CultureHistory

Hemareddy Mallamma History- ಜಾತಿಗಳನ್ನು ಮೀರಿದ ಮಾಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ | ರೆಡ್ಡಿಕುಲ ಮಹಾಮಾತೆಯರು ಸರಣಿ-1

ಹೇಮರಡ್ಡಿ ಮಲ್ಲಮ್ಮ ಜಾತಿಗಳನ್ನು ಮೀರಿದ ಸಾಧ್ವಿ. ಹೆಣ್ಣುಕುಲದ ಧೀಶಕ್ತಿ. ಆದರ್ಶ ಸೊಸೆ, ಆದರ್ಶ ಮಡದಿ ಹೇಗಿರಬೇಕು ಎಂಬುದನ್ನು ಶತಮಾನಗಳ ಹಿಂದೆಯೇ ನಿರೂಪಿದ ಮಾದರಿ ಮಹಿಳೆ. ಜೀವನದ ಮೇಲಿನ ಅವಳ ಶ್ರದ್ಧೆ, ಸಾಮಾಜಿಕ ಕಳಕಳಿ, ಭಕ್ತಿಯನ್ನು ಕಂಡು ಸಾಕ್ಷಾತ್ ಶಿವನೇ ಮರಳಾಗಿದ್ದುಂಟು. ಹೀಗಾಗಿ ಮಲ್ಲಮ್ಮನನ್ನು ಒಂದು ಜಾತಿಗೆ, ಧರ್ಮಕ್ಕೆ ಸೀಮಿತವಾಗಿ ನೋಡುವುದೇ ಮಹಾಪರಾಧ. ಆಕೆ ಎಲ್ಲ ಜಾತಿ-ಧರ್ಮಿಯರ ಆದರ್ಶ. ವಿಶೇಷವಾಗಿ ಹೆಣ್ಣು ಸಂಕುಲಕ್ಕೆ ದಾರಿದೀಪ.

ಶ್ರೀಶೈಲ ಮಲ್ಲಿಕಾರ್ಜುನನನ್ನು ಆರಾಧ್ಯ ದೈವರಾಗಿ ಪೂಜಿಸುತ್ತ, ಹಲವಾರು ಪವಾಡಗಳನ್ನು ಮಾಡುತ್ತ, ಕೊನೆ ಕೊನೆಗೆ ತಾನೇ ದೈವವಾಗಿ ಅವತರಿಸಿದ ಹೇಮರಡ್ಡಿ ಮಲ್ಲಮ್ಮನ ಚರಿತ್ರೆ ಮೈನವಿರೇಳಿಸುವಂತಹದ್ದು. ಪುಣ್ಯ ಕ್ಷೇತ್ರ ಶ್ರೀಶೈಲದ ಸಮೀಪವಿರುವ ಸಿದ್ದಾಪುರ ಎಂಬ ಕುಗ್ರಾಮದ ವ್ಯವಸಾಯಸ್ಥ ಹಾಗೂ ದೈವಿಕ ಸಂಪನ್ನ ದಂಪತಿಗಳಾದ ಪದ್ಮಮ್ಮ ಹಾಗೂ ಹೇಮರಡ್ಡಿಯ ಮೂವರು ಗಂಡು ಮಕ್ಕಳಲ್ಲಿ ಹಿರಿಯವನಾದ ಭರಮ ರೆಡ್ಡಿಯ ಧರ್ಮಪತ್ನಿಯಾಗಿ ಮಲ್ಲಮ್ಮ ಆದರ್ಶ ದಾಂಪತ್ಯದ ಕನಸು ಕಾಣುತ್ತಾ ಸಿದ್ಧಾಪುರಕ್ಕೆ ಆಗಮಿಸುತ್ತಾಳೆ.

