
ರಾಷ್ಟ್ರಕೂಟರ ರಾಜಧಾನಿ ಮಾನ್ಯಖೇಟವು (Manyakheta Rashtrakuta Capital History Neglect) ಇಂದು ಅಕ್ಷರಶಃ ಹಾಳು ಕೊಂಪೆಯಾಗಿದೆ. ಈ ವೈಭವದ ರಾಜಧಾನಿಯ ಇಂದಿನ ಸ್ಥಿತಿ ಹೇಲಿದೆ? ಪ್ರತ್ಯಕ್ಷದರ್ಶಿಯಾಗಿ ಕಂಡ ಮಾನ್ಯಖೇಟದ ದುರಂತ ಚಿತ್ರಣ ಇಲ್ಲಿದೆ…
ಸುಮಾರು ಎರಡೂವರೆ ಶತಮಾನಗಳ ಕಾಲ ದಕ್ಷಿಣ ಭಾರತದ ರಾಜಕೀಯ, ಸಾಂಸ್ಕೃತಿಕ ಹಾಗೂ ಬೌದ್ಧಿಕ ದಿಕ್ಕನ್ನು ನಿರ್ಧರಿಸಿದ ರಾಷ್ಟ್ರಕೂಟರ ಆಳ್ವಿಕೆ ಕರ್ನಾಟಕ ಇತಿಹಾಸದ ಅತ್ಯಂತ ಉಜ್ವಲ ಅಧ್ಯಾಯ.
ಉತ್ತರದಲ್ಲಿ ಗೋದಾವರಿವರೆಗೂ, ದಕ್ಷಿಣದಲ್ಲಿ ಕಾವೇರಿವರೆಗೂ ತನ್ನ ಪ್ರಭಾವ ಬೀಸಿದ ಈ ಮಹಾಸಾಮ್ರಾಜ್ಯವು ಕೇವಲ ಸೇನಾ ಶಕ್ತಿಯಲ್ಲ; ಬದಲಾಗಿ ಸಂಸ್ಕೃತಿ, ಸಾಹಿತ್ಯ, ಧರ್ಮಸಹಿಷ್ಣುತೆ ಮತ್ತು ಆಡಳಿತ ಕುಶಲತೆಯಲ್ಲಿಯೂ ಅಪೂರ್ವ ಸ್ಥಾನ ಪಡೆದಿತ್ತು.
ಅಂಥ ರಾಷ್ಟ್ರಕೂಟರ ರಾಜಧಾನಿಯಾಗಿದ್ದ ಮಾನ್ಯಖೇಟ ಇಂದು ಅಕ್ಷರಶಃ ಹಾಳು ಕೊಂಪೆಯಾಗಿ ಬಿದ್ದಿರುವುದು ಕೇವಲ ಒಂದು ಪಟ್ಟಣದ ದುರಂತವಲ್ಲ; ಅದು ಕರ್ನಾಟಕದ ಇತಿಹಾಸಪ್ರಜ್ಞೆಯೇ ಕುಸಿದಿರುವುದರ ಸಂಕೇತ.

ಇದನ್ನೂ ಓದಿ: Glory of the Reddy kings of Kashmir – ಭಾರತ ಭೂಶಿರ ಕಾಶ್ಮೀರದಲ್ಲೂ ರೆಡ್ಡಿರಾಜರ ಸುವರ್ಣ ವೈಭವ
ರಾಷ್ಟ್ರಕೂಟ ಸಾಮ್ರಾಜ್ಯ ಮತ್ತು ಮಾನ್ಯಖೇಟದ ಮಹತ್ವ
ಉತ್ತರ ಕರ್ನಾಟಕದ ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಭೀಮಾ ನದಿಯ ಉಪನದಿಯಾದ ಕಾಗಿಣಾ ನದಿಯ ದಂಡೆಯ ಮೇಲೆ ನಿರ್ಮಾಣಗೊಂಡ ಮಾನ್ಯಖೇಟ (ಇಂದಿನ ಮಳಖೇಡ) ನಗರವು ಒಂದು ಕಾಲದಲ್ಲಿ ಇಂದ್ರನ ಅಮರಾವತಿಯನ್ನು ನಾಚಿಸುವಂತಹ ವೈಭವವನ್ನು ಹೊಂದಿತ್ತು.
