
ಶ್ರೀಮಂತ ಪರಂಪರೆಯುಳ್ಳ ಕನ್ನಡ ನಾಡಿಗೆ ರೆಡ್ಡಿಗಳ ಕೊಡುಗೆ ಚಿರ ಸ್ಮರಣೀಯವಾದದ್ದು. ಮುಖ್ಯವಾಗಿ ಕನ್ನಡ ನಾಡಿನ ಇತಿಹಾಸವನ್ನು ಅಜರಾಮರವಾಗಿಸಿದ ರಾಷ್ಟ್ರಕೂಟ ದೊರೆಗಳಿಂದ ಕನ್ನಡ ನೆಲದಲ್ಲಿ ರೆಡ್ಡಿಗಳ ವೈಭವ ದಾಖಲಾಗುತ್ತ ಬಂದಿದೆ. ರಾಷ್ಟ್ರಕೂಟರು ಅಪ್ಪಟ ಕನ್ನಡಿಗರು ಮತ್ತು ರೆಡ್ಡಿ ಕುಲಸ್ಥರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅವರ ಹಿನ್ನಲೆಯನ್ನು ಗಮನಿಸಿದರೆ ಮೇಲುನೋಟಕ್ಕೇ ರಾಷ್ಟ್ರಕೂಟರ ಮೂಲ ಮನವರಿಕೆಯಾಗುತ್ತದೆ.
ವಿದೇಶಿ ವಿದ್ವಾಂಸ ಡಾ.ಎ.ಸಿ.ಬರ್ನೆಲ್‌ರವರು ರಾಷ್ಟ್ರಕೂಟರನ್ನು ರೆಡ್ಡಿ ಜನಾಂಗಕ್ಕೆ ಸೇರಿದವರೆಂದು ನಿಖರವಾಗಿ ಪ್ರತಿಪಾದಿಸಿದ್ದಾರೆ. ಬರ್ನೆಲ್‌ರ ಪ್ರತಿಪಾದದ ಪ್ರಕಾರ ರಾಷ್ಟ್ರಕೂಟರು ರೆಡ್ಡಿ ಜನಾಂಗಕ್ಕೆ ಸೇರಿದವರು ಎನ್ನುವುದಕ್ಕೆ ಹಲವು ನಿಖರ ಪುರಾವೆಗಳೂ ಲಭ್ಯವಾಗಿವೆ.
ರಾಷ್ಟ್ರಕೂಟರ ಅವೀಸ್ಮರಣೀಯ ಕೊಡುಗೆ
ವಿಶೇಷವೆಂದರೆ ರಾಷ್ಟ್ರಕೂಟರ ಅನೇಕ ಶಾಸನಗಳಲ್ಲಿ ‘ರೆಡ್ಡಿ’ ಮೂಲವಾದ ‘ರಟ್ಟ’ ಪದ ಪ್ರಯೋಗವಾಗಿದೆ. ಅವರ ಹಲವು ತಾಮ್ರ ಶಾಸನಗಳಲ್ಲಿ ‘ರಟ್ಟ ವಿಧ್ಯಾಧರ’, ‘ರಟ್ಟಗಂಧರ್ವ’, ‘ರಟ್ಟಕುಲಭೂಷಣ’, ‘ರಟ್ಟವಂಶೋದ್ಭವ’ ಮುಂತಾದ ಬಿರುದುಗಳಿದ್ದುದನ್ನು ರಾಷ್ಟ್ರಕೂಟ ದೊರೆಗಳು ದಾಖಲಿಸಿದ್ದಾರೆ. ‘ರಟ್ಟವಂಶೋದ್ಭವ’ ಎಂದರೆ ರಟ್ಟಕುಲದಲ್ಲಿ ಉದ್ಭವಿಸಿದವರು ಅಥವಾ ಜನಿಸಿದವನು ಎಂದರ್ಥ.
ಅ೦ದರೆ ರಾಷ್ಟ್ರಕೂಟರು ರೆಡ್ಡಿಕುಲಸ್ಥರು ಎನ್ನುವುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕಿಲ್ಲವಷ್ಟೇ. ಜೊತೆಗೆ ರಾಷ್ಟ್ರಕೂಟರದು ಶುದ್ಧ ಕನ್ನಡ ರಾಜಮನೆತನ ಮತ್ತು ಅವರು ಕನ್ನಡಿಗರು ಎಂಬುವುದಕ್ಕೆ ಹಲವಾರು ಸಮರ್ಥನೆಗಳು ಕೂಡ ಈಗ ದೊರೆತಿವೆ.
ಹಾಗೇನೆ ರಾಷ್ಟ್ರಕೂಟರ ಅನೇಕ ವ್ಯಕ್ತಿಗತ ಹೆಸರುಗಳು ಅಚ್ಚ ಕನ್ನಡದ ಹೆಸರಾಗಿದ್ದು ಗಮನಾರ್ಹ. ಡಾ.ಎ.ಎಸ್.ಅಲ್ಟೇಕರ್ ಎಂಬುವರು ಈ ಎಲ್ಲಾ ಆಧಾರಗಳನ್ನು ಆಧರಿಸಿ ರಾಷ್ಟ್ರಕೂಟರು ಕನ್ನಡಿಗರು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಇದರಿಂದಾಗಿ ರಾಷ್ಟ್ರಕೂಟರು ಈ ಮಣ್ಣಿನ ಮಕ್ಕಳು ಮತ್ತು ಕನ್ನಡಿಗರು ಎಂಬುದನ್ನು ಈಗ ಸಾಮಾನ್ಯವಾಗಿ ಒಪ್ಪಿಸಿಕೊಳ್ಳಲಾಗಿದೆ.
