News

Lavish Wedding: ಅದ್ಧೂರಿ ಹೆಸರಿನ ದುಂದುವೆಚ್ಚದ ಮದುವೆಗೆ ಕಡಿವಾಣ ಬೀಳಲಿ

ಸರಳತೆಯಲ್ಲೇ ಸೌಂದರ್ಯ | ಸಂಭ್ರಮಕ್ಕಿಂತ ಜೀವನ ಮುಖ್ಯ

Lavish Wedding: ಅದ್ದೂರಿ ಮತ್ತು ದುಂದುವೆಚ್ಚದ ಮದುವೆಗಳ ಪರಿಣಾಮ, ಸಾಲದ ಭಾರ, ಆಸ್ತಿ ಮಾರಾಟದ ದುಷ್ಪರಿಣಾಮಗಳ ಕುರಿತು ವಿವರವಾದ ಲೇಖನ ಇಲ್ಲಿದೆ…

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿಯೂ ಅತ್ಯಂತ ಮಹತ್ವದ ಕ್ಷಣ. ಇದು ಕೇವಲ ಒಂದು ಆಚರಣೆ ಅಲ್ಲ; ಎರಡು ಹೃದಯಗಳ, ಎರಡು ಕುಟುಂಬಗಳ, ಎರಡು ಸಂಸ್ಕೃತಿಗಳ ಸಮ್ಮಿಲನ. ಮದುವೆ ಎಂದರೆ ಸಂತೋಷ, ಆತ್ಮೀಯತೆ, ಆಶೀರ್ವಾದ ಮತ್ತು ಹೊಸ ಜೀವನದ ಆರಂಭ.

ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ಎಂಬ ಪವಿತ್ರ ಸಂಭ್ರಮವು ಅದ್ಧೂರಿ ಹೆಸರಿನ ದುಂದುವೆಚ್ಚದ ಕಾರ್ಯಕ್ರಮವಾಗಿ ರೂಪಾಂತರಗೊಂಡಿರುವುದು ಚಿಂತಾಜನಕ ಸಂಗತಿ.

ಇದನ್ನೂ ಓದಿ: Kondaveedu Reddy Dynasty: ಧರ್ಮರಕ್ಷಣೆಗೆ ಕತ್ತಿ ಹಿಡಿದ ಕೊಂಡವೀಡು ಚಕ್ರವರ್ತಿಗಳು

ಅರ್ಥ ಕಳೆದುಕೊಳ್ಳುತ್ತಿರುವ ಮದುವೆ!

ಹಳೆಯ ಕಾಲದಲ್ಲಿ ಮದುವೆಗಳು ಸರಳವಾಗಿ ನಡೆಯುತ್ತಿತ್ತು. ಮನೆಯ ಅಂಗಳದಲ್ಲಿ ಮಂಟಪ, ಬಂಧು-ಬಳಗದ ಸಹಕಾರ, ಊರವರ ಆಶೀರ್ವಾದ ಇವೆಲ್ಲವೇ ಮದುವೆಯ ಸೌಂದರ್ಯ. ಆರ್ಭಟ ಕಡಿಮೆ, ಆತ್ಮೀಯತೆ ಹೆಚ್ಚು. ಖರ್ಚು ಕಡಿಮೆ, ಸಂತೋಷ ಹೆಚ್ಚು.

ಆದರೆ ಈಗ ಮದುವೆ ಎಂದರೆ ಲಕ್ಷಾಂತರ ಅಥವಾ ಕೋಟ್ಯಂತರ ರೂಪಾಯಿ ವೆಚ್ಚ ಮಾಡುವ ಸ್ಪರ್ಧೆಯಂತಾಗಿದೆ. ಯಾರು ಹೆಚ್ಚು ಅದ್ಧೂರಿಯಾಗಿ ಮದುವೆ ಮಾಡುತ್ತಾರೆ ಎಂಬುದೇ ಮುಖ್ಯವಾಗುತ್ತಿದೆ.

ಮದುವೆಯ ಮೂಲ ಅರ್ಥವು ಇಬ್ಬರ ಜೀವನ ಸಂಗಮ. ಆದರೆ ಇಂದಿನ ಸಂದರ್ಭದಲ್ಲಿ ವೇದಿಕೆಯ ಅಲಂಕಾರ, ಥೀಮ್ ಡೆಕೊರೇಷನ್, ಡಿಸೈನರ್ ಉಡುಪು, ಡೆಸ್ಟಿನೇಷನ್ ವೆಡ್ಡಿಂಗ್, ಪ್ರೀ-ವೆಡ್ಡಿಂಗ್ ಫೋಟೋಶೂಟ್ ಇವುಗಳೇ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿವೆ. ಸಂಭ್ರಮಕ್ಕಿಂತ ಪ್ರದರ್ಶನವೇ ಹೆಚ್ಚಾಗಿದೆ.

