Reddy Empire-ರೆಡ್ಡಿಗಳ ಸಾಮ್ರಾಜ್ಯ ಸುವರ್ಣ ವೈಭವ ಬಲ್ಲಿರಾ..? ನೀವರಿಯದ ರೆಡ್ಡಿ ರಾಜರ ಚರಿತ್ರೆ ಇಲ್ಲಿದೆ…

ನಮಸ್ಕಾರ ರೆಡ್ಡಿ ಬಾಂಧವರೆ…
ರೆಡ್ಡಿ ಸಾಮ್ರಾಟರ ಚರಿತ್ರೆ (Reddy Empire) ವೈಭವಪೂರ್ಣವಾದದ್ದು. ಕ್ರಿ.ಪೂ ಎರಡು ನೂರು ವರ್ಷಗಳ ನಂತರ ಬಹುತೇಕ ರೆಡ್ಡಿ ರಾಜರ ಐತಿಹಾಸಿಕ ದಾಖಲೆಗಳು ಲಭ್ಯವಾಗುತ್ತ ಬಂದಿವೆ. ಪ್ರಾಚೀನ ಭಾರತವನ್ನಾಳಿದ ನಂದರು, ಮೌರ್ಯರು, ಶಾತವಾಹನರಿಗಿಂತಲೂ ಮೊದಲು (ರಥಿ) ರೆಡ್ಡಿಗಳು ದಕ್ಷಿಣ ಭಾರತದ ವಿವಿಧ ಪ್ರಾಂತ್ಯಗಳಲ್ಲಿ ಆಳಿದ್ದರು ಎನ್ನುವುದಕ್ಕೆ ಆಂಧ್ರಪ್ರದೇಶದ ಕರ್ನೂಲ್ ಮತ್ತು ಮಹಾರಾಷ್ಟ್ರದ ಪುಣೆ ಬಳಿ ದೊರೆತ ಆಗಿನ ಕಾಲದ ಕೆಲವು ನಾಣ್ಯಗಳೇ ಸಾಕ್ಷಿ. ‘ರೆಡ್ಡಿ’ ಪದದ ಮೂಲವಾದ ‘ರಟ್ಟ’ ಪದ ಏಳನೇ ಶತಮಾನದ ರೆಣಾಟಿ ಶಿಲಾಶಾಸನದಲ್ಲಿ ಕಂಡು ಬಂದಿದೆ.
ಕ್ರಿಸ್ತಪೂರ್ವ ಕಾಲಮಾನದಲ್ಲಿ ಆಳಿದ ರೆಡ್ಡಿರಾಜರ ಚರಿತ್ರೆಯನ್ನು ಸಮಗ್ರವಾಗಿ ಹಿಡಿದಿಡುವುದು ಕಷ್ಟಕರವಾದರೂ ಕ್ರಿ.ಶ 7ನೇ ಶತಮಾನದಿಂದೀಚೆಗೆ ಅನೇಕ ರೆಡ್ಡಿ ಸ್ವತಂತ್ರ ರಾಜರು, ಮಾಂಡಲೀಕರು, ಸಾಮಂತರ ವೈಭವಯುತ ರಾಜ್ಯಭಾರ ನಡೆಸಿದ್ದಾರೆ. ಅಖಂಡ ಭಾರತದಾದ್ಯಂತ ತಮ್ಮ ಸುವರ್ಣ ವೈಭವವನ್ನು ಉಳಿಸಿದ್ದಾರೆ..!
ಆ ಪ್ರಕಾರ ಕೊಂಗನಾಡು ರಟ್ಟ ಪ್ರಭುಗಳ ಆಳ್ವಿಕೆಯ ಕಾಲಮಾನವನ್ನು ‘ಸುವರ್ಣ ಯುಗ’ವೆಂದೇ ತಮಿಳು ಸಾಹಿತ್ಯ ಕೀರ್ತಿಸುತ್ತದೆ. ಹೆಮ್ಮೆಯ ಸಂಗತಿ ಎಂದರೆ ದಕ್ಷಿಣ ಭಾರತದ ಚರಿತ್ರೆಯಲ್ಲಿಯೇ ಪ್ರಪ್ರಥಮ ಬಾರಿಗೆ ಚಿನ್ನದ ನಾಣ್ಯಗಳನ್ನು ಹೊರಡಿಸಿದ ಅಗ್ರಗಣ್ಯ ರಾಜ ಮನೆತನ ಇದು.
