History

Uyyalawada Narasimha Reddy- ಅಪ್ರತಿಮ ದೇಶಭಕ್ತ ಉಯ್ಯಾಲವಾಡ ನರಸಿಂಹರೆಡ್ಡಿ | ಜಯಂತೋತ್ಸವದ ವಿಶೇಷ ಲೇಖನ

Uyyalawada Narasimha Reddy Legend of Rayalaseema

ರಾಯಲಸೀಮೆಯ ನೆಲದಲ್ಲಿ ಬೆಳೆದ, ಬಳ್ಳಾರಿಯ ಮಣ್ಣಿನಲ್ಲಿ ಗುರುತು ಬಿಟ್ಟ, ಆಂಧ್ರ-ಕರ್ನಾಟಕದ ಹೃದಯದಲ್ಲಿ ಸದಾಕಾಲವೂ ಪ್ರತಿಧ್ವನಿಸುವ ‘ಅಪ್ರತಿಮ ರಾಷ್ಟ್ರಪ್ರೇಮಿ- ಉಯ್ಯಾಲವಾಡ ನರಸಿಂಹರೆಡ್ಡಿ’ (Uyyalawada Narasimha Reddy) ಜಯಂತ್ಯೋತ್ಸವದ ನಿಮಿತ್ತ ಅವರ ರೋಚನ ವೀರ ಜೀವನ ಕಥನ ಇಲ್ಲಿದೆ…

ಪ್ರತಿ ವರ್ಷ ನವೆಂಬರ್ 24 ಬಂತೆಂದರೆ ರಾಯಲಸೀಮೆಯ ನೆಲವಾಸಿಗಳು, ಬಳ್ಳಾರಿ-ಅನಂತಪುರದ ಗಾಳಿ, ಕಡಪದ ಕಲ್ಲುಬೆಟ್ಟಗಳು, ನೊಸ್ಸಂ ಸಂಸ್ಥಾನದ ಹಳೆ ಕೋಟೆಗಳು ಒಂದಲ್ಲೊಂದು ರೀತಿಯಲ್ಲಿ ಒಂದೇ ಹೆಸರನ್ನು ಮತ್ತೆ ಮತ್ತೆ ಪುನರುಚ್ಚರಿಸುತ್ತವೆ ಅದು- ಉಯ್ಯಾಲವಾಡ ನರಸಿಂಹರೆಡ್ಡಿ!!!

ಅಧಿಕೃತ ದಾಖಲೆಗಳು ಕಡಿಮೆ ಇದ್ದರೂ ಜನಪದ ಹಾಡುಗಳಲ್ಲೇ ಹಾಸುಹೊಕ್ಕಾಗಿರುವ ಮಹಾನ್ ರಾಷ್ಟ್ರಪ್ರೇಮಿ ಈತ. ಅಪ್ರತಿಮ ಪರಾಕ್ರಮ ಮತ್ತು ಉರಿಯುವ ರಾಷ್ಟ್ರಭಕ್ತಿಯ ಪ್ರತಿರೂಪವಾಗಿರುವ ಉಯ್ಯಾಲವಾಡ ನರಸಿಂಹರೆಡ್ಡಿ ಹೆಸರು ತೆಲುಗು ನೆಲದಲ್ಲಿ ಮಾತ್ರವಲ್ಲದೇ ಕರ್ನಾಟಕದ ಬಳ್ಳಾರಿ, ಕೊಪ್ಪಳ, ಇತರ ಗಡಿ ಪ್ರದೇಶಗಳಲ್ಲೂ ಪ್ರಜ್ವಲಿಸುತ್ತಲೇ ಇದೆ.

ಇದನ್ನೂ ಓದಿ: Gonaganna Reddy- ಮಹಾ ಪರಾಕ್ರಮಿ ಗೋನಗನ್ನಾ ರೆಡ್ಡಿ | ಇದೋ ರಾಯಚೂರು ರೆಡ್ಡಿವೀರನ ಕಥನ

