
ಭೂಗರ್ಭದಲ್ಲಿ ಹುದುಗಿ ಹೋಗಿದ್ದ ರೆಡ್ಡಿ ಜನಾಂಗದ ಇತಿಹಾಸವನ್ನು ಕನ್ನಡಿಗರಿಗೆ ಪರಿಚಯಿಸಿದ (Momu Anjanappa Research of Reddy History) ಮೊದಲ ಕೀರ್ತಿ ಮೊ ಮು ಆಂಜನಪ್ಪ ರೆಡ್ಡಿ ಅವರಿಗೆ ಸಲ್ಲುತ್ತದೆ…
ಸಮಾಜದ ಪ್ರತಿಯೊಂದು ಜನಾಂಗಕ್ಕೂ ಅದರದೇ ಆದ ಸುಧೀರ್ಘ ಇತಿಹಾಸವಿರುತ್ತದೆ. ಈ ಇತಿಹಾಸವನ್ನು ಐತಿಹಾಸಿಕ ದಾಖಲೆಗಳೊಂದಿಗೆ ಹೆಕ್ಕಿ, ಸಂಶೋಧಿಸಿ ನಿಜಾಂಶವನ್ನು ದಾಖಲಿಸುವುದು ಅತ್ಯಂತ ಕಷ್ಟದ ಕೆಲಸ. ಇಂತಹ ಕಷ್ಟಕರ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ಮಾಡಿ ಭೂಗರ್ಭದಲ್ಲಿ ಹುದುಗಿ ಹೋಗಿದ್ದ ರೆಡ್ಡಿ ಜನಾಂಗದ ಇತಿಹಾಸವನ್ನು ಕನ್ನಡಿಗರಿಗೆ ಪರಿಚಯಿಸಿದ ಕೀರ್ತಿ ಮೊ ಮು ಆಂಜನಪ್ಪ ರೆಡ್ಡಿ (Mo mu Anjanappa Reddy) ಅವರಿಗೆ ಸಲ್ಲುತ್ತದೆ.
ಹೌದು, ಕರ್ನಾಟಕ ರೆಡ್ಡಿ ಜನಾಂಗದ ಪೌರಾಣಿಕ ನೆಲೆಯಿಂದ ಹಿಡಿದು ಐತಿಹಾಸಿಕ ತಿರುವುಗಳಲ್ಲಿ ಸಂಚರಿಸಿ ವಾಸ್ತವದ ಆಗು-ಹೋಗುಗಳನ್ನು ತಮ್ಮ ಸಂಶೋಧನಾ ಬರಹಗಳ ಮೂಲಕ ಅತ್ಯಂತ ನಿಖರವಾಗಿ ದಾಖಲಿಸಿದ ಆಂಜನಪ್ಪ ರೆಡ್ಡಿ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ.
ಕರ್ನಾಟಕದಲ್ಲಿ ಮಹಾಯೋಗಿ ವೇಮನ, ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮನವರ ಕುರಿತು ಅನೇಕ ಸಂಶೋಧನೆಗಳು ನಡೆದಿವೆ. ಬಹಳಷ್ಟು ವಿಚಾರಗಳು ಜನಪದ ಸಾಹಿತ್ಯದಲ್ಲಿ ಅಡಕವಾಗಿವೆ. ವೇಮನರ ಕಾವ್ಯಗಳನ್ನು ಕನ್ನಡದಲ್ಲಿ ಎಸ್ ಆರ್ ಪಾಟೀಲರಂತಹ ಹಿರಿಯರು ಬಹಳಷ್ಟು ಶ್ರಮವಹಿಸಿ ‘ವೇಮನ ವಿಶ್ವಗೀತೆ’ ಹೆಸರಿನ ಬೃಹತ್ ಗ್ರಂಥದಲ್ಲಿ ದಾಖಲಿಸಿದ್ದಾರೆ.