ಇದನ್ನೂ ಓದಿ: Reddy Suryavamsa- ರೆಡ್ಡಿಗಳು ಶ್ರೀರಾಮನ ವಂಶಸ್ಥರು | ಸಮಸ್ತರಿಗೂ ರಾಮನವಮಿ ಶುಭಾಶಯಗಳು

ದುರ್ದೈವವೆಂದರೆ ಗಂಡ ಭರಮರಡ್ಡಿ ಹುಟ್ಟಿನಿಂದಲೂ ಮಾನಸಿಕ ಅಸ್ವಸ್ಥನಾಗಿದ್ದು; ಸ್ವಂತ ನಿರ್ಧಾರ ಅಥವಾ ವಿಚಾರ ಮಾಡದಷ್ಟು ಅಸಮರ್ಥನಾಗಿದ್ದ. ಆದರೆ ಮಹಾಗರತಿ ಮಲ್ಲಮ್ಮ ಗಂಡನ ಬುದ್ಧಿ ವೈಕಲ್ಯ ಕಂಡು ಧೃತಿಗೆಡದೆ ಶ್ರೀಶೈಲ ಮಲ್ಲಿಕಾರ್ಜುನನ ಜೊತೆಗೆ ಪತಿ ಮತ್ತು ಅತ್ತೆ-ಮಾವಂದಿರನ್ನೂ ಪರಮದೈವವೆಂದು ಗೌರವಿಸುತ್ತಾ ಜೀವನ ಆರಂಭಿಸುತ್ತಾಳೆ. ಮಲ್ಲಮ್ಮನ ದೆಸೆಯಿಂದ ಇಡೀ ಮನೆ ನಂದನವನವಾಗುತ್ತದೆ. ಹೀಗಿರುವಾಗಲೇ ಕೆಲವು ವರ್ಷದ ನಂತರ ಹೇಮರಡ್ಡಿಯವರ ಇನ್ನಿಬ್ಬರು ಗಂಡು ಮಕ್ಕಳ ಮದುವೆಯಾಗಿ, ನಾಗಮ್ಮ ಮತ್ತು ಬಸಮ್ಮ ಎಂಬ ಮತ್ತಿಬ್ಬರು ಸೊಸೆಯಂದಿರು ಮನೆಗೆ ಬರುತ್ತಾರೆ.

Hemareddy Mallamma History

ಒರೆಗಿತ್ತಿಯರಾದ ನಾಗಮ್ಮ ಮತ್ತು ಬಸಮ್ಮ ಆರಂಭದಲ್ಲಿ ಅಕ್ಕ ಮಲ್ಲಮ್ಮನನ್ನೇ ಅನುಕರಿಸುತ್ತಾರಾದರೂ ಕ್ರಮೇಣ ಹಿರಿ ಸೊಸೆ ಮಲ್ಲಮ್ಮನಿಗೆ ಮನೆಯಲ್ಲಿ ಸಿಗುವ ಪ್ರಾತಿನಿಧ್ಯ ನಮಗೂ ಬೇಕು ಎಂದು ಹಠಕ್ಕೆ ಬಿದ್ದು ಮಲ್ಲಮ್ಮನ ಮೇಲೆ ಜಿದ್ದು ಸಾಧಿಸಲಾರಂಭಿಸುತ್ತಾರೆ. ಈ ಒರೆಗಿತ್ತಿಯರ ಸ್ತ್ರೀ ಸಹಜ ಮತ್ಸರ ಅತ್ತೆಗೆ ಇಲ್ಲಸಲ್ಲದ ಚಾಡಿ ಹೇಳುವ ಮಟ್ಟಿಗೆ ಬಿಗಡಾಯಿಸುತ್ತದೆ. ಆಗ ಅತ್ತೆ ಪದ್ಮಮ್ಮ ಕಿರಿ ಸೊಸೆಯಂದಿರ ಮಾತಿಗೆ ಒಗೊಟ್ಟು ಮಲ್ಲಮ್ಮನನ್ನು ಗಂಡನ ಸಮೇತ ನೆಡುತೋಪಿನಲ್ಲಿದ್ದ ಗುಡಿಸಲಿಗೆ ಅಟ್ಟುತ್ತಾಳೆ.

