
ವೇಮನರು ಅಪ್ಪಟ ಮಾನವತೆಯ ಕವಿ. ಅವರ ಪದ್ಯಗಳಲ್ಲಿ ನಿತ್ಯಸತ್ಯಗಳಿವೆ. ಆ ಪದ್ಯಗಳು ಕಾಲ, ಭಾಷೆ, ಧರ್ಮಗಳ ಗಡಿಗಳನ್ನು ಮೀರಿ ವಿಶ್ವಸಂದೇಶ ಸಾರುತ್ತವೆ. ಆದ್ದರಿಂದಲೇ ವೇಮನ ಇಂದು ‘ವಿಶ್ವಕವಿ ವೇಮನ’ ಎಂಬ (Vishwakavi Vemana) ಗೌರವಕ್ಕೆ ಪಾತ್ರರಾಗಿದ್ದಾರೆ…
ಭಾರತದ ತತ್ತ್ವಶಾಸ್ತ್ರ ಮತ್ತು ಭಕ್ತಿಸಾಹಿತ್ಯದ ಪುಟಗಳಲ್ಲಿ ಅಕ್ಷರಶಃ ಅಜರಾಮರವಾದ ಹೆಸರು ಯೋಗಿ ವೇಮನರದು. ಕೇವಲ ತೆಲುಗು ಸಾಹಿತ್ಯವನ್ನೇ ಅಲ್ಲದೆ, ಭಾರತದ ಸಮಗ್ರ ಸಂಸ್ಕೃತಿ ಪರಂಪರೆಯನ್ನೇ ತಮ್ಮ ವಿಶಿಷ್ಟವಾದ ಚಿಂತನೆಗಳಿಂದ ಸಮೃದ್ಧಗೊಳಿಸಿದ ಈ ಕವಿ, ನಿಜಾರ್ಥದಲ್ಲಿ ವಿಶ್ವಕವಿ ಎಂದು ಕರೆಯಲ್ಪಡುವಂತವರು. ಅವರ ಪದ್ಯಗಳಲ್ಲಿ ವ್ಯಕ್ತವಾಗಿರುವ ಮಾನವೀಯತೆ, ತತ್ತ್ವಜ್ಞಾನ, ಸಾಮಾಜಿಕ ಸಮಾನತೆ ಮತ್ತು ಧಾರ್ಮಿಕ ಸಹಿಷ್ಣುತೆ ಇವುಗಳು ಇಂದಿಗೂ ಪ್ರಸ್ತುತವಾಗಿವೆ.
ಇದನ್ನೂ ಓದಿ: Reddy Contribution To Kannada Nadu Nudi – ಕನ್ನಡ ನಾಡು-ನುಡಿಗೆ ರೆಡ್ಡಿಗಳ ಚಿರಸ್ಮರಣೀಯ ಕೊಡುಗೆ
ಪಾಶ್ಚಾತ್ಯರ ಅಧ್ಯಯನ ಮತ್ತು ಪ್ರಭಾವ
ವೇಮನನ ಸಾಹಿತ್ಯ ಪಾಶ್ಚಾತ್ಯ ವಿದ್ವಾಂಸರ ಗಮನವನ್ನು ಅತ್ಯಂತ ಆಕರ್ಷಕವಾಗಿ ಸೆಳೆದಿತ್ತು. ಇಂಗ್ಲೀಷ್ ಪಂಡಿತ ಚಾರ್ಲ್ಸ್ ಫಿಲಿಪ್ ಬ್ರೌನ್ (Charles Philip Brown) ಅವರು 1874ರಲ್ಲಿ ಬರೆದ ‘Verses of Vemana’ ಕೃತಿಯಲ್ಲಿ ವೇಮನನ ಪದ್ಯಗಳನ್ನು ಸಂಗ್ರಹಿಸಿ, ಇಂಗ್ಲೀಷ್ ಅನುವಾದದ ಮೂಲಕ ಪಾಶ್ಚಾತ್ಯ ಜಗತ್ತಿಗೆ ಪರಿಚಯ ಮಾಡಿಸಿದರು. ಬ್ರೌನ್ ವೇಮನರನ್ನು ‘ಭಾಷೆಯ ಸರಳತೆಯಲ್ಲಿಯೇ ತತ್ತ್ವದ ಆಳವನ್ನು ನೀಡಿದ ಜನಕವಿ‘ ಎಂದು ಬಣ್ಣಿಸುತ್ತಾರೆ.