ರಾಯಲಸೀಮೆಯ ನೆಲದಲ್ಲಿ ಬೆಳೆದ ವೀರ

ನರಸಿಂಹರೆಡ್ಡಿ ಜನಿಸಿದ ರೂಪನಗುಡಿ, ಬೆಳೆದ ಉಯ್ಯಾಲವಾಡ- ಈ ಎರಡು ಊರುಗಳು ಇಂದು ಸಾಮಾನ್ಯ ನಕ್ಷೆಯಲ್ಲಿರುವ ಬಿಂದುಗಳಲ್ಲ; ಅವು ದೇಶಭಕ್ತಿ ಎಂಬ ಶಬ್ದವನ್ನು ರಕ್ತದಲ್ಲಿ ಹೊತ್ತಿದ್ದ ವೀರನ ಬಾಲ್ಯ-ಯೌವನಗಳಿಗೆ ಸಾಕ್ಷಿಯಾದ ಪವಿತ್ರ ಭೂಮಿಗಳು. ನರಸಿಂಹರೆಡ್ಡಿ ಕಾಲದಲ್ಲಿ ನೊಸ್ಸಂ ಸಂಸ್ಥಾನದ ವ್ಯಾಪ್ತಿಗೆ ಇಂದಿನ ಕಡಪ, ಕರ್ನೂಲು, ಅನಂತಪುರ ಮತ್ತು ಕರ್ನಾಟಕದ ಬಳ್ಳಾರಿ ಒಳಪಟ್ಟು ಒಟ್ಟು ಅರವತ್ತಾರು ಗ್ರಾಮಗಳು ಸೇರಿದ್ದವು. ಈ ಎಲ್ಲ ಪ್ರದೇಶಗಳಲ್ಲಿ ನರಸಿಂಹರೆಡ್ಡಿಯ ಆಡಳಿತದ ಗುರುತು ಇಂದು ಸಹ ಮಣ್ಣಿನ ವಾಸನೆಯಂತೆ ಅರಿವಿಗೆ ಬರುತ್ತಲೇ ಇರುತ್ತದೆ.

ನರಸಿಂಹರೆಡ್ಡಿ ಜನಿಸಿದ ಕಾಲದಲ್ಲಿ ಆಂಗ್ಲರ ಅಧಿಪತ್ಯ ವೇಗವಾಗಿ ಬೇರೂರುತ್ತಿತ್ತು. ಗ್ರಾಮ-ಮಟ್ಟದ ನಾಯಕತ್ವ, ಸ್ಮಶಾನಗಳಲ್ಲಿ ಹುಟ್ಟುವ ಶೌರ್ಯ, ಜನಪದ ಕವನಗಳಲ್ಲಿರುವ ಧೈರ್ಯ ಇವೆಲ್ಲವನ್ನು ಒಟ್ಟು ಸೇರಿಸಿ ಒಂದು ಬಂಡಾಯ ರೂಪಿಸುವಷ್ಟು ತೀವ್ರ ಶಕ್ತಿ ಕೆಲವರಲ್ಲೇ ಕಂಡುಬರುತ್ತಿತ್ತು. ಅಂತಹ ಕೆಲವೇ ಜನರ ಸಾಲಿನಲ್ಲಿ ನರಸಿಂಹರೆಡ್ಡಿ ಅಗ್ರಗಣ್ಯ.

ಉಯ್ಯಾಲವಾಡ ನರಸಿಂಹರೆಡ್ಡಿ
ಮಾತನಾಡುವ ಕಲ್ಲು, ಹಾಡುವ ಹಕ್ಕಿ, ಕೇಳುವ ಗಾಳಿ

ನರಸಿಂಹರೆಡ್ಡಿ ಕುರಿತ ಜನಪದ ಗಾಥೆಗಳು ಕೇವಲ ಗಾಳಿ ಮಾತಲ್ಲ, ಅದು ಆ ಕಾಲದ ಜನರ ಭಾವನಾತ್ಮಕ ದಾಖಲೆ. ಅವನ ಬಾಯಲ್ಲಿ ಕಲ್ಲು ತುಂಬಿಕೊAಡು ಊದುತ್ತಿದ್ದರೆ ಮರದ ಮೇಲೆ ಕುಳಿತಿದ್ದ ಹಕ್ಕಿಗಳು ಕೆಳಗೆ ಬಿದ್ದುವೆಂದು ಹೇಳುವ ಕತೆಗಳು ದೈಹಿಕ ಸಾಮರ್ಥ್ಯವನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸುತ್ತವೆ.

