
ಸಾಕಷ್ಟು ವಿಶಿಷ್ಠ ಮತ್ತು ವೈಭವಯುತವಾದ ಸಂಸ್ಕೃತಿ-ಪರಂಪರೆಯನ್ನು ಹೊಂದಿರುವ ರೆಡ್ಡಿಕುಲಸ್ಥರನ್ನು ಪೌರಾಣಿಕ ಐತಿಹ್ಯಗಳು ಸೂರ್ಯ ವಂಶಸ್ಥರೆಂದು ಬಿಂಬಿಸಿವೆ. ಅದಕ್ಕೆ ಪೂರಕ ಎಂಬಂತೆ ಹಲವು ರಟ್ಟರಾಜರು ಶಾಸನಗಳಲ್ಲಿ ತಮ್ಮನ್ನು ಸೂರ್ಯವಂಶಸ್ಥರೆಂದು ಉಲ್ಲೇಖಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಜನಸಮುದಾಯದ ಉಗಮ, ವೈಶಿಷ್ಟ್ಯಕ್ಕೆ ಪೂರಕವಾಗಿ ಅನೇಕ ಜನಪದ ಕತೆಗಳು, ದೃಷ್ಟಾಂತಗಳು, ಗಾದೆ ಮಾತುಗಳು ರಾಶಿರಾಶಿ ಸಿಗುತ್ತವೆ.
ಕೊಂಗುದೇಶದಲ್ಲಿ, ಅಂದರೆ ಇಂದಿನ ತಮಿಳುನಾಡಿನಲ್ಲಿ ರೆಡ್ಡಿಗಳು ಒಂಬತ್ತನೆ ಶತಮಾನದ ಅಂತ್ಯದವರೆಗೂ ಆಳಿದರೆಂದು ವಿದೇಶಿ ವಿದ್ವಾಂಸ ರೆವರೆಂಡ್ ಟಿ. ಫೌಲ್ಕಸ್ (Rev T. Foulkes) ತಿಳಿಸುತ್ತಾರೆ. ಕೊಂಗುದೇಶದ ಶಾಸನಗಳ ಪ್ರಕಾರವಾಗಿ ಚೋಳರ ದಂಗೆಗೆ ಮುಂಚೆ 28 ಮಂದಿ ರಾಜರು ಆಳಿದರು. ಇವರಲ್ಲಿ ಕೆಲವರು ಸೂರ್ಯ ವಂಶದವರು. ಮತ್ತೆ ಕೆಲವರು ಗಂಗೆ ವಂಶಸ್ಥರು.
ಇದನ್ನೂ ಓದಿ: History of the Rashtrakuta Empire-ರೆಡ್ಡಿಕುಲ ಹೆಮ್ಮೆಯ ಸಾಮ್ರಾಜ್ಯ ರಾಷ್ಟ್ರಕೂಟ
ರೆಡ್ಡಿಗಳು ‘ಕುಶ’ನ ವಂಶಸ್ಥರು
ಸೂರ್ಯ ವಂಶಸ್ಥರಲ್ಲಿ ರೆಡ್ಡಿ ಜನಾಂಗಕ್ಕೆ ಸೇರಿದವರು ರಾಜರಾಗಿ ಆಳಿದರು. ಇವರ ವಂಶಾವಳಿಯನ್ನು ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಇಬ್ಬರು ಮಕ್ಕಳಾದ ಲವ-ಕುಶರ ಪೈಕಿ ಎರಡನೇ ಮಗ ‘ಕುಶ’ನ ವಂಶಸ್ಥರೆಂದು ಗುರುತಿಸಿರುವುದರಿಂದ ರೆಡ್ಡಿ ಜನಾಂಗದವರು ಸೂರ್ಯ ವಂಶಸ್ಥರೆಂದೇ ದಾಖಲಿಸಲ್ಪಟ್ಟಿದ್ದಾರೆ. ಸೂರ್ಯವಂಶ ಭಾರತದ ಪ್ರಾಚೀನ ವಂಶಗಳಲ್ಲಿಯೇ ಅತ್ಯಂತ ಪ್ರಸಿದ್ಧ ವಂಶ. ಈ ವಂಶದ ಚರಿತ್ರೆಯನ್ನು ಅರಿಯಬೇಕೆಂದರೆ ಭಾರತದ ಸಾಂಪ್ರದಾಯಕ ಇತಿಹಾಸದತ್ತ ಅವಲೋಕನಕ್ಕಿಳಿಯಬೇಕು.
ಈ ದಿಸೆಯಲ್ಲಿ ರೆಡ್ಡಿಗಳು ಸೂರ್ಯವಂಶದ ಕುಶನ ಸಂತತಿಗಳೆಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಅದಕ್ಕೆ ಪೂರಕ ಎಂಬಂತೆ ಹಲವು ರಟ್ಟರಾಜರು ಶಾಸನಗಳಲ್ಲಿ ತಮ್ಮನ್ನು ಸೂರ್ಯವಂಶಸ್ಥರೆಂದು ಇತಿಹಾಸಕಾರರಾದ ಹೆಚ್.ಎ.ಸ್ಟೂವರ್ಟ್ (H A Stuart) ಹಾಗೂ ಡಾ. ಬರ್ನಲ್ ಕೊಂಚ ಸಮಗ್ರವಾಗಿಯೇ ರೆಡ್ಡಿ ಸಮುದಾಯದವರು ದ್ರಾವಿಡ ಮೂಲದವರೆಂದು ವಿಶ್ಲೇಸಿದ್ದಾರೆ.