ಎಸ್. ಆರ್ ಪಾಟೀಲರ ಹೊರತಾಗಿ ಹೇಮರಡ್ಡಿ ಮಲ್ಲಮ್ಮ ಅವರ ಕುರಿತು ಹಲವು ಜನಪದ ಐತಿಹ್ಯಗಳನ್ನು ಸಂಗ್ರಹಿಸಿ ಮಲ್ಲಮ್ಮನವರ ಜೀವನ ಗಾಥೆಯನ್ನು ಬಿಡಿಬಿಡಿಯಾಗಿ ರಚಿಸಿದ ಪ್ರಯತ್ನಗಳಾಗಿವೆ. ವೇಮನ ಮತ್ತು ಹೇಮರಡ್ಡಿ ಮಲ್ಲಮ್ಮ ಅವರ ಇತಿಹಾಸದ ಹೊರತಾಗಿ ಕನ್ನಡದಲ್ಲಿ ರೆಡ್ಡಿ ಜನಾಂಗದ ಬಗ್ಗೆ ಸಂಶೋಧನೆಗಳು ತೀರಾ ಕಡಿಮೆ ಎಂದೇ ಹೇಳಬೇಕು.
ಹೀಗೆ ಅತೀ ವಿರಳವಾಗಿದ್ದ ರೆಡ್ಡಿ ಜನಾಂಗದ ಇತಿಹಾಸವನ್ನು ಅತ್ಯಂತ ನಿಖರವಾಗಿ ‘ರೆಡ್ಡಿ ಪರಂಪರೆ’ (Reddy Parampare) ಕೃತಿಯಲ್ಲಿ ದಾಖಲಿಸುವ ಮೂಲಕ ಮೊ ಮು ಆಂಜನಪ್ಪ ರೆಡ್ಡಿ ಅವರು ಸಮಸ್ತ ರೆಡ್ಡಿ ಜನಾಂಗ ಸ್ಮರಿಸಬಹುದಾದ ಮಹತ್ಕಾರ್ಯ ಮಾಡಿದ್ದಾರೆ.
ರೆಡ್ಡಿ ಜನರ ಪೌರಾಣಿಕ ಐತಿಹ್ಯಗಳು, ಅಖಂಡ ಭಾರತವನ್ನಾಳಿದ ರೆಡ್ಡಿ ರಾಜರು, ರೆಡ್ಡಿ ಬೆಡಗುಗಳು (ಗೋತ್ರ), ರೆಡ್ಡಿ ಜನರ ಮನೆ ದೇವರುಗಳು, ರೆಡ್ಡಿಕುಲ ಶಾಖೆಗಳು, ಒಳಪಂಗಡಗಳು, ರೆಡ್ಡಿಗಳ ಬೌಗೋಳಿಕ ವ್ಯಾಪ್ತಿ, ರೆಡ್ಡಿ ಜನರ ಸಂಸ್ಕೃತಿ ಮತ್ತು ಸಂಪ್ರದಾಯಗಳು, ರೆಡ್ಡಿಕುಲ ಮರೆಯದ ಮಹನೀಯರು, ಸ್ವಾತಂತ್ರ್ಯ ಹೋರಾಟಗಾರರು, ರೆಡ್ಡಿಕುಲ ಮೊದಲ ಮುಖ್ಯಮಂತ್ರಿಗಳು, ವಿವಿಧ ರಂಗದ ಸಾಧಕರ ಚರಿತ್ರೆಯನ್ನು ಸ್ಪಷ್ಟವಾಗಿ ‘ರೆಡ್ಡಿ ಪರಂಪರೆ’ ಕೃತಿಯಲ್ಲಿ ದಾಖಲಿಸಲಾಗಿದೆ.

ರೆಡ್ಡಿಗಳು ಆಂಧ್ರ ಮೂಲದವರು ಎಂಬ ಊಹಾಪೋಹಕ್ಕೆ ಸ್ಪಷ್ಟತೆಯನ್ನು ಕಲ್ಪಿಸಿ, ರೆಡ್ಡಿ ಜನರು ‘ಅಪ್ಪಟ ಕನ್ನಡಿಗರು’ ಎಂಬ ಐತಿಹಾಸಿಕ ಸತ್ಯವನ್ನು ಸಾಕ್ಷಾಧಾರ ಸಮೇತ ಋಜುವಾತು ಮಾಡಿದ್ದಾರೆ.