ಎಲ್ಲರೂ ಬಲ್ಲಂತೆ ಸುಮಾರು ಎರಡೂವರೆ ಶತಮಾನಗಳಿಗೂ ಹೆಚ್ಚು ಕಾಲ ಕರ್ನಾಟಕವನ್ನಾಳಿದ ಬಾದಾಮಿ ಚಾಲುಕ್ಯ ವಂಶ, ತಮ್ಮ ಸಾಮಂತರಾಗಿದ್ದ ರಟ್ಟ (ರೆಡ್ಡಿ) ವೀರರಿಂದಲೇ ನಿರ್ನಾಮವಾದದ್ದು ಚಾರಿತ್ರಿಕ ದುರಂತಗಳಲ್ಲೊ೦ದು. ಕ್ರಿ.ಶ 745ರಲ್ಲಿ ಪಟ್ಟಕ್ಕೆ ಬಂದ ಚಾಲುಕ್ಯ ದೊರೆ ಎರಡನೇ ಕೀರ್ತಿವರ್ಮನ ಬಲಹೀನತೆಯೇ ಇದಕ್ಕೆ ಕಾರಣವಾಯಿತು.
ತನ್ನ ವಂಶಜರ೦ತೆ ಶೂರನಾಗಿರದೇ ಆಡಳಿತದ ಎಲ್ಲ ವಿಭಾಗಗಳಲ್ಲಿಯೂ ಅತ್ಯಂತ ದುರ್ಬಲನಾಗಿದ್ದ ಈತನ ದೌರ್ಬಲ್ಯವನ್ನು ಅರಿತ ಸಾಮ್ರಾಜ್ಯದ ಅನೇಕ ಮಾಂಡಲೀಕರು, ಸಾಮಂತರು ಸ್ವತಂತ್ರರಾಗುವ ಮನೋಭಾವ ತಾಳಿದರು. ಅವರೆಲ್ಲರಿಗಿಂತ ಬಹುಬೇಗ ಭಯಂಕರವಾಗಿ ಬಂಡೆದ್ದ ರಟ್ಟ ಸಾಮಂತ ಪ್ರಭು ದಂತಿದುರ್ಗ ಕ್ರಿ.ಶ 757ರಲ್ಲಿ ಚಾಲುಕ್ಯ ದೊರೆ ಎರಡನೇ ಕೀರ್ತಿವರ್ಮನ ವಿರುದ್ಧವೇ ರಾಷ್ಟ್ರಕೂಟ ಚಕ್ರಾಧಿಪತ್ಯವನ್ನು ಸಾಧಿಸಲು ಇನ್ನಿಲ್ಲದಂತೆ ಹವಣಿಸಿಬಿಟ್ಟ. ದಂತಿದುರ್ಗನ ನಂತರ ಬಂದ ರಾಷ್ಟ್ರಕೂಟ ಅರಸ ಕೃಷ್ಣನು ಸಂಪೂರ್ಣ ಚಾಲುಕ್ಯ ವಂಶವನ್ನು ನಿರ್ಮೂಲನೆಗೊಳಿಸಿ ಕರ್ನಾಟಕದ ಕೀರ್ತಿಯನ್ನು ಅಖಂಡ ಭಾರತಕ್ಕೂ ಭಾರತದಾಚೆಗೂ ಸುಪ್ರಸಿದ್ದಗೊಳಿಸಿದ್ದು ಅಮರ ಇತಿಹಾಸ.
ರಾಷ್ಟ್ರಕೂಟರ ಸಾಮ್ರಾಜ್ಯವು ಉತ್ತರದಲ್ಲಿ ಕಾವೇರಿವರೆಗೂ, ಪಶ್ಚಿಮದಲ್ಲಿ ಅರಬ್ಬಿ ಸಮುದ್ರ ಮತ್ತು ಮಾಳವದವರೆಗೂ, ಪೂರ್ವದಲ್ಲಿ ಆಂಧ್ರ ಪ್ರದೇಶದ ವಾರಂಗಲ್ ಮತ್ತು ಕಡಪ ಜಿಲ್ಲೆವರೆಗೂ ವಿಸ್ತರಿಸಿಕೊಂಡಿತ್ತು. ಇಂತಹ ವಿಶಾಲ ಸಾಮ್ರಾಜ್ಯವನ್ನು ಸ್ಥಾಪಿಸಿ ಕನ್ನಡ ಸಂಸ್ಕೃತಿ, ನಾಡು-ನುಡಿಗೆ ಅಮೋಘ ಕೊಡುಗೆ ನೀಡಿದ ರಾಷ್ಟ್ರಕೂಟರು ಅಪ್ಪಟ ಕನ್ನಡಿಗರು ಮತ್ತು ರೆಡ್ಡಿಗಳು ಎನ್ನುವುದು ಹೆಮ್ಮೆಯ ಸಂಗತಿ!
ರಾಷ್ಟ್ರಕೂಟರ ಬಗ್ಗೆ ಇರುವ ಅತ್ಯಂತ ಪ್ರಾಚೀನ ದಾಖಲೆಯೆಂದರೆ ಅಶೋಕನ ಶಾಸನಗಳಲ್ಲಿ ಅವರನ್ನು ರಟ್ಟರು ಅಥವಾ ರಥಿಕರೆಂದು ಪ್ರಸ್ತಾಪಿಸಿರುವುದು. ಹಾಗೇನೆ ಕನ್ನಡದ ‘ಕವಿರಾಜ ಮಾರ್ಗ’ ಮತ್ತು ‘ವಿಕ್ರಮಾಂಕದೇವ ಚರಿತ’ ಗ್ರಂಥಗಳು ಕೆಲವೊಂದು ವಿಷಯಗಳನ್ನು ರಾಷ್ಟ್ರಕೂಟರ ಕುರಿತಾಗಿ ಒದಗಿಸುತ್ತವೆ. ಇದಲ್ಲದೆ ರಾಜಶೇಖರ, ಸೋಮಶೇಖರ, ಗುಣಭದ್ರ ಜೀನ ಮುಂತಾದ ವಿದ್ವಾಂಸರ ಸಂಸ್ಕೃತ ಗ್ರಂಥಗಳೂ ರಾಷ್ಟ್ರಕೂಟರ ಇತಿಹಾಸಕ್ಕೆ ಆಧಾರ ಒದಗಿಸುತ್ತವೆ. ಇವುಗಳನ್ನು ಆಧರಿಸಿ ದಾಖಲಿಸುವುದಾದರೆ ಕರ್ನಾಟಕಕ್ಕೆ ರಾಷ್ಟ್ರಕೂಟರ ಕೊಡುಗೆ ಅಜರಾಮರ, ಅವೀಸ್ಮರಣೀಯ.
