶೋಧಕರಾದ ಮೊಮು ಆಂಜನಪ್ಪ ರೆಡ್ಡಿ (Mo mu Anjanappareddy) ಅವರು ತಮ್ಮ ‘ಶಿಕ್ಷಣ ಶಿಲ್ಪಿ ಸಿ.ಆರ್.ರೆಡ್ಡಿ’ (Education Sculptor C R Reddy) ಕೃತಿಯ ಮೂಲಕ ಕನ್ನಡಿಗರಿಗೆ ಮರುಪರಿಚಯ ಮಾಡಿಸುವ ಮಹತ್ತರ ಕೆಲಸ ಮಾಡಿದ್ದಾರೆ.

ಶಿಕ್ಷಣ ಕ್ರಾಂತಿಯ ಹಾದಿಯಲ್ಲಿ ಸಿ.ಆರ್ ರೆಡ್ಡಿ
ಸರ್ ಸಿ.ಆರ್.ರೆಡ್ಡಿಯವರು ಪಾಶ್ಚಾತ್ಯ ಶಿಕ್ಷಣ, ಅಮೋಘ ಪಾಂಡಿತ್ಯ, ಧೈರ್ಯಮಯ ನಿರ್ಧಾರಗಳು ಮತ್ತು ವ್ಯಾಪಕ ಸಾಮಾಜಿಕ ಚಿಂತನೆ ಹೊಂದಿದ್ದ ಮಹಾನಾಯಕರು. ಅವರ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸೇವೆಗಳು ಮೈಸೂರು ಪ್ರಾಂತ್ಯದಲ್ಲಿ ಒಂದು ಹೊಸ ಅಕ್ಷರ ಯುಗವನ್ನು ಪ್ರಾರಂಭಿಸಿತು.
1910ರ ದಶಕದಲ್ಲಿ ಮೈಸೂರು ಸಂಸ್ಥಾನದಲ್ಲಿ ರಾಜರ್ಷಿ ನಾಲ್ವಡಿಯವರ ನಾಯಕತ್ವ, ದಿವಾನ್ ಸರ್ ಎಂ.ವಿಶ್ವೇಶ್ವರಯ್ಯ ಅವರ ನೇತೃತ್ವದಲ್ಲಿ ಅಭಿವೃದ್ಧಿಯ ಬೆಳಕು ಪಸರಿಸುತ್ತಿದ್ದಾಗ, ರೆಡ್ಡಿಯವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯ ಜ್ಯೋತಿ ಹೊತ್ತಿಸಿದ್ದರು. ಪಾಶ್ಚಾತ್ಯ ಪದ್ಧತಿಯ ವಿಶ್ಲೇಷಣೆಯೊಂದಿಗೆ ಭಾರತೀಯ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದ ಅವರ ಶಿಕ್ಷಣದ ದೃಷ್ಟಿಕೋನ ಈ ನೆಲದ ಮಕ್ಕಳ ಬಾಳನ್ನೇ ಬದಲಿಸಿತು.
ಮೈಸೂರು ವಿವಿ ಸ್ಥಾಪನೆಗೆ ನಿರ್ಣಾಯಕ ಕೊಡುಗೆ
1912ರಲ್ಲಿ ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಯ ಯೋಜನೆಗೆ ರೂಪುರೇಷೆ ನೀಡುವ ಕೆಲಸವನ್ನು ರೆಡ್ಡಿಯವರಿಗೆ ನೀಡಲಾಯಿತು. ಅವರು ಯುವರಾಜ ಕಂಠೀರವ ನರಸಿಂಹರಾಜ ಒಡೆಯರೊಂದಿಗೆ ಯುರೋಪ್ ಪ್ರವಾಸ ಕೈಗೊಂಡು ಹಲವು ದೇಶಗಳ ಶಿಕ್ಷಣ ವ್ಯವಸ್ಥೆ ಅಧ್ಯಯನ ಮಾಡಿದರು. ಈ ಪ್ರಯಾಣದ ಫಲವಾಗಿ, ಅವರು ಸಿದ್ಧಪಡಿಸಿದ ‘ಪ್ರತಿನಿಧಿ ವರದಿ’ಯೇ ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಯ ಸ್ತಂಭವಾಯಿತು.