ಇದರಿಂದ ಕೋಪಗೊಳ್ಳುವ ಬದಲು ಮಲ್ಲಮ್ಮ ಇದು ಶ್ರೀಶೈಲ ಮಲ್ಲಿಕಾರ್ಜುನನೇ ನೀಡಿದ `ಆಜ್ಞೆ’ಯೆಂಬಂತೆ ಪ್ರೀತಿಯಿಂದ ಆಧರಿಸಿ ಗುಡಿಸಲಿಗೆ ಬಂದು ಜೀವನ ಪುನರ್ ಆರಂಭಿಸುತ್ತಾಳೆ. ಯಾವಾಗ ಮಲ್ಲಮ್ಮ ಗುಡಿಸಲಿಗೆ ಬಿಡಾರ ಕಿತ್ತಳೋ ಅಲ್ಲಿಗೆ ನಿತ್ಯವೂ ಹೇಮರೆಡ್ಡಿಯವರ ಮನೆಗೆ ಬರುತ್ತಿದ್ದ ಜಂಗಮರು ಮಲ್ಲಮ್ಮನ ಗುಡಿಸಲಿನತ್ತ ಮುಖ ಮಾಡಿದರು.

ಇಷ್ಟಾದರೂ ಒರೆಗಿತ್ತಿಯರಿಗೆ ಸಮಾಧಾನವಾಗುವುದಿಲ್ಲ. `ಮಲ್ಲಮ್ಮ ಗುಡಿಸಲಿನಲ್ಲಿ ಜಂಗಮರ ಜೊತೆ ಲಲ್ಲೆಗರೆಯುತ್ತಾಳೆ’ ಎಂದು ವೃಥಾ ಆರೋಪ ಹೊರಿಸಿ ಅತ್ತೆಯ ಕಿವಿ ಕಚ್ಚುತ್ತಾರೆ. ಇದರಿಂದ ವ್ಯಗ್ರಳಾದ ಅತ್ತೆ ಪದ್ಮಮ್ಮ ತನ್ನ ಮಗ ಭರಮರಡ್ಡಿಗೆ ಹೆಂಡತಿಯ `ವ್ಯಭಿಚಾರ’ದ ಕಥೆ ಹೇಳಿ ಹದ್ದುಬಸ್ತಿನಲ್ಲಿಡುವಂತೆ ಗದರಿಸುತ್ತಾಳೆ.

Hemareddy Mallamma History

ಇದನ್ನೂ ಓದಿ: Karnataka Reddys Contribution – ಕನ್ನಡ ನಾಡು ನುಡಿಗೆ ರೆಡ್ಡಿಗಳ ಕೊಡುಗೆ

ಭರಮರಡ್ಡಿ ಬುದ್ಧಿವೈಕಲ್ಯನಾಗಿದ್ದರೂ ಅಮ್ಮನ ಮಾತಿನಿಂದ ರೊಚ್ಚಿಗೆದ್ದು ಮಲ್ಲಮ್ಮನನ್ನು ಕೊಂದು ಹಾಕುವುದಾಗಿ ಹರಿತವಾದ ಕತ್ತಿ ಹಿಡಿದುಕೊಂಡು ಗುಡಿಸಲಿಗೆ ದೌಡಾಯಿಸುತ್ತಾನೆ. ಹಾಗೆ ರೊಚ್ಚಿನಿಂದ ಬಂದವನಿಗೆ ಗುಡಿಸಲಿನಲ್ಲಿ ದೊಡ್ಡದೊಂದು ಅಚ್ಚರಿ ಕಾದಿತ್ತು. ಗುಡಿಸಲಿನಲ್ಲಿ ಮಲ್ಲಮ್ಮಳು ಶಿವಸ್ವರೂಪಿಯಾದ ಸಾಕ್ಷಾತ್ ಶ್ರೀಶೈಲ ಮಲ್ಲಿಕಾರ್ಜುನನೊಂದಿಗೆ ಸಂಭಾಷಿಸುವುದನ್ನು ಕಂಡು ತನ್ನ ಕಣ್ಣನ್ನು ತಾನೇ ನಂಬದಾಗುತ್ತಾನೆ.