ರೂಪನಗುಡಿಯಲ್ಲಿರುವ ‘ನರಸಿಂಹರೆಡ್ಡಿ ಗೋಡೆಗಳು’ ಇಂದಿಗೂ ಕಾಲದ ಹೊಡೆತಗಳಿಗೆ ಮಣಿಯದೆ ನಿಂತಿವೆ. ಅವು ಕೇವಲ ಕಲ್ಲಿನ ಗೋಡೆಗಳಲ್ಲ; ನರಸಿಂಹರೆಡ್ಡಿ ಎಂತಹ ಆಡಳಿತಗಾರನಾಗಿದ್ದ ಮತ್ತು ಯಾವ ಗುಣಮಟ್ಟ ವ್ಯವಸ್ಥೆ ಅನುಸರಿಸಿದ್ದ ಎಂಬುದನ್ನು ಜಗತ್ತಿಗೆ ಹೇಳುವ ನಿಶ್ಯಬ್ದ ಸಾಕ್ಷಿಗಳು.

ನರಸಿಂಹರೆಡ್ಡಿ ಯುದ್ಧದೋಷ್ಮಿಯಾಗಿದ್ದರೂ, ಆತನ ಮನಸ್ಸಿನೊಳಗೆ ಒಬ್ಬ ಪ್ರಕಾಶಮಾನ ದೈವಭಕ್ತನೂ, ಸಾಹಿತ್ಯಪೋಷಕನೂ ಇದ್ದನು. ಕೋಟೆಯ ಒಳಗಿನ ದುರ್ಗಾಮಾತೆಯ ದೇಗುಲದಲ್ಲಿ ಅವನು ಮಾಡುವ ಪೂಜೆಗಳಲ್ಲಿ ಒಂದು ವಿಭಿನ್ನ ತೇಜಸ್ಕಾರ ಕಂಡುಬರುತ್ತಿತತೆ. ಜಗನ್ನಾಥಪುರದ ಬೆಟ್ಟದ ಮೇಲಿರುವ ಆದಿಶಕ್ತಿ ದೇಗುಲದಲ್ಲಿ ನರಸಿಂಹರೆಡ್ಡಿಯು ಐನೂರು ಆಂಗ್ಲ ಸೈನಿಕರ ಎದುರು ಹೋರಾಡಿದನೆಂದು ಜನಪದ ಗೀತೆಗಳು ಭಾವಗರ್ಭಿತವಾಗಿ ಹೇಳುತ್ತವೆ.

ಇದನ್ನೂ ಓದಿ: Vishwakavi Vemana- ಜನಮನ ಕಾಡುವ ವಿಶ್ವಕವಿ ವೇಮನ | ಸರ್ವಧರ್ಮ ಸೌಹಾರ್ದತೆ ಸಾರಿದ ಸಂತನ ವಿಶ್ವಸಂದೇಶ

ಬಂಡಾಯದ ಪ್ರಖರ ಜ್ವಾಲೆ

1843ರಿಂದ 1847ರ ವರೆಗೆ ನರಸಿಂಹರೆಡ್ಡಿ ನೇರವಾಗಿ ಆಂಗ್ಲ ಸರ್ಕಾರದ ವಿರುದ್ಧ ಹೋರಾಡಿದದ್ದು ಭಾರತೀಯ ಸ್ವಾತಂತ್ರ‍್ಯ ಹೋರಾಟದ ಪ್ರಥಮ ದೊಡ್ಡ ಬಂಡಾಯಗಳಲ್ಲಿ ಒಂದೆದು ಇತಿಹಾಸಜ್ಞರು ಹೇಳುತ್ತಾರೆ. ನೆಲದ ತೆರಿಗೆ ಹೆಚ್ಚಿಸಿದ್ದಕ್ಕೆ ವಿರೋಧ, ರೈತರ ಸಮಸ್ಯೆಯ ಕುರಿತ ಆಕ್ರೋಶ, ಇನಾಮುಗಳ ರದ್ದು, ಸ್ಥಳೀಯ ಅಧಿಕಾರಿಗಳ ಅನ್ಯಾಯ ಎಲ್ಲವನ್ನೂ ಒಂದೇ ಬಂಡಾಯದ ಜ್ವಾಲೆಯಾಗಿ ಪರಿವರ್ತಿಸಿದ ಕೀರ್ತಿ ನರಸಿಂಹ ರೆಡ್ಡಿಯದು!