ಮಾನ್ಯಖೇಟ, ಮಾನ್ಯರ ಕೆರೆ, ಮಾಂಕೀರ, ಮಲಯಖೇಟ, ಮಲಯಾದ್ರಿಪುರ, ಕೃಷ್ಣಪುರ ಎಂಬ ಅನೇಕ ಹೆಸರುಗಳಿಂದ ಕರೆಯಲ್ಪಟ್ಟ ಈ ನಗರ ಸಾವಿರಾರು ವರ್ಷಗಳ ಇತಿಹಾಸವನ್ನು ತನ್ನ ಗರ್ಭದಲ್ಲಿ ಇಟ್ಟುಕೊಂಡಿದೆ. ರಾಷ್ಟ್ರಕೂಟರ ಕಾಲದಲ್ಲಿ ಮಾನ್ಯಖೇಟವು ಕೇವಲ ಆಡಳಿತ ಕೇಂದ್ರವಲ್ಲ; ಅದು ಪರಂಪರೆಯ ಸಾಂಸ್ಕೃತಿಕ ನಗರವಾಗಿತ್ತು.
ಅಮೋಘವರ್ಷ ನೃಪತುಂಗನಂತಹ ದಾರ್ಶನಿಕ ಚಕ್ರವರ್ತಿಗಳು ಇಲ್ಲಿ ನೆಲೆಸಿ, ಕನ್ನಡ ಸಾಹಿತ್ಯಕ್ಕೆ ‘ಕವಿರಾಜಮಾರ್ಗ’ದಂತಹ ಅಮೂಲ್ಯ ಕೃತಿಗಳನ್ನು ಕೊಡುಗೆಯಾಗಿ ನೀಡಿದರು. ಜೈನಾಚಾರ್ಯರು, ಪಂಡಿತರು, ವಿದ್ವಾಂಸರು ಮಾನ್ಯಖೇಟವನ್ನು ಜ್ಞಾನಕೇಂದ್ರವನ್ನಾಗಿ ರೂಪಿಸಿದ್ದರು.

ಇದನ್ನೂ ಓದಿ: Reddy Dynasty Rashtrakuta Empire- ರೆಡ್ಡಿಕುಲ ಹೆಮ್ಮೆಯ ಸಾಮ್ರಾಜ್ಯ ರಾಷ್ಟ್ರಕೂಟರ ಭವ್ಯ ಚರಿತ್ರೆ
ವೈಭವವನ್ನು ಸಾರುವ ಶಾಸನಗಳು
ಕ್ರಿ.ಶ. 10ನೇ ಶತಮಾನದಲ್ಲಿ ರಾಷ್ಟ್ರಕೂಟ ದೊರೆ ಎರಡನೇ ಕರ್ಕನ ಕರಡಾದ ಶಾಸನದಲ್ಲಿ ಮಾನ್ಯಖೇಟದ ಸೌಂದರ್ಯವನ್ನು ಇಂದ್ರಪುರಕ್ಕೆ ಹೋಲಿಸಲಾಗಿದೆ. ಕೆರೆಗಳು, ಉದ್ಯಾನಗಳು, ವಿಶಾಲ ರಾಜಬೀದಿಗಳು, ಅರಮನೆಗಳು, ಅಂತಃಪುರಗಳು ಮತ್ತು ಬೃಹತ್ ಕೋಟೆ-ಕೊತ್ತಲುಗಳಿಂದ ಕೂಡಿದ ನಗರ ಅದು.
ವಿದೇಶಿ ಪ್ರವಾಸಿಗ ಸುಲೇಮಾನ ಸೌದಾಗಾರನು ರಾಷ್ಟ್ರಕೂಟ ಸಾಮ್ರಾಜ್ಯವನ್ನು ಜಗತ್ತಿನ ಶ್ರೇಷ್ಠ ಸಾಮ್ರಾಜ್ಯಗಳ ಸಾಲಿನಲ್ಲಿ ಸೇರಿಸಿದ್ದಾನೆ. ಬಗ್ದಾದ್, ಚೀನಾ, ಕಾನ್ಸ್ಟಾಂಟಿನೋಪಲ್‌ನಂತಹ ಮಹಾನಗರಗಳ ಸಮಾನವಾಗಿ ಮಾನ್ಯಖೇಟದ ಘನತೆಯನ್ನು ಆತ ವರ್ಣಿಸಿದ್ದಾನೆ.