ಇವತ್ತಿಗೂ ದಕ್ಷಿಣ ಭಾರತದ ಅಲ್ಲಲ್ಲಿ ಪ್ರಚಲಿತದಲ್ಲಿರುವ ‘ಕೊಂಗು ಬಂಗಾರ’ ಇದೇ ಅರಸರು ಹೊರಡಿಸಿದ ಚಿನ್ನದ ನಾಣ್ಯಗಳ ವಿವಿಧ ರೂಪಗಳಾಗಿವೆ. ಹಾಗೇನೇ ಇಂದಿನ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಮಾನ್ಗಂಗಾ ನದಿ ತೀರದ ‘ಮಾನ್ಪುರ’ವನ್ನು ಕೇಂದ್ರವಾಗಿ ಮಾಡಿಕೊಂಡು ಕುಂತಲವನ್ನು ಪರಿಪಾಲನೆ ಮಾಡಿದ ‘ಕುಂತಾಧೀಶರು’ ಅಥವಾ ‘ಕುಂತಲ ರಟ್ಟ ರಾಜರ’ ಚರಿತ್ರೆ ಕೂಡ ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಅತ್ಯಂತ ಉಜ್ವಲವಾದದ್ದೇ.
ಗುಪ್ತರು ಹಾಗೂ ವಾಕಾಟಕರ ಜೊತೆಗೆ ಸಮರ ಸಾರುತ್ತಲೇ ಪ್ರಾಕೃತ ಭಾಷಾ ಪಾಂಡಿತ್ಯದ ನೆಲೆವೀಡಾಗಿ ತಮ್ಮ ಸಾಮ್ರಾಜ್ಯವನ್ನು ಚರಿತ್ರೆಯಲ್ಲಿ ದಾಖಲಿಸಿ ಅಮರರಾಗಿದ್ದಾರೆ. ಮಹಾರಾಷ್ಟ್ರ ವಿದರ್ಭ ಸೀಮೆಯ ಅಮರಾವತಿ ಜಿಲ್ಲೆಯ ಅಚ್ಚಲಪುರವನ್ನು ಕೇಂದ್ರವಾಗಿಸಿಕೊ೦ಡು ಆಳಿದ ‘ವಿದರ್ಭ ರೆಡ್ಡಿ ರಾಜರ’ ಆಳ್ವಿಕೆಯೂ ಅಮೋಘವಾದದ್ದೇ.
ಇನ್ನು ಕೊಂಕಣವೆ೦ದು ಕರೆಯಲ್ಪಡುವ ಪಶ್ಚಿಮ ಘಟ್ಟ ಪರ್ವತಗಳ ಪಂಕ್ತಿ ಮತ್ತು ಅರಬ್ಬೀ ಸಮುದ್ರದ ಮಧ್ಯದ ವಿಶಾಲ ಪ್ರದೇಶವನ್ನು ಬಾದಾಮಿ ಚಾಲುಕ್ಯ ದೊರೆ ಇಮ್ಮಡಿ ಪುಲಿಕೇಶಿಯ ಅಧೀನದಲ್ಲಿ ಪಾಲನೆ ಮಾಡಿದ ‘ಕೊಂಕಣ ಸಾಮಂತ ರಟ್ಟ ಪ್ರಭುಗಳು’, ಇವರ ನಂತರದ ಅದೇ ಬಾದಾಮಿ ಚಾಲುಕ್ಯರನ್ನು ಸೋಲಿಸಿ ಸ್ವತಂತ್ರ ‘ರಾಷ್ಟ್ರಕೂಟ ಚಕ್ರವರ್ತಿ’ಗಳಾಗಿ ಮೆರೆದ ಇತಿಹಾಸ ಅತ್ಯಂತ ರೋಮಾಂಚನಕಾರಿ.