ಕ್ರಿ.ಶ. 9ನೇ ಶತಮಾನದಲ್ಲಿ ಉತ್ತರ ಕರ್ನಾಟಕದ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನಲ್ಲಿ ಹರಿಯುವ ಭೀಮಾ ನದಿಯ ಉಪನದಿಯಾದ ಕಾಗಿಣಾ ನದಿಯ ದಂಡೆಯ ಮೇಲಿನ ಮಾನ್ಯಖೇಟವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ ರಾಷ್ಟ್ರಕೂಟರದು ಸುವರ್ಣ ಇತಿಹಾಸ. ಮಾನ್ಯಖೇಟದ ಗತವೈಭವವನ್ನು ನಾಚಿಸುವ ಭಗ್ನವಾದ ಕೋಟೆಗಳು, ಅರಮನೆಗಳು, ಅಂತಃಪುರಗಳು, ಗುಡಿ ಗೋಪುರಗಳನ್ನು ಇವತ್ತಿಗೂ ಕೂಡ ಇಲ್ಲಿ ನೋಡಬಹುದು.
ಕ್ರಿ.ಶ. 814-78ರ ಅಮೋಘ ವರ್ಷ ನೃಪತುಂಗನ ಆಳ್ವಿಕೆಯ ಕಾಲಾವಧಿಯಲ್ಲಿ ಮಾನ್ಯಖೇಟವು ರಾಷ್ಟ್ರಕೂಟ ಸಾಮ್ರಾಜ್ಯದ ರಾಜಧಾನಿಯಾಗಿ ನಿರ್ಮಾಣಗೊಂಡು ಸೌಂದರ್ಯ ಸಂಪತ್ತಿನಿ೦ದ ದೇಶವಿದೇಶದಲ್ಲಿಯೇ ಖ್ಯಾತಿಯನ್ನು ಪಡೆದ ನಗರವಾಗಿತ್ತು.
ರೋಮ್ ದೇಶದ ಇತಿಹಾಸಕಾರರೊಬ್ಬರು ತನ್ನ ಪ್ರವಾಸ ಕಥನದಲ್ಲಿ ವರ್ಣಿಸಿದ ಒಟ್ಟು 30 ಕೋಟೆಗಳಲ್ಲಿ ಮಾನ್ಯಖೇಟವು ಒಂದೆAದು ತರ್ಕಿಸಲಾಗಿದೆ. ವಿದೇಶಿ ಪ್ರವಾಸಿಗರಾದ ಸುಲೇಮಾನ ಸೌದಾಗಾರನು ರಾಷ್ಟ್ರಕೂಟ ಸಾಮ್ರಾಜ್ಯಕ್ಕೆ ಭೇಟಿ ನೀಡಿ ಮಾನ್ಯಖೇಟ ಚಕ್ರವರ್ತಿ ನೃಪತುಂಗನ ಬಗ್ಗೆ ತುಂಬಾ ಅಭಿಮಾನದಿಂದ ವರ್ಣಿಸಿದ್ದಾನೆ.
ಜಗತ್ತಿನ ಶ್ರೇಷ್ಠ ಸಾಮ್ರಾಜ್ಯಗಳಾದ ಬಗ್ದಾದ್, ಚೀನ, ಕಾನ್‌ಸ್ಟಾಂಟಿ ನೋಪಲ್ ಜೊತೆಗೆ ಭಾರತದಲ್ಲಿನ ರಾಷ್ಟ್ರಕೂಟ ಸಾಮ್ರಾಜ್ಯವೂ ಒಂದಾಗಿತ್ತು. ಮೇಲಿನ ಸಾಮ್ರಾಜ್ಯದ ಸಾಮ್ರಾಟರ ಜೊತೆಗೆ ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗನೂ ಒಬ್ಬನಾಗಿದ್ದಾನೆಂಬ ಉಲ್ಲೇಖಗಳನ್ನು ಆಧಾರವಾಗಿಟ್ಟುಕೊಂಡರೆ ರಾಷ್ಟ್ರಕೂಟರು ಕರುನಾಡಿಗೆ ನೀಡಿದ ಕೊಡುಗೆ ಎಂತಹದು ಎಂಬುದನ್ನು ಸಹಜವಾಗಿಯೇ ಊಹಿಸಬಹುದು.