ಹೆಚ್.ಎ.ಸ್ಟೂವರ್ಟ್ ತಿಳಿಸುವಂತೆ ‘ರೆಡ್ಡಿ ಎಂದರೆ ರಾಜರು. ಈ ರೆಡ್ಡಿ ಕುಲದವರು ದ್ರಾವಿಡ ವಂಶಕ್ಕೆ ಸೇರಿದವರು. ಕ್ರಿಸ್ತಶಕೆ ಪ್ರಥಮ ಭಾಗದಲ್ಲಿ ಚಾಲುಕ್ಯ, ಪಲ್ಲವ ಹಾಗೂ ಬಲ್ಲಾಳರಿಂದ ತಡೆಯಲ್ಪಟ್ಟ ಇವರು ಅನೇಕ ಕಡೆ ತಮ್ಮ ಕುರುಹುಗಳನ್ನು ಬಿಟ್ಟಿರುವರು. ವಾರಂಗಲ್ಲಿನ ಕಾಕತೀಯ ರಾಜ ಪ್ರತಾಪರುದ್ರನನ್ನು ಗಯಾಸುದ್ದೀನ್ ತುಘಲಕ್ ಬಂಧಿಸಿದ ಮೇಲೆ ಅನೇಕ ಕಡೆಗೆ ಸ್ವಂತಂತ್ರ ಪಾಳೇಗಾರರು ತಲೆ ಎತ್ತಿದರು. ಅವರೆಲ್ಲರೂ ರೆಡ್ಡಿ ಜನಾಂಗದವರು’ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: Karnataka Reddys Contribution – ಕನ್ನಡ ನಾಡು ನುಡಿಗೆ ರೆಡ್ಡಿಗಳ ಕೊಡುಗೆ
ಶ್ರೀರಾಮವಂಶ ಸಂಭೂತ ಸುಮಿತ್ರಪೌತ್ರ ರಾಷ್ಟ್ರಕೂಟ ರಾಜರ ವಂಶ
ತೆಲುಗು ನಾಡನ್ನಾಳಿದ ಸಾಮ್ರಾಜ್ಯಗಳಲ್ಲೊಂದಾದ ಕೊಂಡವೀಡು ಸಂಸ್ಥಾನದ ಪ್ರೋಲಯ ವೇಮಾರೆಡ್ಡಿಯು (ಕ್ರಿ.ಶ.1324-1353) ತಾನು ‘ಶ್ರೀರಾಮವಂಶ ಸಂಭೂತ ಸುಮಿತ್ರಪೌತ್ರ ರಾಷ್ಟ್ರಕೂಟ ರಾಜರ ವಂಶ’ದಲ್ಲಿ ಜನಿಸಿದವನೆಂದು ಬಳ್ಳಾರಿ ಜಿಲ್ಲೆ ಹಂಪಿಯ ನರಸಿಂಹಾಲಯದ ಶಾಸನದಲ್ಲಿ ಹೇಳಿಕೊಂಡಿದ್ದಾನೆಂದು ಮಹಾಮುನಿ ಕಾವ್ಯಕಂಠ ಗಣಪತಿಶಾಸ್ತ್ರಿ ಅವರು ‘ರೆಡ್ಡಿಕುಲ ನಿರ್ಣಯ ಚಂದ್ರಿಕ’ ತೆಲುಗು ಕೃತಿಯ ಪೀಠಿಕಾ ಭಾಗದಲ್ಲಿ ಪ್ರಸ್ತಾಪಿಸಿದ್ದಾರೆ.
ಸದರಿ ‘ರೆಡ್ಡಿಕುಲ ನಿರ್ಣಯ ಚಂದ್ರಿಕ’ ಕೃತಿಯೂ ದೋಮಕೊಂಡ ಸಂಸ್ಥಾನಾಧೀಶ್ವರನಾದ ರಾಜಾ ರಾಮೇಶ್ವರ ಬಹದ್ದೂರ್‌ನ ಆದೇಶದನ್ವಯ ಶೇಷಾದ್ರಿ ರಮಣ ಕವಿ ಮತ್ತು ಪೆದಮಂದಡಿ ವೆಂಕಟಕೃಷ್ಣ ಕವಿಗಳು ರೆಡ್ಡಿ ಕುಲದ ಉಗಮದ ಬಗ್ಗೆ ಪರಿಶೋಧನೆ ನಡೆಸಿ ರಚಿಸಿದ ಬಹು ಅಮೂಲ್ಯ ಕೃತಿಯಾಗಿದೆ.