ಸರ್ ವಿಲಿಯಮ್ ಜಾನ್ಸ್, ವೇಮನರನ್ನು ‘ಭಾರತದ ಪ್ಲೇಟೋ’ ಎಂದು ಗೌರವಿಸಿದ್ದಾರೆ. ಅವರ ದೃಷ್ಟಿಯಲ್ಲಿ ವೇಮನ ವೇದಾಂತ ಪರಂಪರೆಯ ಜ್ಞಾನವನ್ನು ಮಾನವೀಯ ದೃಷ್ಟಿಯಿಂದ ಅರ್ಥೈಸಿದ ಮಹಾತ್ಮ. ವೇಮನರ ಪದ್ಯಗಳಲ್ಲಿ ‘ಅಂತರಂಗದ ಶುದ್ಧತೆ’ ಮತ್ತು ‘ನೈತಿಕ ಧರ್ಮ’ಗಳ ಕುರಿತ ಚಿಂತನೆ ಪಾಶ್ಚಾತ್ಯ ತತ್ತ್ವಜ್ಞರನ್ನು ಸಹ ಆಕರ್ಷಿಸಿತು.
ಮೇಜರ್ ಆರ್.ಎಂ. ಮ್ಯಾಕ್ಡೊನಾಲ್ಡ್ ಅವರ ಪ್ರಕಾರ, ‘ವೇಮನ ಕ್ರಾಂತಿಕವಿ‘. ಆತ ಸಮಾಜದ ಅನ್ಯಾಯ, ಜಾತ್ಯತೀತತೆ ಮತ್ತು ಧರ್ಮದ ಹೆಸರಿನಲ್ಲಿ ನಡೆಯುವ ಕಪಟಾಚಾರಗಳ ವಿರುದ್ಧ ಶಾಂತವಾದ ತತ್ತ್ವಕ್ರಾಂತಿ ನಡೆಸಿದರು. ಪಾಶ್ಚಾತ್ಯರು ಇದನ್ನು ‘Silent Revolution’ ಎಂದು ಕರೆದಿದ್ದಾರೆ.
ಎಲ್.ಡಿ. ಬಾರ್ನೆಟ್ ಅವರ ಅಭಿಪ್ರಾಯದಲ್ಲಿ, ವೇಮನ Teacher and Preacher. ಅವರ ತತ್ತ್ವವು ಸೋಷಿಯಲ್ ರಿಫಾರ್ಮ್ ಮತ್ತು ಆಧ್ಯಾತ್ಮಿಕ ಪ್ರಜ್ಞೆಯ ಮಧ್ಯದ ಸೇತುವೆಯಂತಿದೆ. ಆತ ಸತ್ಯದ ಹುಡುಕಾಟದಲ್ಲಿ ನಿಷ್ಠನಾಗಿದ್ದ ದಾರ್ಶನಿಕ.
ಇದನ್ನೂ ಓದಿ: MoMu Anjanappa Reddy Janapath- ಮೊ ಮು ಆಂಜನಪ್ಪ ರೆಡ್ಡಿಯವರ ಜನಪಥ | ಜನಸೇವೆಯ ಹಾದಿಯ ಪ್ರೇರಣಾದಾಯಕ ಕಥನ
ಕ್ರಿಶ್ಚಿಯನ್ ಮತಪ್ರಚಾರಕರ ದೃಷ್ಟಿಯಲ್ಲಿ ವೇಮನ
ಕ್ರಿಶ್ಚಿಯನ್ ಧರ್ಮಪ್ರಚಾರಕರಾದ ಡಬ್ಲ್ಯು.ಎಚ್. ಕ್ಯಾಂಪ್ಬೆಲ್ ಅವರು ವೇಮನನ ಜೀವನವನ್ನು ಆಳವಾಗಿ ಅಧ್ಯಯನ ಮಾಡಿ, ಆತ ತನ್ನ ಜೀವನದ ಕೊನೆಯಲ್ಲಿ ‘ಗುರುವಿನ ಸ್ಥಾನ’ ಗಳಿಸಿದ ಎಂದು ಬರೆದಿದ್ದಾರೆ. ಅವರ ಪ್ರಕಾರ ವೇಮನಡಿ ಸುತ್ತಲೂ ಆ ಕಾಲದಲ್ಲೇ ಒಂದು ಸಣ್ಣ ಸಂತ ಪರಂಪರೆ ಉಂಟಾಗಿತ್ತು. ವೇಮನ ಅನುಯಾಯಿಗಳ ಜೊತೆ ಸಂವಾದ ನಡೆಸುತ್ತ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿದ್ದರು.
