
1956ರ ಏಪ್ರಿಲ್ 2ರಂದು ಜನಿಸಿದ ಶ್ರೀ ಮೊ ಮು ಆಂಜನಪ್ಪ ರೆಡ್ಡಿಯವರಿಗೆ ಈಗ 69ರ ಪ್ರಾಯ. 69ನೇ ಹುಟ್ಟು ಹಬ್ಬದ ಶುಭಾಶಯಗಳೊಂದಿಗೆ ಅವರು ನಡೆದು ಬಂದ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದೆ…
ರೈತಾಪಿ ಅವಿಭಕ್ತ ಕುಟುಂಬದ ಹಿನ್ನಲೆಯುಳ್ಳ ಆಂಜನಪ್ಪ ರೆಡ್ಡಿಯವರು ರಾಜಕೀಯ, ಸಾಹಿತ್ಯ, ಸಂಘಟನೆ, ಸಮಾಜ ಸೇವೆ, ವೈಚಾರಿಕ ಹೋರಾಟ…. ಹೀಗೆ ವಿವಿಧ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮೊ.ಮು.ಆಂಜನಪ್ಪ ರೆಡ್ಡಿ- ಇವತ್ತಿನ ನವ ಉತ್ಸಾಹಿ ಯುವ ಸಮೂಹವನ್ನು ಅಯಸ್ಕಾಂತದ೦ತೆ ಸೆಳೆಯುತ್ತಿರುವ ನಾಯಕರು. ಜೀವನದುದ್ದಕ್ಕೂ ಸಮಾಜ ಸೇವೆ, ಜನಮುಖಿ ರಾಜಕಾರಣ, ಸಂಘಟನೆ, ರೆಡ್ಡಿ ಜಾಗೃತ ಸಮಾವೇಶ, ರೆಡ್ಡಿ ಇತಿಹಾಸ ಪರಂಪರೆಯ ಆಳವಾದ ಸಂಶೋಧನೆ ಸೇರಿ ಹತ್ತು ಹಲವು ರಂಗಗಳಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಂಡಿರುವ ಆಂಜನಪ್ಪ ರೆಡ್ಡಿಯವರು ರೆಡ್ಡಿ ಜನಾಂಗದ ಅಗ್ರಗಣ್ಯ ಹಾಗೂ ಮುಂಚೂಣಿ ನಾಯಕರಾಗಿ ಹಲವಾರು ಯುವಕರಿಗೆ ಪ್ರೇರಕ ಶಕ್ತಿಯಾಗಿದ್ದಾರೆ.

ರೈತಾಪಿ ಅವಿಭಕ್ತ ಕುಟುಂಬದಲ್ಲಿ ಜನಿಸಿ ಹೋರಾಟವನ್ನೇ ಬದುಕಾಗಿಸಿಕೊಂಡ ಆಂಜನಪ್ಪ ರೆಡ್ಡಿಯವರು ಮಾಜಿ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್ ಹಾಗೂ ಹಿರಿಯ ರಾಜಕಾರಣಿಯಾದ ಜಾರ್ಜ್ ಪರ್ನಾಂಡಿಸ್‌ರ೦ತಹ ದಿಗ್ಗಜರ ಒಡನಾಟ ಹೊಂದಿದ್ದವರು. 80ರ ದಶಕದಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು, ಜೆ.ಹೆಚ್.ಪಾಟೀಲ್‌ರೊಂದಿಗೆ ‘ಕ್ರಾಂತಿರ೦ಗ’ ಕಟ್ಟಿದ ಯುವ ಮುಖಂಡರಲ್ಲಿ ಇವರೂ ಒಬ್ಬರು.


2007ರಲ್ಲಿ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯರ ಜೊತೆಗೂಡಿ ಶೋಷಿತ ವರ್ಗದ ಪರವಾಗಿ ನಾಡಿನಾದ್ಯಂತ ಧ್ವನಿ ಎತ್ತಿದವರು. ರಾಜಕೀಯ ಉದ್ಧೇಶದಿಂದ ಚುನಾವಣೆ ಸಮಯಕ್ಕೆ ಸರಿಯಾಗಿ ಪ್ರತ್ಯಕ್ಷವಾಗುವ ಇತರ ನಾಯಕರಂತಲ್ಲದ ಇವರು ಸಾಕಷ್ಟು ಅವಕಾಶಗಳಿದ್ದರೂ ಚುನಾವಣಾ ರಾಜಕೀಯದಿಂದ ಬಹು ದೂರ. ಯಾವುದೇ ಗುರುತರ ಅಧಿಕಾರವಿಲ್ಲದೇ ತಮ್ಮ ಸಿದ್ಧಾಂತ, ವಿಚಾರಗಳಿಂದಲೇ ಜನರಲ್ಲಿ ಅರಿವಿನ ಜ್ಯೋತಿ ಹೊತ್ತಿಸುವುದು ಆಂಜನಪ್ಪ ರೆಡ್ಡಿಯವರ ವಿಶೇಷತೆ.