1846ರಲ್ಲಿ ಕೋವೆಲಕುಂಟ್ಲದ ತಹಶೀಲ್ದಾರರನ್ನು ಬಂಧಿಸಿ ಕರೆದುಕೊಂಡು ಹೋದ ಘಟನೆಯೇ ಅವನ ಧೈರ್ಯಕ್ಕೆ ಸಾಕ್ಷಿ. ಅದೇ ವರ್ಷ ಮಾಡಿದ್ದ ಗಿದ್ದಲೂರು ಯುದ್ಧ, ಮುಂಡ್ಲಪಾಡು ಯುದ್ಧ, ಜಗನ್ನಾಥಪುರದ ಚಾರಿತ್ರಿಕ ಕದನ ಇವೆಲ್ಲವೂ ಆಂಗ್ಲ ಅಧಿಕಾರಿಗಳಿಗೆ ನರಸಿಂಹರೆಡ್ಡಿ ಎಂಬ ಹೆಸರು ಒಂದು ದುಸ್ವಪ್ನದಂತೆ ಪರಿಣಮಿಸಿತು.

ಬೋಯ ಸೇನೆ ನಿರ್ಮಾತೃ

ನರಸಿಂಹರೆಡ್ಡಿ ಅತ್ಯಂತ ಗಾಢವಾಗಿ ಕಟ್ಟಿದ್ದ ಬೋಯ ಸೇನೆ, ಆತನಿಗೆ ಜನಪ್ರಿಯತೆ ತಂದುಕೊಟ್ಟದ್ದು ಮಾತ್ರವಲ್ಲ; ಆತನ ಬಂಡಾಯಕ್ಕೆ ಜೀವ ತುಂಬಿದ ನರಸಿಂಹಧಾಮವಾಗಿತ್ತು. ಸುಂಕೇಶಲ, ಮುಕ್ಮಳ್ಳ, ಮುದಿಗೋಡು, ಕನಾಲ, ನಂಜಾಮಲ ಮುಂತಾದ ಗ್ರಾಮಗಳ ಬೋಯರು ನರಸಿಂಹರೆಡ್ಡಿಯೊದಿಗಿನ ಕೃತಜ್ಞತೆಯಿಂದ, ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ ಹೋರಾಡಿದರು.

ನರಸಿಂಹರೆಡ್ಡಿಯ ನಾಲ್ಕು ನಂಬಿಕಸ್ಥ ಭಂಟರಲ್ಲಿ ಈ ಬೋಯ ಸೇನೆಯ ಸೀತುಡು ಅತ್ಯಂತ ಪ್ರಖ್ಯಾತ. ಅವನ ಯುದ್ಧಕೌಶಲ್ಯ, ನಿಷ್ಠೆ ಸವಾಲುಗಳ ಸೀತುಡುವ ಕಥೆಗಳು ರಾಯಲಸೀಮೆಯ ಪ್ರತಿಯೊಂದು ಶಿಲೆಯಲ್ಲಿ, ಬೆಟ್ಟದಲ್ಲಿ, ನೊರೆಯಲ್ಲಿ ಕೇಳಿಬರುತ್ತವೆ.

ಉಯ್ಯಾಲವಾಡ ನರಸಿಂಹರೆಡ್ಡಿ ಕಾಲ್ಪನಿಕ ಎಐ ಚಿತ್ರ
ಬ್ರಿಟಿಷರ ಕಪಟ ಆಟ

ನರಸಿಂಹರೆಡ್ಡಿಯನ್ನು ನೇರ ಯುದ್ಧದಲ್ಲಿ ಜಯಿಸುವುದು ಸಾಧ್ಯವಿಲ್ಲವೆಂದು ಆಂಗ್ಲರು ಅರಿತುಕೊಂಡ ನಂತರ, ಅವರು ಸಂಚು ರೂಪಿಸಿದರು. ಕಾಪು ಮಹಿಳೆಗೆ ಆಮಿಷವಿಟ್ಟು ಅಥವಾ ಅಡಿಗೆಯವಳನ್ನು ಬಳಸಿಕೊಂಡು ನರಸಿಂಹರೆಡ್ಡಿಯನ್ನು ಸೆರೆ ಹಿಡಿದರೆಂದು ಎರಡು ಪರಂಪರೆ ಕಥೆಗಳು ಹೇಳುತ್ತವೆ. ಆದರೆ ಯಾವುದೇ ಕಥೆಯನ್ನು ನಂಬಿದರೂ, ಒಂದು ಮಾತ್ರ ಸತ್ಯ; ನರಸಿಂಹರೆಡ್ಡಿಯನ್ನು ನ್ಯಾಯಯುದ್ಧದಲ್ಲಿ ಜಯಿಸಲಿಲ್ಲ, ಸಂಚಿನಲ್ಲಿ ಮಾತ್ರ ಹಿಡಿದರು!