ಅದೇ ರೀತಿ ಕೊಂಡವೀಡು ಸಂಸ್ಥಾನದ ಮತ್ತೊಬ್ಬ ರಾಜ ಪೆದಕೋಮಟಿ ವೇಮಾರೆಡ್ಡಿ (ಕ್ರಿ.ಶ.1402-1420) ಹಾಗೂ ಇನ್ನೊಂದು ರೆಡ್ಡಿರಾಜವಂಶವಾದ ಮಲ್ಯಾಲ ಸಂಸ್ಥಾನದ ಪೆದ್ದ ಹೋಬಲಮು ಸಿಂಗಾರೆಡ್ಡಿಯು ತಿರುವಳ್ಳೂರು ವೀರರಾಘವಸ್ವಾಮಿ ದೇವಾಲಯದಲ್ಲಿ ತಾವುಗಳು ‘ಸೂರ್ಯ ವಂಶಸ್ಥ’ರು ಅಂತಲೇ ಕೆತ್ತಿಸಿದ್ದಾರೆಂದು ಮಹಾಮುನಿ ಕಾವ್ಯಕಂಠ ಗಣಪತಿಶಾಸ್ತ್ರಿಗಳು ಪ್ರಸ್ತಾಪಿಸಿದ್ದಾರೆ.
ಇದನ್ನೂ ಓದಿ: first CM of the Reddys: ರೆಡ್ಡಿಕುಲ ಮೊದಲ ಮುಖ್ಯಮಂತ್ರಿಗಳು | ರೆಡ್ಡಿಗಳು ಹೆಮ್ಮೆಪಡುವಂತಹ ಅಮೋಘ ದಾಖಲೆ
ರೆಡ್ಡಿಗಳಲ್ಲಿದೆ ‘ಅಯೋಧ್ಯೆ’ ಶಾಖೆ
ಇದೆಲ್ಲಕ್ಕೂ ವಿಶೇಷವೆಂದರೆ ಅಚ್ಚ ಕನ್ನಡಿಗರು, ರೆಡ್ಡಿಕುಲ ಪೂರ್ವಿಕರೂ ಆದ ರಾಷ್ಟçಕೂಟರ ಹಲವು ಶಾಸನಗಳಲ್ಲಿ ‘ಸೂರ್ಯವಂಶ’ದ ಪ್ರಸ್ತಾಪವಾಗಿದೆ! ಜೊತೆಗೆ ರೆಡ್ಡಿ ಜನಾಂಗದ ಒಳ ಪಂಗಡ ಅಥವಾ ಶಾಖೆಗಳಲ್ಲಿ ‘ಅಯೋಧ್ಯೆ’ ಹೆಸರಿನ ಪ್ರತ್ಯೇಕ ಶಾಖೆಯೇ ಇದೆ. ಇದು ರೆಡ್ಡಿಗಳು ಸೂರ್ಯವಂಶಸ್ಥರು ಎಂಬುದಕ್ಕೆ ಸಾಮಾನ್ಯ ಸಾಕ್ಷಿ.
ಇನ್ನೂ ವಿಶೇಷವೆಂದರೆ ಹಳೇ ಮೈಸೂರು ಪ್ರಾಂತ್ಯದ ರೆಡ್ಡಿಗಳು ಇವತ್ತಿಗೂ ಶ್ರೀರಾಮನವಮಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ಒಟ್ಟಾರೆ ಸೂರ್ಯವಂಶ ಮೂಲ ರಟ್ಟ ಅಥವಾ ರೆಡ್ಡಿ ಸಮುದಾಯದವರು ಕೇವಲ ಪಶುಪಾಲನೆ ಮತ್ತು ಕೃಷಿಯಲ್ಲಿ ಪರಿಣಿತಿ ಹೊಂದಿರಲಿಲ್ಲ; ಯುದ್ದ ಕಲೆ ಹಾಗೂ ರಾಜ್ಯಭಾರ ನಡೆಸುವ ಚಾಣಾಕ್ಷತೆ ಹೊಂದಿದ ಕ್ಷತ್ರೀಯ ಗುಣವುಳ್ಳವರೂ ಆಗಿದ್ದರೆಂಬ ಅಂಶವನ್ನು ಮನವರಿಕೆ ಮಾಡಿಕೊಡುತ್ತದೆ.
ಲೇಖಕರು: ಮೊ ಮು ಆಂಜನಪ್ಪರೆಡ್ಡಿ (‘ರೆಡ್ಡಿ ಪರಂಪರೆ’ ಕೃತಿಯಿಂದ…)
ರೆಡ್ಡಿಗಳ ಸೂರ್ಯವಂಶ ಮೂಲವನ್ನು ತಿಳಿಯಲು ಈ ಕೆಳಗಿನ ಲಿಂಕ್ ಒತ್ತಿ ಮಿಸ್ ಮಾಡದೇ ವಿಡಿಯೋ ನೋಡಿ ಮತ್ತು ಇತರ ಬಂಧುಗಳಿಗೂ ಶೇರ್ ಮಾಡಿ… 👇👇👇
2 Comments