ಮೌಢ್ಯ, ಕಂದಾಚಾರದ ವಿರುದ್ಧ ಹೋರಾಟ ಮಾಡುತ್ತ ಬಂದಿರುವ ಹಾಗೂ ಅಧಿಕಾರಯುತವಾಗಿ ಮಾತನಾಡುವ ಆಂಜನಪ್ಪ ರೆಡ್ಡಿಯವರು ನಾಡು, ನುಡಿ ಮತ್ತು ಸಾಮಾಜಿಕ ಜಾಗೃತಿಗೆ ಸಂಬ೦ಧಿಸಿದ ಅನೇಕ ಹೋರಾಟ ಮತ್ತು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗಿಯಾದ ಅನುಭವಿ.
ರೆಡ್ಡಿ ಸಮುದಾಯದ ಸಂಘಟನೆ, ಇತಿಹಾಸದ ಅಧ್ಯಯನ, ಸಂಶೋಧನಾ ಕೃತಿ ರಚನೆಯಂತಹ ಹಲವು ವಲಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರೆಡ್ಡಿ ಸಮುದಾಯ ಸಂಘಟನೆ ಮತ್ತು ಜಾಗೃತಿಗಾಗಿ ಹೋರಾಡಿದ ಪ್ರಮುಖ ನಾಯಕರಲ್ಲಿ ಆಂಜನಪ್ಪ ರೆಡ್ಡಿ ಅವರ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತದೆ. ಕರ್ನಾಟಕ ರೆಡ್ಡಿಜನ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಜಂಟಿ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಎರಡು ಬಾರಿ ‘ವೇಮನವಾಣಿ’ ಮಾಸ ಪತ್ರಿಕೆಯ ಸಂಪಾದಕರಾಗಿ ಆಂಜನಪ್ಪ ರೆಡ್ಡಿಯವರು ತಮ್ಮದೇ ಆದ ಹೆಗ್ಗುರುತುಗಳನ್ನು ಮೂಡಿಸಿದ್ದಾರೆ.

ರೆಡ್ಡಿ ಬಂಧುಗಳಲ್ಲಿ ರೆಡ್ಡಿಕುಲದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಹಲವು ಸಮಾವೇಶಗಳನ್ನು ಸಂಘಟಿಸಿದ ಕೀರ್ತಿ ಆಂಜನಪ್ಪ ರೆಡ್ಡಿಯವರಿಗೆ ಸಲ್ಲಬೇಕು.
ಮಹಾಯೋಗಿ ವೇಮನರ ಮಾನವಪ್ರೇಮ, ತತ್ವಾದರ್ಶಗಳ ಪ್ರಚಾರ, ಯುವ ಸಮೂಹಕ್ಕೆ ವೇಮನರನ್ನು ಪರಿಚಯಿಸುವ ನಿಟ್ಟಿನಲ್ಲಿ ಆಂಜನಪ್ಪ ರೆಡ್ಡಿಯವರು ತೊಡಗಿಸಿಕೊಂಡ ರೀತಿ ಬೆರಗು ಮೂಡಿಸುತ್ತದೆ. ಪುಸ್ತಕಕ್ಕೆ ಮಾತ್ರ ಸೀಮಿತವಾಗಿದ್ದ ಯೋಗಿ ವೇಮನರ ಚಿಂತನೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಉತ್ಸಾಹಿ ಯುವ ಜನಾಂಗದ ಹೃದಯಕ್ಕೆ ನಾಟುವ ಶೈಲಿಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಮಂಡಿಸಿದ ಹೆಗ್ಗಳಿಕೆ ಇವರದು.

ದಾರ್ಶನಿಕ ವೇಮನ, ರೆಡ್ಡಿಕುಲ ಇತಿಹಾಸ ಮತ್ತು ಬೆಡಗುಗಳು, ಶಿಕ್ಷಣ ಶಿಲ್ಪಿ ಸರ್ ಸಿ.ಆರ್. ರೆಡ್ಡಿ, ರೆಡ್ಡಿ ಪರಂಪರೆ, ವೇಮನ ಜೀವನ್ಮುಖಿ ನುಡಿಮುತ್ತುಗಳು, ವೇಮನ ನೀತಿ ಪದ್ಯಗಳು ಸೇರಿದಂತೆ ಅನೇಕ ಸಂಶೋಧನಾತ್ಮಕ ಗ್ರಂಥಗಳನ್ನು ರಚಿಸಿ ಯುವ ಜನತೆಯಲ್ಲಿ ಕ್ರಾಂತಿಯ ಕಿಡಿ ಹಚ್ಚಿದ್ದಾರೆ.
ತಮ್ಮ ರಚನಾತ್ಮಕ ಕೆಲಸಗಳ ಮೂಲಕ ನಾಡಿನ ರೆಡ್ಡಿ ಸಮುದಾಯದ ಯುವ ಮನಸ್ಸುಗಳನ್ನು ಅಯಸ್ಕಾಂತದ೦ತೆ ಆಕರ್ಷಿಸುತ್ತಿರುವ ಆಂಜನಪ್ಪ ರೆಡ್ಡಿಯವರು ಇನ್ನೂ ಎಲೆಮರೆ ಕಾಯಿಯಂತೆ ಇರುವುದು ಅವರ ಅವರ ಗುಣ ವಿಶೇಷ. ಇಂತಹ ಸಹೃದಯಿಗೆ ಹೃದಯಪೂರ್ವಕವಾಗಿ ನಾವೆಲ್ಲ ಜನ್ಮ ದಿನದ ಶುಭಾಶಯವನ್ನು ಕೋರುವ ಮೂಲಕ ಆಂಜನಪ್ಪ ರೆಡ್ಡಿಯವರು ಸಮುದಾಯ ಸಂಘಟನೆಯಲ್ಲಿ ಇನ್ನಷ್ಟು, ಮತ್ತಷ್ಟು ಸಕ್ರಿಯರಾಗಿರಬೇಕೆಂದು ಪ್ರೀತಿ ಪೂರ್ವಕವಾಗಿ ಆಶಿಸೋಣ…
| ಮಾಲತೇಶ್ ಎಂ.,
One Comment