ಇದನ್ನೂ ಓದಿ: Reddy Heritage – ರೆಡ್ಡಿ ಪರಂಪರೆಯ ಸೊಗಡು: ಮಣ್ಣಿನ ಸುಗಂಧದಿಂದ ಸಾಮ್ರಾಜ್ಯದ ಶಿಖರದ ವರೆಗೆ

ಪ್ರತಿಷ್ಠೆಯ ಹೆಸರಿನಲ್ಲಿ ದುಂದುವೆಚ್ಚ

ಉಳ್ಳವರ ಪಾಲಿಗೆ ಮದುವೆ ಪ್ರತಿಷ್ಠೆಯ ಸಂಕೇತವಾಗಿದೆ. ತಮ್ಮ ಆರ್ಥಿಕ ಸಾಮರ್ಥ್ಯವನ್ನು ತೋರಿಸಲು ದೊಡ್ಡ ಹೋಟೆಲ್‌ಗಳು, ಐದು ದಿನಗಳ ಕಾರ್ಯಕ್ರಮ, ನೂರಾರು ಅತಿಥಿಗಳು, ವೈಭವಯುತ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ಈ ಪ್ರವೃತ್ತಿ ಮಧ್ಯಮ ಹಾಗೂ ಕೆಳವರ್ಗದ ಕುಟುಂಬಗಳ ಮೇಲೆ ಒತ್ತಡ ತಂದಿದೆ.

‘ಇವರ ಮದುವೆ ಇಷ್ಟು ಅದ್ಧೂರಿಯಾಗಿ ಆಯಿತು, ನಮ್ಮದು ಕಡಿಮೆಯಾಗಬಾರದು’ ಎಂಬ ಮನೋಭಾವ ಹೆಚ್ಚಾಗಿದೆ. ಪರಿಣಾಮವಾಗಿ ಸಾಲ ಮಾಡಿ ಮದುವೆ ಮಾಡುವುದು ಸಾಮಾನ್ಯವಾಗುತ್ತಿದೆ. ಬ್ಯಾಂಕ್ ಸಾಲ, ಚಿನ್ನದ ಸಾಲ, ಖಾಸಗಿ ಸಾಲ ಹೀಗೆ ಅನೇಕ ರೀತಿಯ ಸಾಲಗಳಲ್ಲಿ ಕುಟುಂಬಗಳು ಸಿಲುಕುತ್ತಿವೆ. ಮದುವೆಯ ನಂತರ ಸಾಲ ತೀರಿಸುವ ಕಷ್ಟ ಜೀವನದ ಮೊದಲ ಹಂತದಲ್ಲೇ ಒತ್ತಡ ಉಂಟುಮಾಡುತ್ತದೆ.

ಉತ್ತರ ಭಾರತದ ಅದ್ಧೂರಿ ಮದುವೆ 🆚 ಕರ್ನಾಟಕದ ಸರಳ ಸಂಪ್ರದಾಯ ಮದುವೆ

ಇದನ್ನೂ ಓದಿ: Savadatti Reddy Kings History: ಕನ್ನಡ ನಾಡಿನ ಹೆಮ್ಮೆ ಸವದತ್ತಿ ರೆಡ್ಡಿರಾಜರ ಅಜರಾಮರ ಚರಿತ್ರೆ

ಆಸ್ತಿ ಮಾರಾಟದ ಹುಚ್ಚುತನ

ಕೆಲವರು ಮದುವೆಗಾಗಿ ತಮ್ಮ ಜಮೀನು, ಮನೆ ಅಥವಾ ಆಸ್ತಿ ಮಾರಾಟ ಮಾಡುತ್ತಾರೆ. ವರ್ಷಗಳ ಪರಿಶ್ರಮದಿಂದ ಸಂಪಾದಿಸಿದ ಆಸ್ತಿಯನ್ನು ಒಂದು ದಿನದ ಕಾರ್ಯಕ್ರಮಕ್ಕಾಗಿ ಮಾರಾಟ ಮಾಡುವುದು ಎಷ್ಟು ಸಮಂಜಸ? ಮದುವೆ ಸಂಭ್ರಮ ಎರಡು ದಿನ ಮಾತ್ರ. ಆದರೆ ಮಾರಾಟ ಮಾಡಿದ ಆಸ್ತಿ ಶಾಶ್ವತವಾಗಿ ಕೈ ತಪ್ಪುತ್ತದೆ.