ಇತಿಹಾಸಕಾರ ಎಸ್.ಕೆ. ಜೋಷಿಯವರು ತಮ್ಮ ‘Defensive Architecture in Early Karnataka’ ಗ್ರಂಥದಲ್ಲಿ ಮಾನ್ಯಖೇಟದ ಕೋಟೆಗಳ ಕುರಿತು ಸವಿಸ್ತಾರವಾಗಿ ದಾಖಲಿಸಿದ್ದಾರೆ.
ರೋಮ್‌ನ ಇತಿಹಾಸಕಾರರೊಬ್ಬರು ಉಲ್ಲೇಖಿಸಿದ ಜಗತ್ತಿನ 30 ಪ್ರಮುಖ ಕೋಟೆಗಳ ಪೈಕಿ ಮಾನ್ಯಖೇಟವೂ ಒಂದಾಗಿರಬಹುದು ಎಂಬ ವಾದವೂ ಇದೆ. ಇವೆಲ್ಲವು ಮಾನ್ಯಖೇಟದ ಐತಿಹಾಸಿಕ ಮಹತ್ವವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ.
ಇದನ್ನೂ ಓದಿ: End Caste Divisions Reddys Unity- ಪಂಗಡ ಬೇಧ ಬಿಡಿ ರೆಡ್ಡಿಕುಲವೊಂದೇ ಎಂಬ ಅಭಿಮಾನವಿಡಿ
ಇಂದಿನ ದುಃಸ್ಥಿತಿ – ಇತಿಹಾಸಕ್ಕೆ ಆಗಿರುವ ಅಪಮಾನ
ಆದರೆ ಇಂದು ಆ ವೈಭವದ ನೆನಪು ಮಾತ್ರ ಉಳಿದಿದೆ. ಮಾನ್ಯಖೇಟದ ಸ್ಥಿತಿಯನ್ನು ನೋಡಿದರೆ ದುಃಖ, ಲಜ್ಜೆ ಮತ್ತು ಆಕ್ರೋಶ ಒಂದೇ ಸಮಯದಲ್ಲಿ ಮೂಡುತ್ತವೆ. ಒಂದು ಕಾಲದಲ್ಲಿ ಅಖಂಡ ಭಾರತದ ಅರ್ಧ ಭಾಗವನ್ನು ಆಳಿದ ಸಾಮ್ರಾಜ್ಯದ ರಾಜಧಾನಿ ಇಂದು ನಿರ್ಲಕ್ಷ್ಯ, ಭ್ರಷ್ಟಾಚಾರ ಮತ್ತು ಅಜ್ಞಾನಕ್ಕೆ ಬಲಿಯಾಗಿದೆ.
ಬಜೆಟ್‌ನಲ್ಲಿ ಮಾನ್ಯಖೇಟ ಅಭಿವೃದ್ಧಿಗೆ ಮೀಸಲಾದ ಅನುದಾನಗಳು ಸ್ಥಳೀಯ ರಾಜಕಾರಣಿಗಳ ಜೇಬಿಗೆ ಸೇರುತ್ತಿವೆ. ಅಭಿವೃದ್ಧಿಯ ಹೆಸರಿನಲ್ಲಿ ಅಪ್ಪಟ ಲೂಟಿ ನಡೆದಿದೆ. ಪ್ರವಾಸಿ ತಾಣವಾಗಬೇಕಿದ್ದ ಪ್ರದೇಶ ಇಂದು ಬಯಲು ಶೌಚಾಲಯದಂತೆ ಪರಿಣಮಿಸಿದೆ.
ಪಾಳುಬಿದ್ದ ಕೋಟೆ ಕೊತ್ತಲುಗಳು ಅನೈತಿಕ ಚಟುವಟಿಕೆಗಳ ಕೇಂದ್ರಗಳಾಗಿವೆ. ಇಸ್ಪೀಟ್ ಅಡ್ಡೆಗಳು, ಅಕ್ರಮ ಚಟುವಟಿಕೆಗಳು, ಹಗಲುಗುಡುಕರ ತಾಣಗಳಾಗಿ ಈ ಪವಿತ್ರ ಭೂಮಿ ಅವಮಾನಕ್ಕೀಡಾಗಿದೆ.

