
ಮಹಾಪರಾಕ್ರಮಿ ಗೋನಗನ್ನಾರೆಡ್ಡಿ (Gonaganna Reddy) ಮೂಲತಃ ಕರ್ನೂಲ್ – ಆಂಧ್ರ ಪ್ರದೇಶ ಮೂಲದವನಾದರೂ, ನಮ್ಮ ರಾಯಚೂರು ಪ್ರದೇಶವನ್ನು ಗೆದ್ದು, ಕೋಟೆ ಕೊತ್ತಲಗಳನ್ನು ನಿರ್ಮಿಸಿ ಸಮೃದ್ಧ ಆಡಳಿತ ನಡೆಸಿ ‘ರಾಯಚೂರು ರೆಡ್ಡಿರಾಜ’ ಎಂದೇ ಖ್ಯಾತನಾಗಿದ್ದಾನೆ…
ತನ್ನ ವೀರತ್ವದಿಂದ ಇತಿಹಾಸದಲ್ಲಿ ಮಹಾಪರಾಕ್ರಮಿ ಎಂದೇ ಗೋನಗನ್ನಾ ರೆಡ್ಡಿ (Gona ganna Reddy) ಸುಪ್ರಸಿದ್ಧ. ವರ್ಧಮಾನಪುರ ರೆಡ್ಡಿರಾಜ ವಂಶಕ್ಕೆ ಸೇರಿದ ಈ ಪರಾಕ್ರಮಶಾಲಿ ಸಾಮಂತನ ಹೆಸರು ಕೇವಲ ಯುದ್ಧಕೌಶಲ್ಯದಲ್ಲೇ ಅಲ್ಲದೆ, ರಾಜ್ಯಾಡಳಿತ, ಜನಪಾಲನೆ, ವೀರಶೌರ್ಯ ಮತ್ತು ಸಾಹಿತ್ಯ ಪೋಷಣೆಗಳಲ್ಲಿಯೂ ದೈತ್ಯ ಮಹತ್ವ ಪಡೆದಿದೆ.
ಸದರಿ ರೆಡ್ಡಿವೀರ ಗೋನಗನ್ನಾ ರೆಡ್ಡಿಯ ಪಾತ್ರವನ್ನು 2015ರಲ್ಲಿ ಬಿಡುಗಡೆಯಾದ ತೆಲುಗಿನ ಬಹುಚರ್ಚಿತ ಚಿತ್ರ ‘ರುದ್ರಮದೇವಿ’ಯಲ್ಲಿ (Rudhramadevi Movie) ನಟ ಅಲ್ಲು ಅರ್ಜುನ್ ಅತಿ ಜೀವಂತವಾಗಿ ನಟಿಸಿದ್ದಾರೆ. ಕಾಕತೀಯ ಸಾಮ್ರಾಜ್ಯದ ಶಕ್ತಿಪೀಠದಲ್ಲಿ ರುದ್ರಮಹಾದೇವಿಯ ನಂತರ ಜನಮನ ಸೆಳೆದ ವ್ಯಕ್ತಿತ್ವ ಎಂದರೆ ಅದು ಗೋನಗನ್ನಾ ರೆಡ್ಡಿಯದೇ.

ವರ್ಧಮಾನಪುರ ರೆಡ್ಡಿರಾಜ
ಪ್ರಾಚೀನ ‘ವರ್ಧಮಾನಪುರ’ ಎನ್ನುವುದು ಇಂದು ಕರ್ನಾಟಕದ ರಾಯಚೂರು – ಮಾನ್ವಿ ಕ್ಷೇತ್ರಗಳು ಮತ್ತು ಆಂಧ್ರಪ್ರದೇಶದ ಕರ್ನೂಲ್ ಭಾಗಗಳನ್ನು ವ್ಯಾಪಿಸುತ್ತಿದ್ದ ಪ್ರದೇಶ. ತುಂಗಭದ್ರಾ ನದಿಯ ಎರಡೂ ಕಡೆಯಲ್ಲಿದ್ದ ಈ ಸೀಮೆಯನ್ನು ಪ್ರಾಂತೀಯ ರಾಜ್ಯಗಳ ಕಾಲದಲ್ಲಿ ‘ಕಂದೂರು ಸೀಮೆ’ ಎಂದೂ ಕರೆಯಲಾಗುತ್ತಿತ್ತು.