ಸವದತ್ತಿ ರಟ್ಟರ ಕೊಡುಗೆ…
ಅದೇ ರೀತಿ ರಾಜರಾದ ಶೂರರೂ, ಶಾಂತಿಪ್ರಿಯರೂ, ಧರ್ಮಸಹಿಷ್ಣುಗಳೂ, ಪ್ರಜಾಹಿತೈಷಿಗಳೂ ಮತ್ತು ಸಾಹಿತ್ಯಪ್ರೇಮಿಗಳೂ ಆದ ಸವದತ್ತಿ ರಟ್ಟ (ರೆಡ್ಡಿ) ರಾಜರ ಕೊಡುಗೆಯೂ ಗಮನಾರ್ಹವಾದದ್ದು. ವಿಶೇಷವೆಂದರೆ ಇವರು ಒಂದೆರಡು ವರ್ಷ, ದಶಕ ಅಥವಾ ಶತಮಾನಗಳ ಕಾಲ ಆಳ್ವಿಕೆ ನಡೆಸಲಿಲ್ಲ; ಬರೋಬ್ಬರಿ ಮುನ್ನೂರು ವರ್ಷಗಳ ಕಾಲ ವಿವಿಧ ರಾಜಮನೆತನಗಳಿಗೆ ಸಾಮಂತರಾಗಿ, ಕಡೆಗೆ ಸ್ವತಂತ್ರ ರಾಜರಾಗಿ ಹೆಮ್ಮೆಯಿಂದಲೇ ಆಳಿದರು.
ಧಾರ್ಮಿಕವಾಗಿ, ಚಾರಿತ್ರಿಕವಾಗಿ, ಪೌರಾಣಿಕವಾಗಿ ತನ್ನದೇ ಆದ ವಿಶಿಷ್ಟತೆ ಹೊಂದಿರುವ ಬೆಳಗಾವಿಯನ್ನು ಮತ್ತು ಬೆಳಗಾವಿ ಜಿಲ್ಲೆಯ ಸವದತ್ತಿಯನ್ನು ಸುಮಾರು ಮುನ್ನೂರು ವರ್ಷಗಳ ಕಾಲ ಅತ್ಯಂತ ವೈಭವಯುತವಾಗಿ ಆಳಿದ ಕೀರ್ತಿ ಸವದತ್ತಿ ರಟ್ಟರಾಜರದು. ಕನ್ನಡ ನಾಡು-ನುಡಿ, ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ ಅಗ್ರಮಾನ್ಯ ರಾಷ್ಟ್ರಕೂಟರ ಸಾಮ್ರಾಜ್ಯದಲ್ಲಿ ಬೆಳಗಾವಿಯನ್ನು ಸಾಮಂತವಾಗಿ ಪಡೆದು ಆಳಿದವರೇ ಈ ಸವದತ್ತಿ ರಟ್ಟರಾಜರು. ಮೊದ ಮೊದಲು ಸಾಮಂತರಾಜರಾಗಿ, ಬಳಿಕ ಸ್ವತಂತ್ರ ಸಾಮ್ರಾಟರಾಗಿ ಮೆರೆದ ಸವದತ್ತಿ ರಟ್ಟರಾಜರು ರಾಷ್ಟçಕೂಟರನ್ನೇ ಮೀರಿಸುವ ಮಟ್ಟಿಗೆ, ಅವರಿಗಿಂತಲೂ ಸುಧೀರ್ಘವಾಗಿ ಆಳಿ ಚರಿತ್ರೆಯಲ್ಲಿ ಅಜರಾಮರವಾಗಿ ಉಳಿದಿದ್ದಾರೆ.
ಹೀಗಾಗಿ ಇಲ್ಲಿಯ ಬಹುತೇಕ ಐತಿಹಾಸಿಕ ಕುರುಹುಗಳೊಟ್ಟಿಗೆ ರೆಡ್ಡಿಗಳ ಹೆಜ್ಜೆ ಜಾಡಿದೆಯಾದ್ದರಿಂದ ಬೆಳಗಾವಿಯನ್ನು ಅದರಲ್ಲೂ ಸವದತ್ತಿಯನ್ನು ರೆಡ್ಡಿಗಳ ನಾಡೆಂದರೆ ಖಂಡಿತ ತಪ್ಪಿಲ್ಲವೇನೋ? ಇವತ್ತಿಗೂ ಈ ಭಾಗದಲ್ಲಿ ರೆಡ್ಡಿಗಳು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ನೂರಾರು ಎಕರೆ ಭೂಮಿಯುಳ್ಳ ಜಮೀನ್ದಾರರಿಂದ ಹಿಡಿದು, ಅವೇ ಭೂಮಿಯಲ್ಲಿ ಹೃತ್ಪೂರ್ವಕವಾಗಿ ದುಡಿದುಣ್ಣುವ ಬಡ ಕೃಷಿ ಕಾರ್ಮಿಕನ ತನಕ ರೆಡ್ಡಿ ಸಮುದಾಯದ ಜನರಿದ್ದಾರೆ.
ಬೆಳಗಾವಿಯ ಗತವೈಭವವನ್ನು ಈಗಲೂ ನೆನಪಿಸುವಂತೆ ಬದುಕುತ್ತಿರುವ ಜಮಿನ್ದಾರರ ಪೈಕಿ ಅನೇಕರು ರೆಡ್ಡಿಕುಲಸ್ಥರೆ ಆಗಿದ್ದಾರೆ. ರಾಜಕಾರಣ, ದಾನ, ವಿದ್ಯೆ, ಔದಾರ್ಯ ಎಲ್ಲಾ ಗುಣಗಳನ್ನೂ ಮೈಗೂಡಿಸಿಕೊಂಡಿರುವ ಬಹುಸಂಖ್ಯೆಯ ರೆಡ್ಡಿ ಸಮುದಾಯದ ಗಣ್ಯರು ಇಲ್ಲಿದ್ದಾರೆ.