ಪ್ರಧಾನ ಶಿಕ್ಷಣಾಧಿಕಾರಿಯಾಗಿ ಕ್ರಾಂತಿಕಾರಿ ಕಾರ್ಯಗಳು
ರೆಡ್ಡಿಯವರು ಮೈಸೂರು ಸಂಸ್ಥಾನದ ಪ್ರಧಾನ ಶಿಕ್ಷಣಾಧಿಕಾರಿಯಾಗಿ, ಎಲ್ಲಾ ವರ್ಗದ ಮಕ್ಕಳಿಗೆ ಸಮಾನ ಶಿಕ್ಷಣ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅನೇಕ ಮುಂದಾಳುತ್ವದ ಕ್ರಮಗಳನ್ನು ತೆಗೆದುಕೊಂಡರು. ವಿಶೇಷವಾಗಿ ಮಹಾರಾಜ ನಾಲ್ವಡಿ ಅವರು ಸಹಕಾರದಲ್ಲಿ ಶಿಕ್ಷಣವಿಲ್ಲದ ಹಳ್ಳಿಗಳಲ್ಲಿ ಶಾಲೆಗಳ ಸ್ಥಾಪನೆ ಮಾಡಲು ಶಕ್ತಮೀರಿ ಶ್ರಮಿಸಿದರು.
1918ರ ನವೆಂಬರ್ 29ರಂದು ಅಂದು ಪಂಚಮರೆಂದು ಕರೆಯಲ್ಪಡುತ್ತಿದ್ದ ದಲಿತ ವರ್ಗಗಳ ಮಕ್ಕಳಿಗೂ ಶಾಲೆ ಪ್ರವೇಶ ಕಲ್ಪಿಸಿ ಮಹತ್ವದ ಆದೇಶ ಹೊರಡಿಸಲಾಯಿತು. ಈ ಮಕ್ಕಳಿಗೆ ವಿದ್ಯಾರ್ಥಿವೇತನ, ಉಚಿತ ಊಟ, ವಸತಿ, ಪುಸ್ತಕ, ಉಡುಪು ಮುಂತಾದ ಮೂಲ ಸೌಲಭ್ಯಗಳ ಒದಗಿಸುವ ಮಹತ್ವದ ಯೋಜನೆಗಳನ್ನು ರೂಪಿಸಿದರು. ಮಕ್ಕಳನ್ನು ಶಾಲೆಗೆ ಕಳಿಸಲು ತಂದೆ ತಾಯಂದಿರಿಗೂ ಹಣ ಸಹಾಯ ಒದಗಿಸಲಾಯಿತು.
ರಾಷ್ಟ್ರಕವಿ ಕುವೆಂಪು ಅವರಿಗೂ ಪ್ರೇರಣೆ
ಗಮನಿಸುವ ಅಂಶವೆಂದರೆ ರೆಡ್ಡಿಯವರು ಪ್ರಧಾನ ಶಿಕ್ಷಣಾಧಿಕಾರಿಯಾಗಿ ಜಾರಿಗೆ ತಂದ ಹಲವು ಯೋಜನೆಗಳು ರಾಷ್ಟ್ರಕವಿ ಕುವೆಂಪುರಿಂದ ಹಿಡಿದು ಸಹಸ್ರಾರು ಮಹನೀಯರ ಬದುಕನ್ನು ಬದಲಿಸಿವೆ. ಈ ಬಗ್ಗೆ ಕುವೆಂಪು ಅವರು ತಮ್ಮ ‘ನೆನಪಿನ ದೋಣಿಯಲ್ಲಿ’ ಆತ್ಮಕಥನದಲ್ಲಿ ಸ್ಮರಿಸಿಕೊಂಡಿದ್ದಾರೆ ಕೂಡ.

ಕುವೆಂಪು ಅವರಂತಹ ಚೈತನ್ಯದ ಯುವಕರನ್ನು ಶಿಕ್ಷಣದ ಮೂಲಕ ಚಳವಳಿಯ ತುಡಿತವನ್ನು ಬಡಿದೆಬ್ಬಿಸಿದ ಕೀರ್ತಿ ರೆಡ್ಡಿಯವರದು. ಸಮಾಜದ ಸಮಸ್ತ ಜನಾಂಗದ ಶಿಕ್ಷಣದ ಹಸಿವು ತಣಿಸಲು ಕಂಕಣ ಕಟ್ಟಿ ನಿಂತ ರೆಡ್ಡಿಯವರು ವಿಶೇಷವಾಗಿ ದಲಿತರ ಏಳಿಗೆಗಾಗಿ ರೂಪಿಸಿದ ಕಾರ್ಯಕ್ರಮಗಳು ಪ್ರಾತಃಸ್ಮರಣೀಯ.
Momu Anjanappa Reddy life of struggle- ಮೊ ಮು ಆಂಜನಪ್ಪ ರೆಡ್ಡಿಯವರ ಹೋರಾಟದ ಬದುಕು
ಹಿಂದುಳಿದ ವರ್ಗ ಚಳವಳಿಗೆ ಬೆಳಕು ನೀಡಿದ ಯೋಧ
ಇನ್ನು ದಕ್ಷಿಣ ಭಾರತದಲ್ಲಿ ಭುಗಿಲೆದ್ದ ಬ್ರಾಹ್ಮಣೇತರ ಚಳವಳಿಗೆ ಬದ್ಧತೆಯಿಂದ ಸ್ಪಂದಿಸಿದ ರೆಡ್ಡಿಯವರು ಮಿಲ್ಲರ್ ಸಮಿತಿ ವರದಿಯ ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ವರದಿಯ ಆಧಾರವಾಗಿ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳ ಹಕ್ಕುಗಳನ್ನು ಸ್ಥಾಪಿಸಲು ಸಾಧ್ಯವಾಯಿತು.