ಇನ್ನೊಬ್ಬ ಪಾಶ್ಚಾತ್ಯ ಇತಿಹಾಸಕಾರ ಅಬ್ಬೆ ಡ್ಯೂಬಾಯ್ಸ್ ಅವರು 1806ರಲ್ಲಿ ಬರೆದ ಬರಹದಲ್ಲಿ ‘ಭಾರತದ ತತ್ತ್ವಶಾಸ್ತ್ರದ ಗಂಭೀರತೆಯನ್ನು ತಳಮಟ್ಟದ ಜನತೆಗೆ ತಲುಪಿಸಿದವರು ವೇಮನ’ ಎಂದು ಬರೆದಿದ್ದಾರೆ. ಅವರ ಪ್ರಕಾರ ವೇಮನ ಸಾಕ್ರಟೀಸ್ ನಂತರದ ಗ್ರೀಕ್ ತತ್ತ್ವಜ್ಞರನ್ನು ನೆನಪಿಸುವ ವ್ಯಕ್ತಿ.

ಭಾರತೀಯ ಚಿಂತನೆಗೆ ವೇಮನನ ಕೊಡುಗೆ
ವೇಮನರ ಬೋಧನೆಗಳು ಕೇವಲ ಧಾರ್ಮಿಕ ಗ್ರಂಥಗಳ ಉಪದೇಶವಲ್ಲ. ಅವು ಸಾಮಾಜಿಕ ಬೋಧನೆಗಳು. ಜಾತಿ, ಧರ್ಮ, ಭಾಷೆ, ಲಿಂಗ ಇತ್ಯಾದಿ ಅಂತರಗಳನ್ನು ಮೀರಿ ವಿಶ್ವಮಾನವೀಯತೆಯ ಸಂದೇಶ ಸಾರಿದ ಕವಿ ಆತ.
ವೇಮನನು ತಿರುವಳ್ಳುವರ್ (ತಮಿಳು), ಕಬೀರ್ (ಹಿಂದಿ), ಚೈತನ್ಯಸ್ವಾಮಿ (ಬಂಗಾಳಿ), ಬಸವಣ್ಣ ಮತ್ತು ಸರ್ವಜ್ಞ (ಕನ್ನಡ) ಇವರಿಗೆ ಸಮಾನ ತತ್ತ್ವದ ಚಿಂತನೆಗಳನ್ನು ಹೊಂದಿದ್ದ. ಎಲ್ಲರ ಬೋಧನೆಯ ಮೂಲಭಾವ ಸತ್ಯ, ಅಹಿಂಸೆ, ನೈತಿಕತೆ ಮತ್ತು ಮಾನವೀಯತೆಯು ವೇಮನನ ಪದ್ಯಗಳಲ್ಲೂ ಧ್ವನಿಸುತ್ತದೆ.
ಇದನ್ನೂ ಓದಿ: Sir C R Reddy- ಶಿಕ್ಷಣ ಶಿಲ್ಪಿ ಸರ್ ಸಿ.ಆರ್ ರೆಡ್ಡಿಯವರನ್ನು ಕನ್ನಡಿಗರಿಗೆ ಪರಿಚಯಿಸಿದ ಮೊ.ಮು. ಆಂಜನಪ್ಪ ರೆಡ್ಡಿ
ಸಿ.ಆರ್. ರೆಡ್ಡಿಯವರ ಪ್ರಶಂಸೆ
ಪ್ರಖ್ಯಾತ ವಿದ್ವಾಂಸ ಡಾ. ಕಟ್ಟಮಂಚಿ ರಾಮಲಿಂಗ ರೆಡ್ಡಿ (ಸಿ.ಆರ್. ರೆಡ್ಡಿ) ಅವರು ವೇಮನನನ್ನು ‘ಗಗನಮಂಡಲದ ಮೊದಲ ತಾರೆ’ ಎಂದು ಕರೆದಿದ್ದಾರೆ. ಅವರ ಪ್ರಕಾರ ವೇಮನ ಪಂಡಿತನಲ್ಲ, ಆದರೆ ಅಂತರ್ನಿಷ್ಠಿ ತುಂಬಿದ ತತ್ತ್ವಜ್ಞಾನಿ. ಮೂರು ಸಾಲುಗಳಲ್ಲಿ ಒಂದು ಸಂಪೂರ್ಣ ತತ್ತ್ವವನ್ನು ಸಂಗ್ರಹಿಸುವ ಸಾಮರ್ಥ್ಯವೇ ವೇಮನನ ಕವಿತ್ವದ ವಿಶಿಷ್ಟತೆ.