ಕನ್ನಡದ ಕಟ್ಟಾಳು ದೊಡ್ಡಮೇಟಿ
ಇಂತಹ ರೆಡ್ಡಿ ಗಣ್ಯರಲ್ಲಿ ಕನ್ನಡದ ಕಟ್ಟಾಳು ಎಂದೇ ಸುಪ್ರಸಿದ್ಧರಾಗಿರುವ ಅಂದಾನಪ್ಪ ದೊಡ್ಡಮೇಟಿಯವರು ಸ್ವಾತಂತ್ರ್ಯ ಆಂದೋಲನ ಮತ್ತು ಕರ್ನಾಟಕ ಏಕೀಕರಣ ಹೋರಾಟ ಎರಡರಲ್ಲೂ ಅಮೋಘ ಪಾತ್ರ ವಹಿಸಿ ಅಜರಾಮರ ಕೊಡುಗೆ ನೀಡಿದ್ದಾರೆ. 1908 ಮಾರ್ಚ್ 16ರಂದು ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನ ಜಕ್ಕಲಿ ಗ್ರಾಮದ ಸದ್ಗೃಹಸ್ತ ದಂಪತಿಗಳಾದ ಲಿಂಗಪ್ಪ ದೊಡ್ಡಮೇಟಿ ಮತ್ತು ಬಸವ್ವರ ಪುತ್ರರತ್ನರಾಗಿ ಜನಿಸಿ, ಸುಮಾರು ಅರ್ಧ ಶತಮಾನಗಳಷ್ಟು ಕಾಲ ಕನ್ನಡ ನಾಡಿನ ಮನೆ ಮಾತಾದವರು. ಶಾಸನಸಭೆಯಲ್ಲಿ ಕನ್ನಡ ಡಮರುಗ ಬಾರಸಿದ ಮೊದಲ ಕನ್ನಡಿಗ ಕೂಡ ಇವರೇ!
ಅಂದಾನಪ್ಪ ಅವರು 1937ರಲ್ಲಿ ಮುಂಬೈ ಶಾಸನ ಸಭೆಗೆ ನಡೆದ ಚುನಾವಣೆಯಲ್ಲಿ ಧಾರವಾಡ ಉತ್ತರ ಭಾಗದಿಂದ ಸ್ಪರ್ಧಿಸಿ ಜಯಶಾಲಿಗಳಾಗಿದ್ದರು. ಅಂದು ವಿಶ್ವನಾಥ ಜೋಗಿ ಅವರು ಪ್ರತ್ಯೇಕ ಕರ್ನಾಟಕ ಪ್ರಾಂತ ರಚನೆಯ ಬೇಡಿಕೆ ಮುಂದಿರಿಸಿ ಗೊತ್ತುವಳಿಯನ್ನು ಮಂಡಿಸಿದ್ದರು. ಅದನ್ನು ಬೆಂಬಲಿಸಿ ದೊಡ್ಡಮೇಟಿಯವರು ಕನ್ನಡದಲ್ಲಿಯೇ ಮಾತನಾಡಿದಾಗ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು.
ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಕನ್ನಡ ಕಹಳೆ ಮೊಳಗಿಸಿದಕ್ಕಾಗಿ ಸದಸ್ಯರು ಪ್ರಬಲವಾಗಿ ವಿರೋಧಿಸಿದ್ದರು. ಆಗ ಮುಂಬೈ ಸಂಸ್ಥಾನ ಸಭೆಯಲ್ಲಿ ಮೊಟ್ಟ ಮೊದಲಿಗೆ ಕನ್ನಡದ ಡಿಂಡಿಮವನ್ನು ಕೇಳಿ ರೋಮಾಂಚನಗೊ೦ಡ ಹಿರಿಯ ಸದಸ್ಯ ಸಿದ್ದಪ್ಪ ಕಂಬಳಿಯವರು 30ರ ತರುಣ ಅಂದಾನಪ್ಪನವರನ್ನು ಅಲಂಗಿಸಿಕೊ೦ಡಿದ್ದರು. ಮರಾಠಿ ಸದಸ್ಯರ ಬಿರುಸಿನ ವಿರೋಧವನ್ನು ಪ್ರಬಲವಾಗಿ ಎದುರಿಸಿ, ದೊಡ್ಡಮೇಟಿಯವರಿಗೆ ಬೆಂಬಲ ನೀಡಿ ಕನ್ನಡದಲ್ಲಿ ಮಾತನಾಡುವುದನ್ನು ಸಮರ್ಥಿಸಿಕೊಂಡಿದ್ದರು.
ಮಾತೃಭಾಷೆಯಲ್ಲಿ ಅಂದಾನಪ್ಪ ಅಂದು ಹಾಕಿದ ದಾರಿ ಬರಬರುತ್ತ ರಾಜಮಾರ್ಗವೇ ಆಯಿತು. ಮರಾಠಿ, ಗುಜರಾತ ಸದಸ್ಯರು ಕೂಡ ಆ ಮೇಲೆಯೇ ತಮ್ಮ ತಾಯ್ನುಡಿಯಲ್ಲಿ ಮಾತನಾಡತೊಡಗಿದ್ದರು. ಈ ತೆರನಾಗಿ ಅಂದಾನಪ್ಪ ಅವರು ಶಾಸನಸಭೆಯಲ್ಲಿ ತಾಯಿ ನುಡಿಯ ಬಳಕೆಯ ಹರಿಕಾರರಾದರು.
ಮುಂದೆ 1946ರಲ್ಲಿ ಶಾಸನಸಭೆಗೆ ಚುನಾವಣೆ ಘೋಷಿಸಲ್ಪಟ್ಟದ್ದವು. ಧಾರವಾಡ ಗ್ರಾಮೀಣ ಉತ್ತರ ಭಾಗದಿಂದ ಮುಂಬೈ ವಿಧಾನಸಭೆಗೆ 4 ಸ್ಥಾನಗಳಿದ್ದು; ಆ ನಾಲ್ಕು ಸ್ಥಾನಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಆಯ್ಕೆಯಾದ ನಾಲ್ವರಲ್ಲಿ ಅಂದಾನಪ್ಪನವರು ಒಬ್ಬರು. ವಿಧಾನಸಭಾ ಸದಸ್ಯರಾಗಿ ಅವರು ಕರ್ನಾಟಕ ರಾಜ್ಯ ನಿರ್ಮಾಣಕ್ಕಾಗಿ ವಿಧಾನಸಭೆಯ ಒಳಗೂ ಹೊರಗೂ ಉತ್ಕಟ ಹೋರಾಟ ನಡೆಸಿದ್ದರು.