ನಗರ ಪ್ರದೇಶಗಳಲ್ಲಿ ಜಮೀನುಗಳ ಬೆಲೆ ದಿನೇದಿನೇ ಏರುತ್ತಿದೆ. ಹಿಂದೆ ಕಡಿಮೆ ಬೆಲೆಗೆ ಮಾರಾಟ ಮಾಡಿದ ಜಮೀನುಗಳು ಇಂದು ಕೋಟಿ ಕೋಟಿ ಬೆಲೆ ಬಾಳುತ್ತಿವೆ. ಆಸ್ತಿಯನ್ನು ಮಾರಾಟ ಮಾಡುವ ಬದಲು ಅದನ್ನೇ ಮಗಳ ಹೆಸರಿಗೆ ಬರೆದು ಕೊಟ್ಟಿದ್ದರೆ ಅದು ಅವಳಿಗೆ ಶಾಶ್ವತ ಭದ್ರತೆಯಾಗುತ್ತಿತ್ತು. ಆಸ್ತಿ ಉಳಿದಿದ್ದರೆ ಭವಿಷ್ಯದಲ್ಲಿ ಸಂಕಷ್ಟ ಬಂದಾಗ ಅದು ಆಧಾರವಾಗುತ್ತಿತ್ತು.

ಇದನ್ನೂ ಓದಿ: 39 Reddikulu Shakhegalu- ದಾಖಲೆಗೆ ಸಿಕ್ಕ 39 ರೆಡ್ಡಿಕುಲ ಶಾಖೆಗಳು – ವೈವಿಧ್ಯತೆಯೊಳಗಿನ ಐತಿಹಾಸಿಕ ರೆಡ್ಡಿ ಪರಂಪರೆ

ಆಡಂಭರದ ಮದುವೆಗಳ ಒಳಗಿರುವ ಸಮಸ್ಯೆಗಳು

ಮೇಲೆ ನೋಟಕ್ಕೆ ಅದ್ಧೂರಿ ಮದುವೆಗಳು ಕಣ್ಣಿಗೆ ಹಬ್ಬವಾಗಿರಬಹುದು. ಆದರೆ ಒಳಗೆ ಅನೇಕ ಅಸಮರ್ಪಕತೆಗಳು ಇರುತ್ತವೆ. ಆರತಕ್ಷತೆ ವೇಳೆ ಗಂಟಗAಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕು. ಹಿರಿಯ ನಾಗರಿಕರಿಗೆ ಇದು ತುಂಬಾ ಕಷ್ಟ.

ಕೆಲವೊಮ್ಮೆ ಸರತಿ ಸಾಲು ನಿಯಂತ್ರಿಸಲು ಬೌನ್ಸರ್‌ಗಳನ್ನು ನೇಮಿಸಲಾಗುತ್ತದೆ. ಮದುವೆ ಎನ್ನುವುದು ಪ್ರೀತಿಯಿಂದ, ಸ್ವಚ್ಛಂದವಾಗಿ ನಡೆಯಬೇಕಾದ ಕಾರ್ಯಕ್ರಮ. ಆದರೆ ಭದ್ರತಾ ಸಿಬ್ಬಂದಿಯ ಮಧ್ಯೆ ನಡೆಯುವ ಕಾರ್ಯಕ್ರಮವು ಸಂಭ್ರಮಕ್ಕಿಂತ ಒತ್ತಡವನ್ನುಂಟು ಮಾಡುತ್ತದೆ.

ಕೆಲ ಮದುವೆಗಳಲ್ಲಿ ಅತಿಥಿಗಳ ಸಂಖ್ಯೆ ಹೆಚ್ಚು ಇರುವುದರಿಂದ ಆತ್ಮೀಯತೆ ಕಾಣಿಸುವುದಿಲ್ಲ. ವಧು-ವರರಿಗೆ ಅತಿಥಿಗಳೊಂದಿಗೆ ಸರಿಯಾಗಿ ಮಾತನಾಡಲು ಸಮಯವೇ ಸಿಗುವುದಿಲ್ಲ. ಫೋಟೋ ತೆಗೆದುಕೊಳ್ಳುವುದು, ವೇದಿಕೆಯಲ್ಲಿ ನಿಲ್ಲುವುದು ಇಷ್ಟೇ ಉಳಿಯುತ್ತದೆ. ಇದು ನಿಜವಾದ ಮದುವೆಯ ಸೌಂದರ್ಯವಲ್ಲ.