ಸಿ. ಆರ್ ರೆಡ್ಡಿಯವರ ಅಭಿಪ್ರಾಯದಲ್ಲಿ ವೇಮನ ‘ಪ್ರಕೃತಿಯ ಕವಿ‘, ಅವರ ಪದ್ಯಗಳು ಮಲಿನತೆಯಿಂದ ಮುಕ್ತವಾಗಿದ್ದು, ಶುದ್ಧಜಲದಂತೆ ನಿರ್ಮಲ. ಗ್ರಾಮೀಣ ಜೀವನ, ಪ್ರಕೃತಿ ದೃಶ್ಯಗಳು, ಜನಪದ ಉಪಮಾನಗಳು ಅವನ ಸಾಹಿತ್ಯದ ಅಡಿಪಾಯವಾಗಿವೆ.
ವೇಮನರ ಪದ್ಯಗಳ ಭಾಷಾಂತರ ಮತ್ತು ಜಾಗತಿಕ ಪ್ರಭಾವ
ವೇಮನರ ಕೃತಿಗಳು ಭಾರತದ ವಿವಿಧ ಭಾಷೆಗಳಾದ ತಮಿಳು, ಮಲಯಾಳಂ, ಕನ್ನಡ, ಸಂಸ್ಕೃತ, ಹಿಂದಿ ಮಾತ್ರವಲ್ಲದೇ ಪಾಶ್ಚಾತ್ಯ ಭಾಷೆಗಳಾದ ಇಂಗ್ಲೀಷ್, ಫ್ರೆಂಚ್, ಲ್ಯಾಟಿನ್ ಮುಂತಾದ ಯುರೋಪಿಯನ್ ಭಾಷೆಗಳಿಗೂ ಅನುವಾದಗೊಂಡಿವೆ.
ತಮಿಳು ನಾಯಕ ಅಣ್ಣಾದುರೈ ವೇಮನರ ಅನೇಕ ಪದ್ಯಗಳನ್ನು ತಮಿಳಿಗೆ ಅನುವಾದಿಸಿ, ಆತ ‘ಸರ್ವಧರ್ಮ ಸೌಹಾರ್ದದ ಸಂತ’ ಎಂದು ಬಣ್ಣಿಸಿದ್ದಾರೆ.ಮುಸ್ಲಿಂ ಲೇಖಕ ಮೀರ್ ಅಹ್ಮದ್ ಖಾನ್ ‘Musings of a Mystic’ ಎಂಬ ಆಂಗ್ಲ ಗ್ರಂಥದಲ್ಲಿ ವೇಮನನ ಭಾವಲೋಕವನ್ನು ವಿಶ್ಲೇಷಿಸಿದ್ದಾರೆ. ಇಷ್ಟು ವ್ಯಾಪಕವಾಗಿ ಅನುವಾದಗೊಂಡ ವೇಮನರ ತತ್ತ್ವವು ವಿಶ್ವಮಟ್ಟದ ಪ್ರತಿಷ್ಠೆಯ ಸಾಕ್ಷಿಯಾಗಿದೆ/
ವೇಮನರು ಕೇವಲ ತೆಲುಗು ಕವಿ ಅಲ್ಲ; ಆತ ಮಾನವತೆಯ ಕವಿ. ಆತ ಬದುಕಿನ ತತ್ತ್ವವನ್ನು ಬದುಕಿ ತೋರಿಸಿದ ಆಧ್ಯಾತ್ಮಿಕ ಗುರು. ಅವರ ಪದ್ಯಗಳಲ್ಲಿ ನಿತ್ಯಸತ್ಯಗಳಿವೆ. ಆ ಪದ್ಯಗಳು ಕಾಲ, ಭಾಷೆ, ಧರ್ಮಗಳ ಗಡಿಗಳನ್ನು ಮೀರಿ ವಿಶ್ವಸಂದೇಶ ಸಾರುತ್ತವೆ. ಆದ್ದರಿಂದಲೇ ವೇಮನ ಇಂದು ‘ವಿಶ್ವಕವಿ ವೇಮನ’ ಎಂಬ ಗೌರವಕ್ಕೆ ಪಾತ್ರನಾಗಿದ್ದಾರೆ. ಅವರ ಪದ್ಯಗಳು ಎಂದಿಗೂ ನಶಿಸದ ದೀಪದಂತೆ ಮಾನವ ಚಿತ್ತಗಳನ್ನು ಬೆಳಗಿಸುತ್ತಿವೆ.
ಲೇಖಕರು: ಮೊ ಮು ಆಂಜನಪ್ಪರೆಡ್ಡಿ