ರಾಮದುರ್ಗ ಸಂಸ್ಥಾನ ವಿಮೋಚನಾ ಹೋರಾಟ ಕರ್ನಾಟಕ ರಾಜ್ಯ ನಿರ್ಮಾಣ ದೃಷ್ಟಿಯಿಂದ ಒಂದು ಮಹತ್ವದ ಹೋರಾಟ. ಕರ್ನಾಟಕವು ಸಂಸ್ಥಾನಿಕ ಪ್ರದೇಶವನ್ನು ಅತ್ಯಧಿಕವಾಗಿ ಒಳಗೊಂಡ ರಾಜ್ಯವಾಗಿದ್ದಿತು. ಈ ಸಂಸ್ಥಾನಗಳು ವಿಲೀನಗೊಳ್ಳದೇ ಕರ್ನಾಟಕವು ಒಂದು ಸಂಯುಕ್ತ ರಾಜ್ಯ ಘಟಕವಾಗಿ ರೂಪುಗೊಳ್ಳುತ್ತಿರಲಿಲ್ಲ. ರಾಮದುರ್ಗ ಸಂಸ್ಥಾನದ ಬಂಡೆದ್ದ ಹೋರಾಟಗಾರರು ನೆರೆಯ ಸಂಸ್ಥಾನಗಳಲ್ಲೂ ಸಂಚರಿಸಿ ಅವುಗಳ ವಿಲೀನಕ್ಕೂ ಸ್ಫೂರ್ತಿ ನೀಡಿದರು. ರಾಮದುರ್ಗ ಸಂಸ್ಥಾನದ ವಿಲೀನೀಕರಣ ಹೋರಾಟದಲ್ಲಿ ಅಂದಾನಪ್ಪ ದೊಡ್ಡಮೇಟಿಯವರ ಪಾತ್ರ ಮಹತ್ವದ್ದಾಗಿದೆ.
ವಿಶೇಷವೆಂದರೆ 1947 ಸೆಪ್ಟಂಬರ್ 1ರಂದು ವಿಧಾನಸಭೆಯಲ್ಲಿ ರಾಜ್ಯದ ಹೆಸರು ‘ಕರ್ನಾಟಕ’ ಎಂದೇ ಆಗಬೇಕೆಂದು ಗೊತ್ತುವಳಿ ತಂದು ನಾಮಕರಣ ಹೋರಾಟಕ್ಕೆ ನಾಂದಿ ಹಾಡಿದವರೇ ಅಂದಾನಪ್ಪ ಅವರು. 1966 ಜುಲೈ ತಿಂಗಳಲ್ಲಿ ಅದೇ ಗೊತ್ತುವಳಿ ಪುನಃ ಮಂಡಿಸಿದ್ದರು. ವಿಧಾನ ಸಭೆಯಲ್ಲಿ ಎರಡು ಕನ್ನಡ ನಾಡಿನ ಅಪಸ್ವರ ಕೇಳಿ ಬಂದಾಗ ಅವರು ಕೆಂಡಾಮ೦ಡಲವಾಗಿ ನನ್ನ ದೇಹವೇ ಎರಡು ಹೋಳಾಗಲಿ ಅದರಲ್ಲಿ ಈ ನಾಡು ಛಿದ್ರವಾಗಕೂಡದು ಎಂದು ಗರ್ಜಿಸಿದ್ದರು.
ಅಂದಾನಪ್ಪ ಅವರು ಕರ್ನಾಟಕ ಏಕೀಕರಣ ಹೋರಾಟದಲ್ಲಿ ತೊಡಗಿಸಿಕೊಂಡು ಈ ನಾಡು ‘ಕರ್ನಾಟಕ’ವೆಂದು ಹೆಸರಾಗಲಿ ಎಂದಷ್ಟೇ ಧ್ವನಿ ಎತ್ತಲಿಲ್ಲ ನಾಡಿನ ಸಮಗ್ರ ಬೆಳವಣಿಗೆಯನ್ನು ಚಿಂತಿಸಿದ್ದರು. ವಿಧಾನ ಸಭೆಯ ಹಂಗಾಮಿ ಅಧ್ಯಕ್ಷರಾಗಿದ್ದಾಗ ನೂತನ ಸದಸ್ಯರ ಪ್ರತಿಜ್ಞಾ ವಿಧಿಯನ್ನು ಸಂಪೂರ್ಣವಾಗಿ ಕನ್ನಡಮಯವಾಗಿ ನಡೆಸಿಕೊಟ್ಟ ಹಿರಿಮೆ ಅಂದಾನಪ್ಪನವರದ್ದು!

ಸ್ವಾತಂತ್ರ್ಯ ಪಡೆದ ನಂತರ ನಡೆದ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ (1952, 57, 62, 67) ಅಂದಾನಪ್ಪ ಅವರು ಧಾರವಾಡದ ರೋಣ ಮತದಾರರ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾದವರು. ಅವರು ಸಣ್ಣ ನೀರಾವರಿ ರಾಜ್ಯ ಸಚಿವರಾಗಿದ್ದಾಗ ರಾಜ್ಯದ ನೀರಾವರಿ ಕ್ಷೇತ್ರಕ್ಕೆ ತೀವ್ರಗತಿಯ ಚಾಲನೆ ದೊರೆಯಿತು. ಆಡಳಿತವನ್ನು ಜನವಾಣಿಯಾದ ಕನ್ನಡದಲ್ಲಿಯೇ ನಡೆಸಬೇಕೆಂದು ಮನಪೂರ್ವಕವಾಗಿ ಅಪೇಕ್ಷಿಸಿ ಕನ್ನಡ ಅನುಷ್ಠಾನಕ್ಕೆ ಒತ್ತು ನೀಡಿದರು.