ಅದ್ಧೂರಿ ಮದುವೆಗೆ ಕಡಿವಾಣ ಬೀಳಲಿ

ಇದನ್ನೂ ಓದಿ: Kongunadu Reddy Kings- ದಕ್ಷಿಣ ಭಾರತದಲ್ಲಿಯೇ ಪ್ರಥಮ ಚಿನ್ನದ ನಾಣ್ಯ ಹೊರಡಿಸಿದ ಕೊಂಗನಾಡು ರೆಡ್ಡಿ ರಾಜರು

ಮಧ್ಯಮ ವರ್ಗದವರ ಸಂಕಷ್ಟ

ಮಧ್ಯಮ ವರ್ಗದ ಕುಟುಂಬಗಳು ಸಮಾಜದ ಒತ್ತಡಕ್ಕೆ ಒಳಗಾಗಿ ಹೆಚ್ಚು ಖರ್ಚು ಮಾಡುತ್ತವೆ. ‘ಜನ ಏನು ಹೇಳುತ್ತಾರೆ?’ ಎಂಬ ಭಯದಿಂದ ತಮ್ಮ ಸಾಮರ್ಥ್ಯ ಮೀರಿದ ಖರ್ಚು ಮಾಡುತ್ತಾರೆ. ಇದರ ಪರಿಣಾಮವಾಗಿ ಸಾಲದ ಬಾಧೆ, ಕುಟುಂಬದ ಒಳ ಕಲಹ, ಆರ್ಥಿಕ ಅಸ್ಥಿರತೆ ಉಂಟಾಗುತ್ತದೆ.

ಮದುವೆ ಒಂದು ದಿನದ ಸಂಭ್ರಮ. ಆದರೆ ಸಾಲದ ಬಾಧೆ ಹಲವು ವರ್ಷಗಳ ಭಾರ. ಕೆಲವೊಮ್ಮೆ ಈ ಆರ್ಥಿಕ ಒತ್ತಡವು ದಂಪತಿಗಳ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಮದುವೆಯ ನಂತರವೇ ಜೀವನದ ಜವಾಬ್ದಾರಿಗಳು ಪ್ರಾರಂಭವಾಗುತ್ತವೆ. ಮನೆ, ಉದ್ಯೋಗ, ಮಕ್ಕಳ ಭವಿಷ್ಯ, ಆರೋಗ್ಯ. ಇವೆಲ್ಲಕ್ಕೆ ಹಣ ಅಗತ್ಯ. ಆದ್ದರಿಂದ ಮದುವೆಯಲ್ಲಿ ಮಿತವ್ಯಯ ಅಗತ್ಯ.

ಇದನ್ನೂ ಓದಿ: Sasive Chinnamma- ರೆಡ್ಡಿಕುಲ ಮಹಾಸಾಧ್ವಿ ಸಾಸಿವೆ ಚಿನ್ನಮ್ಮನ ಬಗ್ಗೆ ನಿಮಗೆಷ್ಟು ಗೊತ್ತು?

ಸರಳ ಮದುವೆ – ಉತ್ತಮ ಆಯ್ಕೆ

ಸರಳ ಮದುವೆ ಮಾಡುವುದು ಲಜ್ಜೆಯ ವಿಷಯವಲ್ಲ. ಅದು ಜಾಣ್ಮೆಯ ನಿರ್ಧಾರ. ದೇವಸ್ಥಾನಗಳಲ್ಲಿ, ಸಮುದಾಯ ಭವನಗಳಲ್ಲಿ ಕಡಿಮೆ ವೆಚ್ಚದಲ್ಲಿ ಮದುವೆ ಮಾಡಬಹುದು. ಬಂಧು-ಬಳಗದವರೊಂದಿಗೆ ಆತ್ಮೀಯವಾಗಿ ಸಂಭ್ರಮಿಸಬಹುದು. ಅನಗತ್ಯ ಅಲಂಕಾರ, ದುಬಾರಿ ವ್ಯವಸ್ಥೆಗಳನ್ನು ಕಡಿಮೆ ಮಾಡಬಹುದು.