ಮುಂದೆ ಶಿವದರ್ಶನದಿಂದ ಭರಮರಡ್ಡಿಯ ಬುದ್ಧಿವೈಕಲ್ಯ ಅಳಿದು, ತಾನೂ ಪತ್ನಿಯಂತೆ ಪರಮ ದೈವಭಕ್ತನಾಗುತ್ತಾನೆ. ಇತ್ತ ಎಷ್ಟೇ ಪಿತೂರಿ ನಡೆಸಿದರೂ ಮಲ್ಲಮ್ಮನ ಕೈಯೇ ಮೇಲಾಗುತ್ತಿರುವುದರಿಂದ ಕುಪಿತಗೊಂಡ ಒರೆಗಿತ್ತಿಯರು ಅದೊಂದು ದಿನ ಮನೆಗೆ ಬಂದ ಜಂಗಮನಿಗೆ ಅತ್ತೆಯೊಂದಿಗೆ ಸೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೀದಿಗೆ ತಳ್ಳಿಬಿಡುತ್ತಾರೆ. ಬೀದಿಗೆ ಬಿದ್ದ ಜಂಗಮ ಕೋಪದಿಂದ ಕುದಿಯುತ್ತಾ ಮೂವರಿಗೂ ಉಗ್ರ ರೋಗ ತಗಲುವಂತೆ ಶಾಪ ಕೊಟ್ಟು ಕಣ್ಮರೆಯಾಗುತ್ತಾನೆ.

Hemareddy Mallamma History

ಒರೆಗಿತ್ತಿಯರು ಮತ್ತು ಅತ್ತೆ ಜಂಗಮನ ಶಾಪಕ್ಕೆ ಗುರಿಯಾದ ವಿಚಾರ ತಿಳಿದು ನೊಂದ ಮಲ್ಲಮ್ಮ ಶಾಪವಿಮುಕ್ತಿಗಾಗಿ ಶ್ರೀಶೈಲ ಮಲ್ಲಿಕಾರ್ಜುನನಲ್ಲಿ ಘೋರ ತಪಗೈದು ಶಾಪದಿಂದ ಮುಕ್ತಿ ಮಾಡುತ್ತಾಳೆ. ಅಲ್ಲಿಂದ ಮಲ್ಲಮ್ಮ ಮನೆಯಲ್ಲಿ ಮಾತ್ರವಲ್ಲದೆ ಊರು, ಕೇರಿ ಹಾಗೂ ನೆರೆಗ್ರಾಮಗಳಲ್ಲೂ ತನ್ನ ಪವಾಡ ಮತ್ತು ಶಿವಭಕ್ತಿಯಿಂದ ಲೋಕ ಮಾನ್ಯಳಾಗುತ್ತಾಳೆ.

ಇವತ್ತಿಗೂ ಹೇಮರಡ್ಡಿ ಮಲ್ಲಮ್ಮ ಅಂದ ತಕ್ಷಣ ಪರಮಭಕ್ತಿ ಹಾಗೂ ಸಾಧ್ವಿತನ ಕಣ್ಣಿಗೆ ಕಟ್ಟುತ್ತದೆ. ನಮ್ಮ ಜನಪದ ಸಾಹಿತ್ಯದಲ್ಲಿ ಸಿಂಹಪಾಲು ಪಡೆದಿರುವ ಮಲ್ಲಮ್ಮ ತನ್ನ ಗರತಿತನ ಹಾಗೂ ಪವಾಡಗಳಿಂದ ಮನೆಮಾತಾದ ಮಹಾಶರಣೆ. ರೆಡ್ಡಿ ಜನರ ಪಾಲಿಗೆ ಆಕೆ ಸಾಕ್ಷಾತ್ ದೈವ. ಅಷ್ಟೇ ಅಲ್ಲ ನಮ್ಮ ಹೆಣ್ಣು ಮಕ್ಕಳಿಗೆ ಮಾದರಿ ಮಹಿಳೆಯೂ ಹೌದು.