ಸುಮಾರು ಎರಡೂವರೆ ಶತಮಾನಗಳ ಕಾಲ ವಿಶಾಲ ಸಾಮ್ರಾಜ್ಯವನ್ನಾಳಿದ ರಾಷ್ಟ್ರಕೂಟರು ಭಾರತದ ಇತಿಹಾಸದಲ್ಲಿ ಅವಿಸ್ಮರಣೀಯರೆನ್ನಿಸಿಕೊಂಡಿದ್ದಾರೆ. ಅವರ ಸಾಮ್ರಾಜ್ಯವು ಉತ್ತರದಲ್ಲಿ ಕಾವೇರಿ ವರೆಗೂ, ಪಶ್ಚಿಮದಲ್ಲಿ ಅರಬ್ಬಿ ಸಮುದ್ರ ಮತ್ತು ಮಾಳವದ ವರೆಗೂ, ಪೂರ್ವದಲ್ಲಿ ಆಂಧ್ರ ಪ್ರದೇಶದ ವಾರಂಗಲ್ ಮತ್ತು ಕಡಪ ಜಿಲ್ಲೆ ವರೆಗೂ ವಿಸ್ತರಿಸಿಕೊಂಡಿತ್ತು. ಇಂತಹ ವಿಶಾಲ ಸಾಮ್ರಾಜ್ಯವನ್ನು ಸ್ಥಾಪಿಸಿ ಕನ್ನಡ ಸಂಸ್ಕೃತಿ, ನಾಡು-ನುಡಿಗೆ ಅಮೋಘ ಕೊಡುಗೆ ನೀಡಿದ ರಾಷ್ಟ್ರಕೂಟರು ಅಪ್ಪಟ ಕನ್ನಡಿಗರು ಎನ್ನುವುದು ಹೆಮ್ಮೆಯ ಸಂಗತಿ..!
ಇತ್ತ ಶೂರರೂ, ಶಾಂತಿಪ್ರಿಯರೂ, ಧರ್ಮ ಸಹಿಷ್ಣುಗಳೂ, ಪ್ರಜಾ ಹಿತೈಷಿಗಳೂ ಮತ್ತು ಸಾಹಿತ್ಯ ಪ್ರೇಮಿಗಳೂ ಆದ ‘ಸವದತ್ತಿ ರಟ್ಟರಾಜರ’ ಮುನ್ನೂರು ವರ್ಷಗಳ ಸುಧೀರ್ಘ ಆಳ್ವಿಕೆ ಚರಿತ್ರೆ ಪುಟಗಳ ಮೇರು ಮೈಲುಗಲ್ಲು ಎಂದೇ ಹೇಳಬೇಕು.