1921ರಲ್ಲಿ ರೆಡ್ಡಿಯವರು ಮೈಸೂರು ಸಂಸ್ಥಾನದ ಉನ್ನತ ಹುದ್ದೆಯಿಂದ ರಾಜೀನಾಮೆ ನೀಡಿ ರಾಜಕೀಯ ಹಾದಿ ಹಿಡಿದರು. ಅವರು ಜಸ್ಟಿಸ್ ಪಾರ್ಟಿಯಿಂದ ಬೇರ್ಪಟ್ಟು ಯುನೈಟೆಡ್ ನ್ಯಾಷನಲ್ ಪಾರ್ಟಿ ಎಂಬ ಪಕ್ಷವನ್ನು ಸ್ಥಾಪಿಸಿದರು. ರಾಜಕೀಯದಲ್ಲಿ ಕೂಡಾ ಮಹತ್ವದ ಸೇವೆ ಸಲ್ಲಿಸಿದ ಅವರು ಬಲವಾದ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದರು.
ಬ್ರಿಟಿಷ್ ಸರ್ಕಾರದಿಂದ ‘ಸರ್’ ಗೌರವ ಪಡೆದ ಮೇಧಾವಿ
1936 ರಿಂದ 1949ರ ವರೆಗೆ ಆಂಧ್ರ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದ ರೆಡ್ಡಿಯವರು, ಭಾರತದಲ್ಲಿಯೇ ಅತ್ಯಂತ ಪ್ರಭಾವಶಾಲಿ ಶಿಕ್ಷಣ ತಜ್ಞರಾಗಿದ್ದರು. 1937ರಲ್ಲಿ ಅಂತರ ವಿಶ್ವವಿದ್ಯಾಲಯ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಬ್ರಿಟಿಷ್ ಸರ್ಕಾರವು ಇವರ ಪಾಂಡತ್ಯಪೂರ್ಣ ಸೇವೆಯನ್ನು ಗಮನಿಸಿ ‘ಸರ್’ ಎಂಬ ಬಿರುದು ನೀಡಿ ಗೌರವಿಸಿತು.

ವೇಮನ ಸಾಹಿತ್ಯಕ್ಕೆ ಆಧುನಿಕ ಸ್ಪರ್ಶ
ವಿಶೇಷವೆಂದರೆ ಈ ಎಲ್ಲಾ ಕೆಲಸ ಕಾರ್ಯಗಳು, ಸಾಮಾಜಿಕ ಕೈಂಕರ್ಯಗಳ ನಡುವೆ ಸಿ ಆರ್ ರೆಡ್ಡಿಯವರು ಜನರ ನಾಲಿಗೆಯಲ್ಲಿ ಉಳಿದು ಹೋಗಿದ್ದ ವೇಮನ ಸಾಹಿತ್ಯವನ್ನು ಪ್ರವರ್ಧಮಾನಕ್ಕೆ ತಂದರು.
ಗ್ರಾಮೀಣ ಜನರ ಮನದಾಳದಲ್ಲಿ ಹುದುಗಿ ಹೋಗಿದ್ದ ವೇಮನ ಸಾಹಿತ್ಯಕ್ಕೆ ಗ್ರಂಥ ರೂಪ ನೀಡಿ ವಿದೇಶಿ ವಿದ್ವಾಂಸರು ಪ್ರಕಟಿಸಿದ್ದ ಸಂಶೋಧನಾ ಕೃತಿಗಳು ಸ್ಥಳೀಯ ಭಾಷೆಗಳಲ್ಲಿ ದೊರೆಯುವಂತೆ ಮಾಡುವ ಮೂಲಕ ದೇಶದಲ್ಲಿಯೇ ಮೊದಲ ಬಾರಿಗೆ ವೇಮನ ಸಾಹಿತ್ಯಕ್ಕೆ ಆಧುನಿಕ ಸ್ಪರ್ಶ ನೀಡಿದ ಕೀರ್ತಿ ಸರ್ ಸಿ ಆರ್ ರೆಡ್ಡಿ ಅವರಿಗೆ ಸಲ್ಲುತ್ತದೆ.