ಇದನ್ನೂ ಓದಿ: first CM of the Reddys: ರೆಡ್ಡಿಕುಲ ಮೊದಲ ಮುಖ್ಯಮಂತ್ರಿಗಳು | ರೆಡ್ಡಿಗಳು ಹೆಮ್ಮೆಪಡುವಂತಹ ಅಮೋಘ ದಾಖಲೆ

`ಹುಟ್ಟಿದರೆ ಮಲ್ಲಮ್ಮನಂತಹ ಮಗಳು ಹುಟ್ಟಬೇಕು, ಸಿಕ್ಕರೆ ಮಲ್ಲಮ್ಮನಂತಹ ಸೊಸೆ ಸಿಗಬೇಕು, ಮಲ್ಲಮ್ಮನಂತಹ ಮಹಾಸತಿ ಪತ್ನಿಯಾಗಿ ದೊರೆಯಬೇಕು’ ಎಂದು ಉತ್ತರ ಕರ್ನಾಟಕದ ಮಂದಿ ತಮ್ಮ ನಿತ್ಯಬದುಕಿನಲ್ಲಿ ಮಲ್ಲಮ್ಮಳನ್ನು ಉದಾಹರಿಸುತ್ತಾ ಆದರ್ಶ ಬದುಕನ್ನು ಕಲ್ಪಿಸಿಕೊಳ್ಳುವ ಪರಿಪಾಠವಿದೆ. ಮಲ್ಲಮ್ಮ ಆ ಮಟ್ಟಿಗೆ ಜನರ ಬದುಕಿನ ಸ್ಫೂರ್ತಿಯಾಗಿ ಹೋಗಿದ್ದಾಳೆ. ಆಕೆಯನ್ನು `ಆಕೆ-ಈಕೆ’ ಎಂದೇ ಏಕವಚನದಲ್ಲಿ ಕರೆದು ಜನ ತಮ್ಮ ಭಕ್ತಿ ಮತ್ತು ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ತನ್ನ ಪತಿವ್ರತೆತನದಿಂದ ಈ ಶರಣೆ ಕೇವಲ ಸ್ಪೂರ್ತಿ ಮಾತ್ರವಲ್ಲ ದೈವವೇ ಆಗಿರುವುದು ವಿಶೇಷ.

ಜನರ ತನುಮನದಲ್ಲಿ ದೈವವಾಗಿ, ಸ್ಪೂರ್ತಿಯಾಗಿ, ಮಾದರಿ ಮಹಿಳೆಯಾಗಿ ನೆಲೆಸಿರುವ ಮಲ್ಲಮ್ಮನಿಗೆ ಒಂದು ದೇಗುಲ ಮಾದರಿಯ ಸ್ಮಾರಕ ಕಟ್ಟಬೇಕು ಎನ್ನುವುದು ಅನೇಕರ ಅಭಿಲಾಷೆಯಾಗಿತ್ತು. ಜನರ ಒತ್ತಾಸೆಯ ಫಲವಾಗಿ ಕರ್ನಾಟಕ ರಾಜ್ಯದ ವೀರಶೈವ ರಡ್ಡಿ ಸಮಾಜದ ಅಧ್ಯಕ್ಷರಾಗಿದ್ದ ವೈ.ಬಿ.ಆಲೂರ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಡಾ.ಬಿ.ಎಲ್. ಪಾಟೀಲ್ ಅವರು ಎಂಡೊಮೆಂಟ್ ಖಾತೆ ಹೈದರಾಬಾದ್‌ಕ್ಕೆ ಅರ್ಜಿ ಸಲ್ಲಿಸಿ ಮಲ್ಲಮ್ಮನ ಕಣ್ಣಿರಿನ ಸ್ಥಳದ ಸುತ್ತಮುತ್ತ ಎರಡು ಎಕರೆ ಜಮೀನನ್ನು ತೆಗೆದುಕೊಂಡು ಸಮಾಜದ ವತಿಯಿಂದ ಹೇಮರಡ್ಡಿ ಮಲ್ಲಮ್ಮನ ಗುಡಿ ಕಟ್ಟಿಸಲಾಗಿದೆ.