ತಮ್ಮ ಪ್ರತಿಜ್ಞಾವಿಧಿಯನ್ನು ಕನ್ನಡದಲ್ಲಿಯೇ ನಡೆಸಿದರು. ಟಿಪ್ಪಣಿಗಳನ್ನು ಕನ್ನಡದಲ್ಲಿಯೇ ಬರೆಯುತ್ತಿದ್ದ ಅವರು ಆಡಳಿತದಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಗೆ ಇನ್ನಿಲ್ಲದ ಗಮನ ಹರಿಸಿದರು. ಈ ಹಿನ್ನಲೆಯಲ್ಲಿ Karnataka Through the Ages (ಕರ್ನಾಟಕ ಪರಂಪರೆ) ಎಂಬ ಇಂಗ್ಲಿಷ್ ಗ್ರಂಥ ಹೊರಬೀಳುವಲ್ಲಿ ಅವರು ಪ್ರಯತ್ನ ದೊಡ್ಡದು. ಕರ್ನಾಟಕ ಸಂಸ್ಕೃತಿಯ ಸಂಶೋಧನೆ ಅಧ್ಯಯನ ಕೇಂದ್ರವೊAದನ್ನು ಏರ್ಪಡಿಸಬೇಕೆಂದು ಅವರು ಹವಣಿಸುತ್ತಿದ್ದರು. ಮಂತ್ರಿಸ್ಥಾನದಲ್ಲಿ ನಾಲ್ಕು ವರ್ಷ ಅವರು ಸಲ್ಲಿಸಿದ ಸೇವೆ ಅಪಾರ. ಆದರೆ ಮಂತ್ರಿಯಾಗುವುದಕ್ಕೆ ಮೊದಲು 30 ವರ್ಷಗಳ ರಾಜಕೀಯ ಹಾಗೂ ಸಾಮಾಜಿಕ ಜೀವನದಲ್ಲಿ ಅವರು ಸಲ್ಲಿಸಿದ ಸೇವೆ ಮಹತ್ವಪೂರ್ಣವಾದುದು.
ಬದುಕಿನುದ್ದಕ್ಕೂ ಜನಸೇವೆ, ದೇಶಸೇವೆ, ನಾಡು-ನುಡಿ ಸೇವೆ ಎಂದು ಗಂಧದ ಕೊರಡಿನಂತೆ ಸವೆದು ಪರಿಮಳ ಬೀರಿದ ಅಂದಾನಪ್ಪ ದೊಡ್ಡಮೇಟಿ ಇನ್ನೂ ಏನೇನೋ ಸಾಧಿಸುವ, ಹೋರಾಡುವ ಕೆಚ್ಚು ತುಂಬಿಕೊAಡಿದ್ದರು. ಆದರೆ ವಿಧಿಯ ಆಟವೇ ಬೇರೆ ಇತ್ತು. 1972ರ ಜನವರಿ 26ರಂದು ಹುಬ್ಬಳ್ಳಿಯಿಂದ ಜಕ್ಕಲಿಗೆ ಬರುವಾಗ ಕಾರು ಅಪಘಾತಕ್ಕೆ ಸಿಲುಕಿದ ಅವರು ಹತ್ತಿರತ್ತಿರ ಒಂದು ತಿಂಗಳ ಕಾಲ ಆಸ್ಪತ್ರೆ ಸೇರಿದರು. ವಿಕಟವೆಂದರೆ ಚಿಕಿತ್ಸೆ ನಡೆಯುತ್ತಿರುವಾಗಲೇ ಹೃದಯಾಘಾತವಾಗಿ ಫೆಬ್ರವರಿ 21ನೇ ತಾರೀಕು ಕನ್ನಡಮ್ಮನ ಈ ಹೆಮ್ಮೆಯ ಪುತ್ರ ನಮ್ಮನ್ನಗಲಿದ್ದು ದುರದೃಷ್ಟಕರ!
ಕೆ. ಸಿ. ರೆಡ್ಡಿ ಕೊಡುಗೆ…
ಹಾಗೇನೇ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಮಧ್ಯಪ್ರದೇಶ ರಾಜ್ಯಪಾಲರಾಗಿ ಸುಧೀರ್ಘ ಅಧಿಕಾರ ರಾಜಕೀಯದಲ್ಲಿ ದುಡಿದ ಕೆ.ಸಿ.ರೆಡ್ಡಿ ಅರ್ಥಾತ್ ಕ್ಯಾಸಂಬಳ್ಳಿ ಚಂಗಲರಾಯ ರೆಡ್ಡಿಯವರು ಈ ನಾಡು ಕಂಡ ಅಪರೂಪದ ನೇತಾರ. ಅವರ ಚಿಂತನೆ, ಹೋರಾಟದ ಹಾದಿ, ಸಾಧನೆಯ ಮತ್ತು ಕನ್ನಡ-ಕರ್ನಾಟಕಕ್ಕೆ ಅವರು ನೀಡಿದ ಕೊಡುಗೆಗಳ ಸರಮಾಲೆ ಅವಿಸ್ಮರಣೀಯ. 1947 ಅಕ್ಟೋಬರ್ 24ನೇ ತಾರೀಖು ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿ ಆಯ್ಕೆಯಾದ ರೆಡ್ಡಿಯವರು ಸಂಕ್ರಮಣ ಘಟ್ಟದಲ್ಲಿದ್ದ ಕರುನಾಡನ್ನು ಪ್ರಗತಿಯತ್ತ ಕೊಂಡೊಯ್ದ ರೀತಿಯೇ ರೋಮಾಂಚನಕಾರಿಯಾದದ್ದು.