ಇಂದಿನ ರಾಯಲಸೀಮೆಯ ಒಂದು ಭಾಗವೂ ಈ ಪ್ರದೇಶಕ್ಕೆ ಸೇರಿದ್ದುದರಿಂದ ರೆಡ್ಡಿರಾಜರ ಸಾಂಸ್ಕೃತಿಕ ಪರಂಪರೆ ಕನ್ನಡ-ತೆಲುಗು ಸಂಸ್ಕೃತಿಗಳ ಸಂಗಮವಾಗಿಯೇ ಈ ಪ್ರದೇಶದಲ್ಲಿ ಬೆಳೆಯಿತು.
ಕಾಕತೀಯ ಸಾಮ್ರಾಜ್ಯದಲ್ಲಿ ರೆಡ್ಡಿರಾಜರ ಪ್ರಾಬಲ್ಯ
ಬೀದರನಿಂದ ಬಂಗಾಳ ಕೊಲ್ಲಿಯ ತನಕ ವಿಸ್ತರಿಸಿದ್ದ ಕಾಕತೀಯ ಸಾಮ್ರಾಜ್ಯ ಹಲವಾರು ಸಾಮಂತ ರಾಜರ ಬಲದಿಂದ ನಿಂತಿತ್ತು. ವರ್ಧಮಾನಪುರ ರೆಡ್ಡಿ ರಾಜರು ಅವರಲ್ಲಿ ಪ್ರಮುಖರಾದವರು. ಇವರು ಕೇವಲ ಯುದ್ಧವೀರರಲ್ಲದೆ, ರಾಜಕೀಯ ಬುದ್ಧಿವಂತಿಕೆ, ರಾಜ್ಯಪೋಷಣೆ ಮತ್ತು ಶಿಸ್ತಿನ ಆಡಳಿತದಿಂದ ಕಾಕತೀಯರ ವಿಶ್ವಾಸವನ್ನು ಸಂಪಾದಿಸಿದ್ದರು.
ರಾಷ್ಟ್ರಕೂಟ ಅಮೋಘವರ್ಷ ನೃಪತುಂಗನು ‘ಕವಿರಾಜಮಾರ್ಗ’(Kavirajamarga) ರಚಿಸಿದಂತೆ, ಈ ವಂಶದ ನಾಲ್ಕನೇ ತಲೆಮಾರಿನ ರಾಜನಾದ ಗೋನಗನ್ನಾರೆಡ್ಡಿಯು ತನ್ನ ಸಹೋದರ ವಿಠಲರೆಡ್ಡಿ ಮತ್ತು ಕವಿ ಬುದ್ದಿರೆಡ್ಡಿ ಸೇರಿ ‘ರಂಗನಾಥ ರಾಮಾಯಣ’ (Ranganatha Ramayana) ಎಂಬ ತೆಲುಗು ಕಾವ್ಯವನ್ನು ರಚಿಸಿದ್ದಾರೆ. ಈ ಗ್ರಂಥವೇ ಇಂದಿಗೂ ರೆಡ್ಡಿರಾಜರ ನಿಖರವಾದ ವಂಶಾವಳಿಯನ್ನು ತಿಳಿಸುವ ಅತ್ಯಂತ ನಿಖರ ಮೂಲವಾಗಿದೆ.
ಪರಾಕ್ರಮದ ಸಿಂಹ ಗೋನಗನ್ನಾ ರೆಡ್ಡಿ
‘ರಂಗನಾಥ ರಾಮಾಯಣ’ ಕಾವ್ಯದ ಪೀಠಿಕೆ ಪ್ರಕಾರ ವರ್ಧಮಾನಪುರ ರೆಡ್ಡಿ ಸಾಮಂತ ರಾಜರ ಮೂಲಪುರುಷರ ಹೆಸರು ಕಾಟ್ರೆಡ್ಡಿ. ಅವನ ಮಗ ರುದ್ರಿರೆಡ್ಡಿ. ಆದರೆ ಇವರ ಆಳ್ವಿಕೆಯ ವಿವರಗಳು ಶಾಸನಗಳಲ್ಲಿ ದೊರೆಯದೇ ಇರುವುದರಿಂದ ಇತಿಹಾಸವು ಮೂರನೇ ತಲೆಮಾರಿನವರೆಗೂ ಮಾತ್ರ ಸ್ಪಷ್ಟವಾಗಿದೆ.