Hemareddy Mallamma History

ದೇಗುಲ ನಿರ್ಮಿಸುವ ಹಿನ್ನೆಲೆಯಲ್ಲಿ ಶ್ರೀಶೈಲ ಜಗದ್ಗುರು ಶ್ರೀ ಶ್ರೀ ಶ್ರೀ 1008 ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳನ್ನು ಕೇಳಲಾಗಿ ಶ್ರೀಶೈಲ ಟ್ರಸ್ಟ್ ಸಮಿತಿಯ ಕಾರ್ಯಧಿಕಾರಿಗಳಾಗಿದ್ದ ಕೃಷ್ಣಾರೆಡ್ಡಿ ಮೂಲಕ ಮಲ್ಲಮ್ಮನ ಕಣ್ಣೀರು ಸ್ಥಳ ಆಂಧ್ರಪ್ರದೇಶದ ಮುಜರಾಯಿ ಇಲಾಖೆಗೆ ಸೇರಿದೆ ಎಂದು ತಿಳಿಯಿತು. ಹೀಗಾಗಿ 1998ರಲ್ಲಿ ಮಲ್ಲಮ್ಮನ ಗುಡಿ ಕಟ್ಟಲು ಅನುಮತಿ ಕೇಳಿ ಆಂಧ್ರಪ್ರದೇಶದ ಮುಜರಾಯಿ ಇಲಾಖೆಗೆ ಅರ್ಜಿ ಸಲ್ಲಿಸಿ ಅಧಿಕೃತ ಅನುಮತಿ ಪಡೆಯಲಾಯಿತು. ಮುಂದೆ ಹಲವರ ಸಹಕಾರ, ಸಲಹೆ, ಸಹಾಯದೊಂದಿಗೆ ಸುಮಾರು ಒಂದು ಕೋಟಿ ರೂಪಾಯಿಗಿಂತಲೂ ಹೆಚ್ಚು ವೆಚ್ಚದಲ್ಲಿ ಭವ್ಯವಾದ ದೇವಾಲಯ ನಿರ್ಮಿಸಲಾಯಿತು.

ಸಮಾಜದ ಜನರ ಹಾಗೂ ಮುಖಂಡರು ಮತ್ತು ಕರ್ನಾಟಕ ಸರ್ಕಾರದ ಉದಾರ ಸಹಾಯದಿಂದ ಹತ್ತು ವರ್ಷಗಳ ಸತತ ಪ್ರಯತ್ನದ ಫಲವಾಗಿ ಮಲ್ಲಮ್ಮನ ಭವ್ಯ ಭವನ ಎದ್ದು ನಿಂತಿದೆ. 2010ರ ಮೇ 26ನೇ ತಾರೀಖು ಉದ್ಘಾಟನೆಯಾದ ಸದರಿ ದೇಗುಲ ನಿರ್ಮಾಣಕ್ಕೆ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ತಮಿಳು ನಾಡಿನ ಕುಲಬಾಂಧವರು ಉದಾರ ನೆರವು ನೀಡಿ ದ್ದಾರೆ. ಕಳೆದ 600 ವರ್ಷ ಗಳಿಂದ ಮಲ್ಲಮ್ಮನ ಕಣ್ಣೀರು ಕ್ಷೇತ್ರದಲ್ಲಿ ನಾಲ್ಕು ಹಾಸುಗಲ್ಲುಗಳ ಒಂದು ಸಣ್ಣ ಗುಡಿ ಮಾತ್ರ ಇತ್ತು.