ಇದನ್ನೂ ಓದಿ: Reddykula Shakhegalu- ವೈವಿಧ್ಯತೆಯಲ್ಲಿ ಐಕ್ಯತೆ ಸಾರುವ ರೆಡ್ಡಿಕುಲ ಶಾಖೆಗಳು
ಎಲ್ಲಿದ್ದೀರಿ ಕನ್ನಡ ಹೋರಾಟಗಾರರೇ?
ಇಲ್ಲಿಯ ದುಃಸ್ಥಿತಿ ನೋಡಿದರೆ ‘ಕನ್ನಡ ಹೋರಾಟಗಾರರೇ ಎಲ್ಲಿದ್ದೀರಾ?’ ಎಂಬ ಪ್ರಶ್ನೆ ಹಠಾತ್ತನೆ ಹುಟ್ಟಿಕೊಳ್ಳುತ್ತದೆ. ಬೆಂಗಳೂರು ಮತ್ತು ಇತರ ಮಹಾನಗರಗಳಲ್ಲಿ ಮಾತ್ರ ಭಾಷೆಯ ಹೆಸರಿನಲ್ಲಿ ಬೊಬ್ಬಿರಿಯುವವರು, ಕನ್ನಡದ ಐತಿಹಾಸಿಕ ರಾಜಧಾನಿಯ ದುರವಸ್ಥೆ ಕುರಿತು ಮೌನ ವಹಿಸಿರುವುದು ದುರಂತ.
ಈ ಹೋರಾಟಗಾರರಿಗೆ ಮಾನ್ಯಖೇಟದ ಕನಿಷ್ಠ ಜ್ಞಾನವೂ ಇದ್ದಂತಿಲ್ಲ. ಮಹಾ ಸಾಮ್ರಾಜ್ಯದ ಮಾನ್ಯಖೇಟವನ್ನು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಕೇಂದ್ರವನ್ನಾಗಿ ರೂಪಿಸುವ ಕನಿಷ್ಠ ಪ್ರಯತ್ನವೂ ನಡೆಯುತ್ತಿಲ್ಲ.
ಸ್ಥಳೀಯ ಸಂಸದ ರಾಧಾಕೃಷ್ಣ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಸೇಡಂ ತಾಲ್ಲೂಕಿನವರೇ ಆದ ವೈದ್ಯಕೀಯ ಸಚಿವ ಶರಣಪ್ರಕಾಶ ಪಾಟೀಲ, ಜಿಲ್ಲೆಯ ಸಮಸ್ತ ಶಾಸಕರು, ಜನಪ್ರತಿನಿಧಿಗಳು ನಿಜಕ್ಕೂ ಮಾನ್ಯಖೇಟದ ವಿಚಾರದಲ್ಲಿ ಬದುಕಿಯೂ ಸತ್ತಂತಿದ್ದಾರೆ.
ಶಾಸಕರು, ಮಂತ್ರಿಗಳು ಯಾರೂ ಕೂಡ ಮಾನ್ಯಖೇಟದ ವಿಷಯದಲ್ಲಿ ಗಂಭೀರತೆ ತೋರಿಸುತ್ತಿಲ್ಲ. ಇದು ಕೇವಲ ಆಡಳಿತಾತ್ಮಕ ವೈಫಲ್ಯವಲ್ಲ; ಇದು ಸಾಂಸ್ಕೃತಿಕ ಅಪರಾಧ.

ಇದನ್ನೂ ಓದಿ: Uyyalawada Narasimha Reddy- ಅಪ್ರತಿಮ ದೇಶಭಕ್ತ ಉಯ್ಯಾಲವಾಡ ನರಸಿಂಹರೆಡ್ಡಿ | ಜಯಂತೋತ್ಸವದ ವಿಶೇಷ ಲೇಖನ
ಮಾನ್ಯಖೇಟ ಉಳಿಸಲು ಏನು ಮಾಡಬೇಕು?