- ರಾಷ್ಟ್ರಕೂಟ ಚಕ್ರವರ್ತಿಗಳಿಗೆ ರಾಜಪ್ರತಿನಿಧಿಗಳಾಗಿ ನಾಲ್ಕು ತಲೆಮಾರುಗಳ ಕಾಲ ಪ್ರಬುದ್ಧ ಆಡಳಿತ ನೀಡಿದ ‘ದಂಡೇನ ರಟ್ಟ ರಾಜರು’
- ಆಂಧ್ರಪ್ರದೇಶದ ಗೋದಾವರಿಯ ದಕ್ಷಿಣ ಪ್ರಾಂತ್ಯವನ್ನು ಆಳಿದ ‘ಪೋಲವಾಸ ರೆಡ್ಡಿರಾಜರು’
- ಮಹಾರಾಷ್ಟçದ ವಿದರ್ಭ ಸೀಮೆಯ ಅಕೋಲಾ ವಲಯದಲ್ಲಿ ಕಂಡು ಬಂದ ‘ಅರ್ದಪೂರ್ ರಟ್ಟರಾಜರು’
- ಆಂಧ್ರಪ್ರದೇಶದ ಕಡಪ ಜಿಲ್ಲೆಯ ಗಂಡಿಕೋಟೆ, ಪೊತ್ತಪಿ, ಸಕಿಲಿ ಸೀಮೆಗಳನ್ನು ಪರಿಪಾಲನೆ ಮಾಡಿದ ‘ಪೊತ್ತಪಿ-ಪಾಣೆಂ ಲೆಂಕ ರೆಡ್ಡಿರಾಜರು’
- ತಮಿಳುನಾಡಿನ ಸೇಲಂ ಪ್ರಾಂತ್ಯದ ‘ಸೇಲನಾಡು ರಟ್ಟರಾಜರು’
- ಆಂಧ್ರಪ್ರದೇಶದ ಸುವರ್ಣಮುಖಿ ನದಿ ತೀರದ ಪ್ರದೇಶವನ್ನಾಳಿದ ‘ಪಂಟನಾಡಿನ ರೆಡ್ಡಿರಾಜರು’
- ನಲ್ಗೊಂಡಾ ಜಿಲ್ಲೆಯ ಸೂರ್ಯಪೇಟ ತಾಲ್ಲೂಕಿನ ಪಾರ್ಲಪಾಡು ಪ್ರದೇಶವನ್ನು ಕೇಂದ್ರವಾಗಿಸಿಕೊAಡು ಆಳಿದ ‘ಪಾರ್ಲಪಾಡು ರೆಡ್ಡಿ ಪ್ರಭುಗಳು’
- ಕರ್ನೂಲ್ ಜಿಲ್ಲೆಯನ್ನು ಸುತ್ತುವರಿದು ತುಂಗಭದ್ರಾ ನದಿ ತೀರದಗುಂಟ ಕರ್ನಾಟಕದ ರಾಯಚೂರು, ಮಾನ್ವಿ ಭಾಗಗಳನ್ನು ಪಾಲನೆ ಮಾಡಿದ ‘ವರ್ಧಮಾನಪುರ ರೆಡ್ಡಿರಾಜರು’…
ಹೀಗೆ ಸಾಲು ಸಾಲು ರಾಜ ಮನೆತನಗಳ ಇತಿಹಾಸ ರೆಡ್ಡಿ ಪರಂಪರೆಯನ್ನು ಶ್ರೀಮಂತಗೊಳಿಸಿದೆ.
ಈ ನಡುವೆ ಸುಮಾರು ಎರಡು ಶತಮಾನಗಳ ಕಾಲ ಆಂಧ್ರಪ್ರದೇಶವನ್ನು ಏಕಚಕ್ರಾಧಿಪತ್ಯದ ಅಡಿಯಲ್ಲಿ ಆಳಿದ ಕಾಕತೀಯರ ಸಾಮ್ರಾಜ್ಯ ವಿಸ್ತರಣೆಗೆ ಹೆಗಲು ನೀಡಿ ದುಡಿದ ಸೇನಾಧಿಪತಿಗಳು, ಸಾಮಂತರಲ್ಲಿ ರೆಡ್ಡಿವೀರರೇ ಹೆಚ್ಚಿನ ಪ್ರಮಾಣದಲ್ಲಿರುವುದು ವಿಶೇಷ. ಒಂದರ್ಥದಲ್ಲಿ ರೆಡ್ಡಿವೀರರ ನಿಷ್ಠೆ, ಸಾಹಸ, ಧೀರತನ ಕಾಕತೀಯ ಸಾಮ್ರಾಜ್ಯಕ್ಕೆ ವಜ್ರ ಕವಚವಾಗಿತ್ತೆಂದು ಹಲವು ದಾಖಲೆಗಳು ಹೇಳುತ್ತವೆ.