K C Reddys birth anniversary- ಮೊದಲ ಮುಖ್ಯಮಂತ್ರಿ ಕೆ. ಚೆಂಗಲರಾಯ ರೆಡ್ಡಿ | ಜನ್ಮೋತ್ಸವದ ಶುಭಾಶಯಗಳು
ಮೈಸೂರು ವಿವಿ ಮೊದಲ ಭಾರತೀಯ ಕುಲಾಧಿಪತಿ
ಈ ನಡುವೆ ಸಿ ಆರ್ ರೆಡ್ಡಿಯವರು ಕ್ರಮೇಣ ಸ್ವಾತಂತ್ರ್ಯ ನಂತರ 1949ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಮೊದಲ ಭಾರತೀಯ ಕುಲಾಧಿಪತಿಯಾಗಿ ನೇಮಕಗೊಂಡರು. ಈ ಹುದ್ದೆಯನ್ನು ಹಿಂದಿನ ವರೆಗೆ ಬ್ರಿಟಿಷ್ ಗವರ್ನರ್ಗಳೇ ನಿರ್ವಹಿಸುತ್ತಿದ್ದುದನ್ನು ಗಮನಿಸಿದರೆ, ಇದು ಅವರ ಸಾಧನೆಯ ಮತ್ತೊಂದು ಮೈಲುಗಲ್ಲು ಎಂದು ಹೇಳಬೇಕು.
ರೆಡ್ಡಿಯವರ ಆರೋಗ್ಯ 1950ರ ದಶಕದ ಹೊತ್ತಿಗೆ ಕ್ಷೀಣಿಸಿತು. ಮದ್ರಾಸಿನ ನರ್ಸಿಂಗ್ ಹೋಮ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೆಡ್ಡಿಯವರು 1951ರ ಫೆಬ್ರವರಿ 24ರಂದು ಇಹಲೋಕ ತ್ಯಜಿಸಿದರು. ಅವರು ತಮ್ಮ ಪಾಂಡಿತ್ಯ, ಸೇವಾಭಾವನೆ, ಮತ್ತು ಮಾನವೀಯ ಚಿಂತನೆಗಳೊಂದಿಗೆ ಸದಾ ನಮ್ಮೊಂದಿಗೆ ಬದುಕಿದ್ದಾರೆ.

ರೆಡ್ಡಿವರನ್ನು ನೆನೆಸುವುದು ನಮ್ಮ ಹೊಣೆ
ಮೊ ಮು ಆಂಜನಪ್ಪ ರೆಡ್ಡಿ ಅವರ ‘ಶಿಕ್ಷಣ ಶಿಲ್ಪಿ ಸಿ.ಆರ್. ರೆಡ್ಡಿ’ ಕೃತಿ ಈ ಮಹಾನ್ ವ್ಯಕ್ತಿತ್ವವನ್ನು ಮರುಪರಿಚಯ ಮಾಡಿಸಿದ ಅಪೂರ್ವ ಗ್ರಂಥವಾಗಿದೆ. ರೆಡ್ಡಿಯವರ ಸೇವೆಗಳನ್ನು ಶಿಕ್ಷಣ, ಸಮಾಜಸೇವೆ, ರಾಜಕೀಯ ಚಳವಳಿಗಳ ಹಿನ್ನಲೆಯಲ್ಲಿ ಒಟ್ಟಾಗಿ ನೋಡುವುದಾದರೆ, ಅವರು ಈ ನಾಡಿನಲ್ಲಿ ಅಕ್ಷರ ಕ್ರಾಂತಿಗೆ ನಾಂದಿ ಹಾಡಿದ ನಿಜವಾದ ‘ಶಿಕ್ಷಣ ಶಿಲ್ಪಿ’.
ಸಿ.ಆರ್.ರೆಡ್ಡಿಯವರ ಕೊಡುಗೆಗಳು ಹಲವು ತಲೆಮಾರಿನ ಬದುಕು ಬದಲಿಸಿವೆ. ಅವರ ಜೀವಿತದ ಸಾಧನೆ, ಆದರ್ಶ ಮತ್ತು ದೃಷ್ಟಿಕೋನ ಈ ನಾಡಿನ ಬಡವರು, ಹಿಂದುಳಿದವರು ಮತ್ತು ದಲಿತರ ಬದುಕಿಗೆ ಬೆಳಕಾಗಿ ನಿಂತಿದೆ. ಹೀಗಾಗಿ ಸಮಸ್ತ ಕನ್ನಡಿಗರು ಈ ಮಹಾನುಭಾವನನ್ನು ನೆನೆಯುವುದು ಗುರುತರ ಹೊಣೆಯಾಗಿದೆ.
ಮೂಲ ಪ್ರೇರಣಾ ಕೃತಿ: ‘ಶಿಕ್ಷಣ ಶಿಲ್ಪಿ ಸಿ.ಆರ್.ರೆಡ್ಡಿ’ – ಮೊ. ಮು ಆಂಜನಪ್ಪ ರೆಡ್ಡಿ