ಈ ವಂಶದ ಖ್ಯಾತನಾಮರಲ್ಲಿ ಒಬ್ಬರಾದ ಗೋನಬುದ್ದಾರೆಡ್ಡಿ, ಕಾಕತೀಯರ ಮಹಾರಾಜ ಒಂದನೇ ರುದ್ರದೇವನ ಕಾಲದಲ್ಲಿ ದಂಡನಾಯಕನಾಗಿದ್ದ. ಈತ ಸಂಸ್ಕೃತ ಕೃತಿ ‘ನೀತಿಸಾರ’ದ ರಚನೆಗೆ ಕೈಜೋಡಿಸಿದವನು; ಹನುಮಕೊಂಡದ ಸಾವಿರಕಂಬ ರುದ್ರೇಶ್ವರ ದೇವಸ್ಥಾನದ ನಿರ್ಮಾಣಕ್ಕೂ ಕಾರಣಕರ್ತ.

ರುದ್ರದೇವನ ಪರಾಕ್ರಮ ಯುದ್ಧಗಳಲ್ಲಿ, ವಿಶೇಷವಾಗಿ ದೇವಗಿರಿಯ ಸೆವುಣರ ಎದುರು, ಗೋನಬುದ್ದಾರೆಡ್ಡಿ ಅಪ್ರತಿಮ ಸೇವೆ ಸಲ್ಲಿಸಿದ್ದ. ಈತನ ಸೇವಾಭಾವಕ್ಕೆ ಮೆಚ್ಚಿದ ರುದ್ರದೇವನ ಸಹೋದರ ಮತ್ತು ಉತ್ತರಾಧಿಕಾರಿ ಮಹಾದೇವ, ಅವನಿಗೆ ‘ವರ್ಧಮಾನಪುರ ಸಾಮಂತಿಕೆ’ಯನ್ನು ಉಡುಗೊರೆಯಾಗಿ ನೀಡಿದರೆಂಬ ಮಾಹಿತಿ ಶಾಸನಗಳಲ್ಲಿ ಸಿಗುತ್ತದೆ.
ಗೋನಬುದ್ದಾರೆಡ್ಡಿ ತನ್ನ ರಾಜಪ್ರತಿಷ್ಠೆಗೆ ಗುರುತಾಗಿ ಮಗನಿಗೆ ಗಣಪಯ್ಯ/ಗಣಪಿರೆಡ್ಡಿ ಎಂಬ ಹೆಸರು ಇಟ್ಟದ್ದು ಕಾಕತೀಯ ಯುವರಾಜ ಗಣಪತಿದೇವನಿಗೆ ಸಲ್ಲಿಸಿದ ಗೌರವ. ಈ ಗಣಪಿರೆಡ್ಡಿಯೇ ತಂದೆಯ ನಿಧನದ ನಂತರ ‘ಗೋನಗನ್ನಾರೆಡ್ಡಿ’ ಎಂಬ ಖ್ಯಾತಿಯನ್ನು ಪಡೆದನು.
ವೀರ ಸಹೋದರರು
ಗೋನಗನ್ನಾರೆಡ್ಡಿ ಕೇವಲ ಯೋಧನಲ್ಲ, ಸಂಗ್ರಾಮಗಳಲ್ಲಿ ಪಾಂಡಿತ್ಯ, ಯುದ್ಧನೀತಿ ಮತ್ತು ಆಡಳಿತಶಕ್ತಿ ಸಂಗಮಗೊಂಡ ಅದ್ಭುತವೀರ. ಕಾಕತೀಯರ ಮಹಾರಾಣಿ ರುದ್ರಮಹಾದೇವಿಯ ಕಾಲದಲ್ಲಿ ಈತನ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೆಲಕಾಲ ರುದ್ರಮಹಾದೇವಿಯ ಅಂಗರಕ್ಷಕನಾಗಿಯೂ ಸೇವೆ ಸಲ್ಲಿಸಿದ್ದಾನೆ.