ತಮ್ಮ ಅವಧಿಯುದ್ದಕ್ಕೂ ನಾಡಿನ ಪ್ರಗತಿಗಾಗಿಯೇ ತುಡಿದ ರೆಡ್ಡಿಯವರು 1948ರಲ್ಲಿ ರಸ್ತೆ ಸಾರಿಗೆ ನಿಗಮ ರಚಿಸಿ, ಶರಾವತಿಯಲ್ಲಿ ಮಹಾತ್ಮ ಗಾಂಧಿ ಜಲವಿದ್ಯುತ್ ಯೋಜನೆ ಸ್ಥಾಪನೆ ಮಾಡಿದರು. 1949ರಲ್ಲಿ ದಂಡು ಪ್ರದೇಶ ಮತ್ತು ಬೆಂಗಳೂರನ್ನು ಒಗ್ಗೂಡಿಸಿ ಬೆಂಗಳೂರು ಕಾರ್ಪೋರೇಷನ್ ಸ್ಥಾಪನೆ ಮಾಡಿದ್ದಲ್ಲದೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ಹುಟ್ಟು ಹಾಕಿದರು.
ಮುಂದೆ ಬೆಂಗಳೂರು ನಗರದಂತೆ ರಾಜ್ಯದ ಎಲ್ಲಾ ನಗರಗಳು ಅಭಿವೃದ್ಧಿಯಾಗಬೇಕೆಂಬ ಉದ್ದೇಶದಿಂದ 1951ರಲ್ಲಿ ಪುರಸಭೆ ಕಾನೂನು ಜಾರಿಗೆ ತಂದರು. 1949ರಲ್ಲಿ ಸಾಂಖ್ಯಿಕ ಇಲಾಖೆಯನ್ನು, 1951ರಲ್ಲಿ ಸ್ಥಳಿಯ ಮತ್ತು ಸ್ವಾಯತ್ತ ಸಂಸ್ಥೆಗಳ ಇಲಾಖೆಯನ್ನು ಅಸ್ತಿತ್ವಕ್ಕೆ ತಂದರು.

ಹೀಗೆ ಹುಡುಕುತ್ತಾ ಹೋದರೆ ಕೆ.ಸಿ.ರೆಡ್ಡಿಯವರ ಐದು ವರ್ಷ ಅವಧಿಯಲ್ಲಿ ಆದ ಅಭಿವೃದ್ಧಿ ಮಹಾಪುರ ಒಂದೆರಡಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ರೆಡ್ಡಿಯವರು ರಾಜ್ಯದ ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ಸ್ಥಳಾಂತರಿಸಿ, ಅಠಾರ ಕಛೇರಿಯಲ್ಲಿದ್ದ ಸಚಿವಾಲಯಕ್ಕೆ ಇಡೀ ರಾಜ್ಯದ ಆಡಳಿತ ನಿಭಾಯಿಸಲು ಸಿಬ್ಬಂದಿ ವರ್ಗ ಮತ್ತು ಕಡತಗಳಿಗೆ ಜಾಗ ಸಾಕಾಗದೇ ದೊಡ್ಡದೊಂದು ಆಡಳಿತ ಕಛೇರಿ ಅಥವಾ ವಿಧಾನಸೌಧ ನಿರ್ಮಾಣಕ್ಕೆ ಟೊಂಕ ಕಟ್ಟಿ ನಿಂತದ್ದು ವಿಶೇಷ.
ಅದರ ಫಲವಾಗಿಯೇ ಮೂವತ್ತಮೂರು ಲಕ್ಷ ರೂಪಾಯಿಗಳ ಅಂದಾಜು ವೆಚ್ಚದಲ್ಲಿ 1951 ಜುಲೈ 13ರಂದು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂರವರ ಮೂಲಕ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಮುಂದೆ ಅದೇ ಶಂಕು ಸ್ಥಾಪನೆ ಅಡಿಗಲ್ಲಿನ ಮೇಲೆ ಕೆಂಗಲ್ ಹನುಮಂತಯ್ಯನವರು ಭವ್ಯವಾದ ವಿಧಾನಸೌಧ ನಿರ್ಮಿಸಿದರು. 1952ರಲ್ಲಿ ಅಧಿಕಾರ ಮುಗಿಸಿದ ರೆಡ್ಡಿಯವರು ಕೇವಲ ರಾಜ್ಯಕ್ಕೆ ಮಾತ್ರವಲ್ಲ, ಕೇಂದ್ರ ಉತ್ಪಾದನ ಸಚಿವರಾಗಿ ಇಡೀ ದೇಶಕ್ಕೇ ಮಾದರಿಯಾದ ಅಭಿವೃದ್ಧಿ ಮಾಡಿದ್ದಾರೆ.
ಹೀಗೆ ದಾಖಲಿಸುತ್ತ ಹೋದರೆ ಕರುನಾಡಿಗೆ ರೆಡ್ಡಿಗಳ ಕೊಡುಗೆಯ ದೊಡ್ಡ ಪರಂಪರೆಯೇ ಬಿಚ್ಚಿಕೊಳ್ಳುತ್ತದೆ. ಈ ಪರಂಪರೆ ಇವತ್ತಿಗೂ ಮುಂದುವರೆದಿದ್ದು; ಬೆಂಗಳೂರಿನ ಅಭಿವೃದ್ಧಿಯಾಗಿ ರೆಡ್ಡಿಗಳು ತಮ್ಮ ಬಹುಪಾಲು ಜಮೀನುಗಳನ್ನೇ ಉಡುಗೊರೆಯಾಗಿ ನೀಡಿದ್ದಾರೆ. ಮಾತ್ರವಲ್ಲ ಈಗಲೂ ನಾಡು-ನುಡಿಗಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ..!
2 Comments