ಅದೇ ರೀತಿ ಕಾಕತೀಯರ ಪತನಾನಂತರ ಆಂಧ್ರಪ್ರದೇಶದಲ್ಲಿ ತಲೆದೋರಿದ್ದ ಅರಾಜಕತೆಯನ್ನು ಸಮರ್ಥವಾಗಿ ಶಮನ ಮಾಡಿ ಹಿಂದೂ ಧರ್ಮ ಉದ್ಧಾರಕ್ಕಾಗಿ ಟೊಂಕಕಟ್ಟಿ ನಿಂತು ಸ್ವತಂತ್ರ ರಾಜ್ಯ ಸ್ಥಾಪನೆ ಮಾಡಿದ ‘ಕೊಂಡವೀಡು ರೆಡ್ಡಿ ಚಕ್ರವರ್ತಿಗಳ’ ಆಳ್ವಿಕೆಯ ಕಾಲ ತೆಲುಗುನಾಡು ಚರಿತ್ರೆಯಲ್ಲಿಯೇ ಅನನ್ಯವಾದದ್ದು. ಆಂದ್ರಪ್ರದೇಶವನ್ನು ಸುಮಾರು ಒಂದೂವರೆ ಶತಮಾನಕ್ಕೂ ಹೆಚ್ಚುಕಾಲ ಸುಭೀಕ್ಷವಾಗಿಯೂ, ಜನಪರವಾಗಿಯೂ ಪರಿಪಾಲನೆ ಮಾಡಿದ ಘನತೆ ಮತ್ತು ಖ್ಯಾತಿ ಈ ರೆಡ್ಡಿರಾಜರಿಗೆ ಸಲ್ಲುತ್ತದೆ.
ಇದೇ ಮಾದರಿಯಲ್ಲಿ ತೆಲುಗು ನಾಡನ್ನು ಹಂತ ಹಂತವಾಗಿ ಪರಿಪಾಲನೆ ಮಾಡಿದ ರಾಜಮಹೇಂದ್ರವರ, ಕಂದಕೂರು, ಕೋರಕೊಂಡ, ಅಲಂಪುರ್, ಆತ್ಮಕೂರು, ಕೊಂಡೂರು, ಕಾರ್ಪೆಟಿನಗರ, ಗದ್ದಾಲ, ವನಪರ್ತಿ, ದೋಮಕೊಂಡ, ಮುನಗಾಲ, ಪಾಪನ್ನಪೇಟ, ಶಿರ್ನಪಲ್ಲಿ, ಬೋರವೆಲ್ಲಿ, ನೊಸ್ಸಂ, ತರೈಯೂರ್, ದೊಂತ, ತಂಗೆಡ, ಬುಚ್ಚಿರೆಡ್ಡಿ ಪಾಲೆಂ ಸಂಸ್ಥಾನದ೦ತಹ ಹತ್ತಾರು ಸಣ್ಣ ಪುಟ್ಟ ರೆಡ್ಡಿ ರಾಜಮನೆತನಗಳ ಕೊಡುಗೆ ಚಿರ ಸ್ಮರಣೀಯವಾದದ್ದು.
ಕಾಲಗರ್ಭಕ್ಕಿಳಿದು ಈ ಎಲ್ಲಾ ರೆಡ್ಡಿ ಚಕ್ರವರ್ತಿಗಳು, ಸಾಮಂತ ರಾಜರು, ರಾಜಪ್ರತಿನಿಧಿಗಳ ಆಳ್ವಿಕೆಯ ಸುವರ್ಣ ಯುಗವನ್ನು ಆಧಾರ ಸಹಿತವಾಗಿ ಶ್ರೀ ಮೊ ಮು ಆಂಜನಪ್ಪ ರೆಡ್ಡಿ ಅವರು ‘ರೆಡ್ಡಿ ಪರಂಪರೆ’ ಕೃತಿಯಲ್ಲಿ ದಾಖಲಿಸಿದ್ದಾರೆ. ಅದರ ಒಂದೊ೦ದೇ ವಿವರವನ್ನು ನಿಮ್ಮ ಮುಂದೆ ಇಡಲಿದ್ದೇವೆ, ನಿರೀಕ್ಷಿಸಿ…