ತನ್ನ ಸಹೋದರ ವಿಠಲರೆಡ್ಡಿ ಜೊತೆಗೂಡಿ ಆದೋನಿ ಸೀಮೆ, ತುಂಗಳ ದುರ್ಗ, ರಾಯಚೂರು ಸೀಮೆಯ ಹಲ್ಪಿ, ಮಾನ್ವಿ ಪ್ರದೇಶಗಳನ್ನು ಕಾಕತೀಯರ ಪರವಾಗಿ ಗೆದ್ದು ಕೊಟ್ಟಿದ್ದಾನೆ. ರಾಯಚೂರು ಕೋಟೆಯ ನಿರ್ಮಾಣಕ್ಕೆ ಗೋನಗನ್ನಾರೆಡ್ಡಿ ನೀಡಿದ ಕೊಡುಗೆ ಇಂದಿಗೂ ಸಂಶೋಧಕರೆದುರು ಬಹು ಚರ್ಚೆಯ ವಿಷಯವಾಗಿದೆ. ಈ ಇಬ್ಬರೂ ಸೇರಿ ಯುದ್ಧಗಳಲ್ಲಿ ತೋರಿದ ಧೈರ್ಯಕ್ಕೆ ‘ವೀರ ಸಹೋದರರು’ ಎಂಬ ಬಿರುದನ್ನು ಪಡೆದಿದ್ದರು.

ಯುದ್ಧಗಳ ವಿಜಯಯಾತ್ರೆ
ಈ ಇಬ್ಬರು ರೆಡ್ಡಿವೀರರು ಉಪ್ಪಲ ಸೋಮ, ಪಂದಿಭೂಪಾಲ, ಕಾಚಯ ನಾಯಕ, ಕಂದೂರಿ ಕೇಸಿನಾಯಕ ಹಾಗೂ ಇನ್ನೂ ಅನೇಕ ದುರ್ಗಾಧಿಪತಿಗಳನ್ನು ಸೋಲಿಸಿ ಕಂದೂರು ಸೀಮೆಯನ್ನು ವಿಸ್ತರಿಸಿದರು. ಇವರ ಧೈರ್ಯಕ್ಕೆ ಸಾಕ್ಷಿಯಾಗಿ 1294ರ ಮಹಬೂಬ್ ನಗರ ನಾಗದೇವಪಳ್ಳಿ ಶಾಸನವು ಗೋನಗನ್ನಾರೆಡ್ಡಿಯನ್ನು ‘ಚತುರ್ಥ ಕುಲಶೇಖರ’, ‘ಕುಡವಲೂರು ಪುರವರೇಶ್ವರ’ ಎಂಬ ಬಿರುದಗಳಿಂದ ಸಂಬೋಧಿಸುತ್ತದೆ. ವಿಠಲರೆಡ್ಡಿಗೆ ‘ತದ್ರಾಜ್ಯ ರಕ್ಷಮಣಿ’, ‘ಸಕಲಜನ ಪ್ರತಿಪಾಲಕ’ ಎಂಬ ಬಿರುದುಗಳನ್ನು ನೀಡಲಾಗಿದೆ.
ಈ ರೆಡ್ಡಿವೀರರು ಮೂಲತಃ ಕರ್ನೂಲ್ – ಆಂಧ್ರ ಪ್ರದೇಶ ಮೂಲದವರಾದರೂ, ರಾಯಚೂರು ಪ್ರದೇಶವನ್ನು ಗೆದ್ದು, ಕೋಟೆ ಕೊತ್ತಲಗಳನ್ನು ನಿರ್ಮಿಸಿ, ಆಡಳಿತ ನೆಲೆನಿಂತು ನಡೆಸಿದ ಕಾರಣ, ಈ ರೆಡ್ಡಿರಾಜರನ್ನು ಇತಿಹಾಸಕಾರರು ಸಮರ್ಥವಾಗಿ ‘ರಾಯಚೂರು ರೆಡ್ಡಿರಾಜರು’ ಎಂದೇ ಕರೆಯುತ್ತಾರೆ. ಈ ಮಹಾವೀರರ ಜೀವನ ಇಂದಿಗೂ ತೆಲುಗು-ಕನ್ನಡ ನಾಡಿನ ಜನತೆಗೆ ಪರಾಕ್ರಮ, ನಿಷ್ಠೆ, ಜ್ಞಾನ, ಆಡಳಿತಶಕ್ತಿ ಮತ್ತು ಧೈರ್ಯದ ಸಂಕೇತವಾಗಿದೆ.





One Comment