ಕೆಲವು ಪುರೋಹಿತಶಾಹಿ ಮನಸ್ಥಿತಿಗಳು ಮಹಾಯೋಗಿ ವೇಮನರನ್ನು ಹುಚ್ಚ, ಕಾಮುಕ ಇತ್ಯಾದಿಯಾಗಿ ಬಣ್ಣಿಸಿ ಊಹಾಪೋಹಗಳ ಇತಿಹಾಸ ರಚಿಸಿದ್ದು ಇದೆ. ಆದರೆ, ಮೊ ಮು ಆಂಜನಪ್ಪ ರೆಡ್ಡಿ ಅವರು ನಿಜಕ್ಕೂ ವೇಮನ ಯಾರು? ಆತನ ವೈಚಾರಿಕ ಹೋರಾಟಗಳು ಎಷ್ಟು ಪ್ರಖರವಾಗಿದ್ದವು? ಜಗತ್ತಿನ ಮಹಾನ್ ತತ್ವಜ್ಞಾನಿಗಳಾದ ಪ್ಲೇಟೋ ಮತ್ತು ಸಾಕ್ರೆಟಿಸ್ ಅವರ ಸಾಲಿನಲ್ಲಿ ವೇಮನರ ತತ್ವಜ್ಞಾನ ಎಂಥದು? ಇತ್ಯಾದಿ ನಿಜ ಇತಿಹಾಸವನ್ನು ಕೆದಕಿ ಯೋಗಿ ವೇಮನರು ಈ ಜಗತ್ತು ಕಂಡ ಮಹಾನ್ ತತ್ವಜ್ಞಾನಿ ಎಂಬುವುದನ್ನು ಕರಾರುವಾಕ್ಕಾಗಿ ಮನವರಿಕೆ ಮಾಡಿದ ಹೆಗ್ಗಳಿಕೆ ಮೊ ಮು ಅವರಿಗೆ ಸಲ್ಲುತ್ತದೆ.
ಪುರಾಣ ಕಾಲದ ರಘುವಂಶದ ಶ್ರೀರಾಮನ ಸುಪುತ್ರರಾದ ಲವ-ಕುಶರೇ ರೆಡ್ಡಿ ಕುಲದ ಮೂಲ ಪುರುಷರು ಮತ್ತು ರೆಡ್ಡಿಗಳು ಮೂಲತಃ ರಘುವಂಶ ಅಥವಾ ಸೂರ್ಯವಂಶಸ್ತರು ಎಂಬುವುದನ್ನು ಅತ್ಯಂತ ಸ್ಪಷ್ಟವಾಗಿ ಪರಿಚಯಿಸಿದ್ದಾರೆ.
ಬಹುಮುಖ್ಯವಾಗಿ ಅಖಂಡ ಭಾರತವನ್ನು ಆಳಿದ ರೆಡ್ಡಿಕುಲ ರಾಜರ ಚರಿತ್ರೆಯನ್ನು ಬಹಳಷ್ಟು ಉತ್ಖನನಗಳನ್ನು ಸಂಶೋಧಿಸಿ, ಚರಿತ್ರೆಯ ಪುಟಪುಟಗಳನ್ನು ಮನನ ಮಾಡಿ ಬಿಡಿಸಿಡಲಾಗಿದೆ. ಕೊಂಗನಾಡು ರಟ್ಟರಾಜರು, ರಾಷ್ಟ್ರಕೂಟ ಚಕ್ರವರ್ತಿಗಳು, ಕೊಂಡವೀಡು ಚಕ್ರವರ್ತಿಗಳು ಸೇರಿದಂತೆ ಹತ್ತಾರು ರೆಡ್ಡಿ ರಾಜವಂಶದ ಚರಿತ್ರೆಯನ್ನು ಮೊ ಮು ಆಂಜನಪ್ಪ ರೆಡ್ಡಿ ಅವರು ಬಹಳ ಸುಧೀರ್ಘವಾಗಿ ತಮ್ಮ ‘ರೆಡ್ಡಿ ಪರಂಪರೆ’ ಕೃತಿಯಲ್ಲಿ ದಾಖಲಿಸಿದ್ದಾರೆ.