ಇಂದಿನ ಯುವ ಪೀಳಿಗೆ ಈ ಬಗ್ಗೆ ಜಾಗೃತವಾಗಬೇಕು. ತಮ್ಮ ಮದುವೆಯನ್ನು ಸರಳವಾಗಿ ನಡೆಸಲು ಮುಂದಾಗಬೇಕು. ತಂದೆ-ತಾಯಿಗಳಿಗೆ ಅನಗತ್ಯ ಖರ್ಚು ಮಾಡಬೇಡಿ ಎಂದು ಹೇಳಬೇಕು. ನಿಜವಾದ ಸಂತೋಷ ಹಣದ ಪ್ರದರ್ಶನದಲ್ಲಿಲ್ಲ; ಪರಸ್ಪರ ಪ್ರೀತಿ, ಗೌರವ ಮತ್ತು ಒಳ್ಳೆಯ ಮೌಲ್ಯಗಳಲ್ಲಿ ಇದೆ.

ಇದನ್ನೂ ಓದಿ: Glory of the Reddy kings of Kashmir – ಭಾರತ ಭೂಶಿರ ಕಾಶ್ಮೀರದಲ್ಲೂ ರೆಡ್ಡಿರಾಜರ ಸುವರ್ಣ ವೈಭವ

ಸಮಾಜದಲ್ಲಿ ಬದಲಾವಣೆ ಅಗತ್ಯ

ಸಮಾಜದಲ್ಲಿ ಸರಳ ಮದುವೆಯ ಸಂಸ್ಕೃತಿ ಬೆಳೆಯಬೇಕು. ಮಾಧ್ಯಮಗಳು ಅದ್ಧೂರಿ ಮದುವೆಗಳನ್ನು ಪ್ರಚಾರ ಮಾಡುವುದಕ್ಕಿಂತ ಸರಳ ಮದುವೆಗಳ ಉದಾಹರಣೆಗಳನ್ನು ತೋರಿಸಬೇಕು. ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರು ಮಿತವ್ಯಯದ ಮಹತ್ವವನ್ನು ಸಾರಬೇಕು. ಪ್ರತಿಯೊಬ್ಬರೂ ತಮ್ಮ ಮನೆಯಿಂದಲೇ ಬದಲಾವಣೆ ಆರಂಭಿಸಬೇಕು.

ಪ್ರತಿಷ್ಠೆ ಎನ್ನುವುದು ಹಣದ ಅಳತೆಯಿಂದ ಅಳೆಯುವಂತದ್ದು ಅಲ್ಲ. ಒಳ್ಳೆಯ ಕುಟುಂಬ ಜೀವನವೇ ನಿಜವಾದ ಗೌರವ. ಮದುವೆ ಜೀವನದ ಆರಂಭ, ಅಂತ್ಯವಲ್ಲ. ಆದ್ದರಿಂದ ಸಂಭ್ರಮದಲ್ಲಿ ವಿವೇಕವೂ ಇರಲಿ.

ಒಟ್ಟಿನಲ್ಲಿ, ಮದುವೆ ಎಂಬ ಪವಿತ್ರ ಸಂಭ್ರಮವನ್ನು ದುಂದುವೆಚ್ಚದ ಆಡಂಭರಕ್ಕೆ ಬಲಿಯಾಗಿಸಬಾರದು. ಸಾಲ ಮಾಡಿ, ಆಸ್ತಿ ಮಾರಾಟ ಮಾಡಿ ಮಾಡುವ ಅದ್ಧೂರಿ ಮದುವೆಗಳಿಗೆ ಸ್ವಯಂ ಕಡಿವಾಣ ಹಾಕಬೇಕು. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಸರಳ, ಸಾದಾ, ಆತ್ಮೀಯ ಮದುವೆಗೆ ಆದ್ಯತೆ ನೀಡಬೇಕು.

ಸರಳತೆಯಲ್ಲೇ ಸೌಂದರ್ಯ ಇದೆ. ಸಂಭ್ರಮಕ್ಕಿಂತ ಜೀವನ ಮುಖ್ಯ. ಹೊಸ ಬಾಳಿನ ಮೊದಲ ಹೆಜ್ಜೆ ಜಾಣ್ಮೆಯ ನಿರ್ಧಾರದಿಂದ ಆರಂಭವಾಗಲಿ..!

ಲೇಖಕರು: ಮೊ ಮು ಆಂಜನಪ್ಪರೆಡ್ಡಿ

Reddy Mane Devaru- ರೆಡ್ಡಿಕುಲ ದೇವರುಗಳು | ರೆಡ್ಡಿಗಳ ಮನೆಯಲ್ಲಿ ಉಳಿದು ಬಂದಿರುವ ದೈವ ಪರಂಪರೆ

Related Articles

Leave a Reply

Your email address will not be published. Required fields are marked *

Back to top button
error: Content is protected !!