ಇಂದಿನ ಸ್ಥಿತಿಯಿಂದ ಮಾನ್ಯಖೇಟದ ಹಳೆಯ ವೈಭವವನ್ನು ಸಂಪೂರ್ಣ ಮರಳಿ ತರಲು ಸಾಧ್ಯವಿಲ್ಲ. ಆದರೆ ಕನಿಷ್ಠ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬಹುದು:
- ಮಾನ್ಯಖೇಟವನ್ನು ರಾಜ್ಯದ ಪ್ರಮುಖ ಐತಿಹಾಸಿಕ ಪ್ರವಾಸಿ ತಾಣವೆಂದು ಘೋಷಿಸಬೇಕು
- ಪುರಾತತ್ವ ಇಲಾಖೆ ಮೂಲಕ ಕೋಟೆ, ಶಾಸನ, ಅವಶೇಷಗಳ ಸಂರಕ್ಷಣೆ
- ಶೌಚಾಲಯ, ರಸ್ತೆ, ಬೆಳಕು, ಭದ್ರತೆ ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿ
- ರಾಷ್ಟ್ರಕೂಟರ ಇತಿಹಾಸವನ್ನು ಸಾರುವ ಮ್ಯೂಸಿಯಂ ಮತ್ತು ಸಂಶೋಧನಾ ಕೇಂದ್ರ
- ಕನ್ನಡ-ಸಂಸ್ಕೃತಿ ಉತ್ಸವಗಳು, ಸಮ್ಮೇಳನಗಳು, ನಾಟಕ, ಸಂಗೀತ ಕಾರ್ಯಕ್ರಮಗಳ ಆಯೋಜನೆ
- ಶಾಲಾ-ಕಾಲೇಜು ಪಠ್ಯಕ್ರಮದಲ್ಲಿ ಮಾನ್ಯಖೇಟದ ಇತಿಹಾಸಕ್ಕೆ ವಿಶೇಷ ಸ್ಥಾನ
ನಮ್ಮ ಕರ್ತವ್ಯವೇನು?
ನಾವು ರಾಷ್ಟ್ರಕೂಟರ ವಂಶಜರೆಂದು ಹೇಳಿಕೊಳ್ಳುವ ರೆಡ್ಡಿಗಳು ಮಾತ್ರವಲ್ಲ, ಪ್ರತಿಯೊಬ್ಬ ಕನ್ನಡಿಗನೂ ಮಾನ್ಯಖೇಟದ ಹೊಣೆಗಾರರು. ಸರ್ಕಾರದ ಮೇಲೆ ಒತ್ತಡ ತರುವ ಹೋರಾಟ, ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾನ್ಯಖೇಟದಲ್ಲಿ ಹಮ್ಮಿಕೊಳ್ಳುವ ಮೂಲಕ ನಮ್ಮ ಹೆಗ್ಗುರುತನ್ನು ಪುನರ್ ಸ್ಥಾಪಿಸಬೇಕಿದೆ!
ಮಾನ್ಯಖೇಟ ಕೇವಲ ಒಂದು ಹಾಳು ಪಟ್ಟಣವಲ್ಲ; ಅದು ಕರ್ನಾಟಕದ ಆತ್ಮ, ಕನ್ನಡದ ಗರ್ವ, ಭಾರತದ ಇತಿಹಾಸದ ಅಮೂಲ್ಯ ಪುಟ. ಅದನ್ನು ಉಳಿಸಿಕೊಳ್ಳಲಾಗದಿದ್ದರೆ, ನಾವು ನಮ್ಮ ಭವಿಷ್ಯದ ಪೀಳಿಗೆಗಳಿಗೆ ಉತ್ತರಿಸಬೇಕಾಗುತ್ತದೆ.
ಮಾನ್ಯಖೇಟ ತನ್ನ ಹಳೆಯ ವೈಭವದೊಂದಿಗೆ ಉಳಿಯಬೇಕು; ಇತಿಹಾಸಕ್ಕಾಗಿ, ಕನ್ನಡಕ್ಕಾಗಿ, ನಮ್ಮ ಸ್ವಾಭಿಮಾನಕ್ಕಾಗಿ…!
| ಮೊ ಮು ಆಂಜನಪ್ಪ ರೆಡ್ಡಿ
ಮಾನ್ಯಖೇಟದ ದುಃಸ್ಥಿತಿ ಬಿಂಬಿಸುವ ಚಿತ್ರಗಳು 👇👇👇
