ಶ್ರೀಶೈಲ ಹೇಮರಡ್ಡಿ ಮಲ್ಲಮ್ಮನ ದೇವಾಲಯ

ಇದನ್ನೂ ಓದಿ: History of the Rashtrakuta Empire-ರೆಡ್ಡಿಕುಲ ಹೆಮ್ಮೆಯ ಸಾಮ್ರಾಜ್ಯ ರಾಷ್ಟ್ರಕೂಟ

ಈಗ ಅಲ್ಲಿ ಸುಂದರ ಭವ್ಯ ದೇವಾಲಯವಾಗಿದೆ. ರಸ್ತೆ, ವಿದ್ಯುತ್, ಕುಡಿಯುವ ನೀರು ಎಲ್ಲಾ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ನಿತ್ಯ ನೂರಾರು ಭಕ್ತರು ಇಲ್ಲಿಗೆ ದರ್ಶನ ನೀಡುತ್ತಾರೆ. ಇದು ರೆಡ್ಡಿ ಜನಾಂಗದ ಭಕ್ತಿಯ ಕೇಂದ್ರ ಮಾತ್ರವಾಗಿರದೇ ಭಾವೈಕ್ಯದ ಸಂಗಮ ಕ್ಷೇತ್ರವೂ ಆಗಿದೆ. ಹಲವು ಮಹನೀಯರ ಶ್ರಮ, ಶೃದ್ಧೆಯಿಂದ ನಿರ್ಮಾಣ ಗೊಂಡಿರುವ ಶ್ರೀಶೈಲ ಹೇಮರಡ್ಡಿ ಮಲ್ಲಮ್ಮನ ದೇವಾಲಯ ಇವತ್ತು ಸುಪ್ರಸಿದ್ಧ ಯಾತ್ರಾ ಸ್ಥಳವಾಗಿರುವುದು ಗಮನಾರ್ಹ!

Hemareddy Mallamma

ಪ್ರತಿವರ್ಷ ಮೇ 10ನೇ ತಾರೀಖು ಮಹಾಶರಣೆ, ಮಹಾಸಾಧ್ವಿ ಮಲ್ಲಮ್ಮನ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಮಲ್ಲಮ್ಮ ಇಡೀ ಹೆಣ್ಣು ಕುಲಕ್ಕೇ ಮಾದರಿಯಾದ ಶರಣೆಯಾಗಿರುವುದರಿಂದ ಆಕೆಯ ಜಯಂತಿಯನ್ನು ರಜಾರಹಿತ ಸರ್ಕಾರಿ ಜಯಂತಿಯನ್ನಾಗಿ ಆಚರಿಸುವಂತಾಗಬೇಕು. ಸಮಾಜದ ಪ್ರತಿಯೊಬ್ಬ ನಾಗರಿಕರೂ ಮಲ್ಲಮ್ಮನಿಗೆ ಕೃತಜ್ಞರಾಗುವ ಮೂಲಕ ಆರೋಗ್ಯಕರ ಸಮಾಜ ಕಟ್ಟಬೇಕಿದೆ.

ಲೇಖಕರು: ಮೊ ಮು ಆಂಜನಪ್ಪ ರೆಡ್ಡಿ (‘ರೆಡ್ಡಿ ಪರಂಪರೆ’ ಕೃತಿಯಿಂದ ಆಯ್ದ ಭಾಗ)

Leave a Reply

Your email address will not be published. Required fields are marked *

Related Articles

Back to top button
error: Content is protected !!