ರೆಡ್ಡಿ ಸಮುದಾಯದ ಇತಿಹಾಸದ ಅಧ್ಯಯನ, ಸಂಶೋಧನಾ ಕೃತಿ ರಚನೆಯಂತಹ ಹಲವು ವಲಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ರೆಡ್ಡಿ ಸಮುದಾಯದ ಸಂಶೋಧನೆಯಲ್ಲಿ ಬಹಳಷ್ಟು ಆಳವಾಗಿ ತೊಡಗಿಸಿಕೊಂಡವರಲ್ಲಿ ಆಂಜನಪ್ಪ ರೆಡ್ಡಿ ಅವರ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತದೆ.
ಕರ್ನಾಟಕ ರೆಡ್ಡಿಜನ ಸಂಘದ ಮುಖವಾಣಿ ‘ವೇಮನವಾಣಿ’ ಮಾಸ ಪತ್ರಿಕೆಯ ಸಂಪಾದಕರಾಗಿ ರೆಡ್ಡಿ ಜನಾಂಗದ ಇತಿಹಾಸವನ್ನು ದಾಖಲಿಸುವ ಕಾರ್ಯ ಆರಂಭಿಸಿದ ಆಂಜನಪ್ಪ ರೆಡ್ಡಿಯವರು ಕನ್ನಡಿಗರಿಗೆ ರೆಡ್ಡಿಗಳ ಪರಂಪರೆಯನ್ನು ಸಮಗ್ರವಾಗಿ ಪರಿಚಯಿಸುವಲ್ಲಿ ತಮ್ಮದೇ ಆದ ಹೆಗ್ಗುರುತು ಮೂಡಿಸಿದ್ದಾರೆ.
ಕೇವಲ ‘ರೆಡ್ಡಿ ಪರಂಪರೆ’ ಸಮಗ್ರ ಕೃತಿ ಮಾತ್ರವಲ್ಲದೇ ದಾರ್ಶನಿಕ ವೇಮನ, ರೆಡ್ಡಿಕುಲ ಇತಿಹಾಸ ಮತ್ತು ಬೆಡಗುಗಳು, ಶಿಕ್ಷಣ ಶಿಲ್ಪಿ ಸರ್ ಸಿ.ಆರ್. ರೆಡ್ಡಿ, ವೇಮನ ಜೀವನ್ಮುಖಿ ನುಡಿಮುತ್ತುಗಳು, ವೇಮನ ನೀತಿ ಪದ್ಯಗಳು ಸೇರಿದಂತೆ ಅನೇಕ ಸಂಶೋಧನಾತ್ಮಕ ಗ್ರಂಥಗಳನ್ನು ರಚಿಸಿ ರೆಡ್ಡಿ ಜನಾಂಗದ ಇತಿಹಾಸವನ್ನು ತೆರೆದಿಟ್ಟಿದ್ದಾರೆ.
ತಮ್ಮ ರಚನಾತ್ಮಕ ಕೆಲಸಗಳ ಮೂಲಕ ನಾಡಿನ ರೆಡ್ಡಿ ಸಮುದಾಯದ ಯುವ ಮನಸ್ಸುಗಳನ್ನು ಅಯಸ್ಕಾಂತದಂತೆ ಆಕರ್ಷಿಸುತ್ತಿರುವ ಆಂಜನಪ್ಪ ರೆಡ್ಡಿಯವರು ಇನ್ನೂ ಎಲೆಮರೆ ಕಾಯಿಯಂತೆ ಇರುವುದು ಅವರ ಅವರ ವಿಶೇಷ ಗುಣ. ಇಂತಹ ಸಹೃದಯಿ ಸಂಶೋಧಕರಾದ ಆಂಜನಪ್ಪ ರೆಡ್ಡಿಯವರಿಗೆ ಭಗವಂತ ಮತ್ತಷ್ಟು ಸಂಶೋಧನಾ ಸಾಮರ್ಥ್ಯವನ್ನು ಕರುಣಿಸಲಿ ಎಂದು ಆಶಿಸೋಣ…
One Comment