1846ರ ಅಕ್ಟೋಬರ್ 6ರಂದು ಜಗನ್ನಾಥಪುರ ಬೆಟ್ಟದಲ್ಲಿ ಆತನನ್ನು ಬಂಧಿಸಿ ಐದು ತಿಂಗಳ ಕಾಲ ಜೈಲಿಗೆ ಹಾಕಿ ಕೊನೆಗೆ 1847ರ ಫೆಬ್ರವರಿ 22ರಂದು ಕೋವೆಲಕುಂಟ್ಲದಲ್ಲಿ ಸಾವಿರಾರು ಜನರ ಮುಂದೆ ನೇಣಿಗೇರಿಸಿದರು. ವಿಚಿತ್ರ ವೈಪರಿತ್ಯವೆಂದರೆ, ನರಸಿಂಹರೆಡ್ಡಿ ನೇಣಿಗೇರಿಸಿದ ನೂರನೇ ವರ್ಷವೇ 1947ಕ್ಕೆ ಭಾರತಕ್ಕೆ ಸ್ವಾತಂತ್ರ‍್ಯ ದೊರಕಿತು!

ಇದನ್ನೂ ಓದಿ: Reddy Suryavamsa- ರೆಡ್ಡಿಗಳು ಶ್ರೀರಾಮನ ವಂಶಸ್ಥರು 

ನರಸಿಂಹರೆಡ್ಡಿ ಇಂದಿಗೂ ಜೀವಂತ!

1847ರಲ್ಲಿಯೇ ನರಸಿಂಹರೆಡ್ಡಿ ದೇಹ ನಿಶ್ಚಲವಾದರೂ, ಜನಪದದಲ್ಲಿ ಆಯ ಅಜರಾಮರ. ರಾಯಲಸೀಮೆ ಮತ್ತು ಬಳ್ಳಾರಿ ಪ್ರದೇಶದ ಬೆಟ್ಟಗಳು ಇಂದು ಸಹ ಆತನ ಹೆಸರನ್ನು ಗಾಳಿಯಲ್ಲಿ ಹೇಳುತ್ತವೆ. ಆತನ ಬಂಡಾಯ, ಆತನ ದೇಶಪ್ರೇಮ, ಅವನ ಪರಾಕ್ರಮ ಇವೆಲ್ಲವೂ ಪ್ರತೀ ಜಯಂತೋತ್ಸವದಲ್ಲಿ ಹೊಸ ರೂಪದಲ್ಲಿ ಪ್ರಜ್ವಲಿಸುತ್ತವೆ.

ಈ ನವೆಂಬರ್ 24ರ ನರಸಿಂಹರೆಡ್ಡಿ ಜಯಂತೋತ್ಸವ ಕೇವಲ ಸ್ಮರಣೋತ್ಸವವಲ್ಲ, ಅದು ಭಾರತೀಯ ಸ್ವಾತಂತ್ರ‍್ಯ ಹೋರಾಟದ ಅಜ್ಞಾತ ವೀರನಿಗೆ ಸಲ್ಲಿಸುವ ರಾಷ್ಟ್ರಕೃತಜ್ಞತೆ. ರಾಯಲಸೀಮೆಯ ನೆಲದಲ್ಲಿ ಬೆಳೆದ, ಬಳ್ಳಾರಿಯ ಮಣ್ಣಿನಲ್ಲಿ ಗುರುತು ಬಿಟ್ಟ, ಆಂಧ್ರ-ಕರ್ನಾಟಕದ ಹೃದಯದಲ್ಲಿ ಸದಾಕಾಲವೂ ಪ್ರತಿಧ್ವನಿಸುವ ‘ಅಪ್ರತಿಮ ರಾಷ್ಟ್ರಪ್ರೇಮಿ- ಉಯ್ಯಾಲವಾಡ ನರಸಿಂಹರೆಡ್ಡಿ’ ಇಂದು ಸಹ ಜಾಗೃತ, ಜೀವಂತ, ಜ್ಯೋತಿರ್ಮಯಿ!

ಲೇಖಕರು: ಮೊ.ಮು. ಆಂಜನಪ್ಪ ರೆಡ್ಡಿ

MoMu Anjanappa Reddy Janapath- ಮೊ ಮು ಆಂಜನಪ್ಪ ರೆಡ್ಡಿಯವರ ಜನಪಥ | ಜನಸೇವೆಯ ಹಾದಿಯ ಪ್ರೇರಣಾದಾಯಕ ಕಥನ

Leave a Reply

Your email address will not be published. Required fields are marked *

Related Articles

Back to top button