History

first CM of the Reddys: ರೆಡ್ಡಿಕುಲ ಮೊದಲ ಮುಖ್ಯಮಂತ್ರಿಗಳು | ರೆಡ್ಡಿಗಳು ಹೆಮ್ಮೆಪಡುವಂತಹ ಅಮೋಘ ದಾಖಲೆ

ಮೂರು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ರೆಡ್ಡಿ ಧುರಿಣರೇ ಮೊದಲ ಮುಖ್ಯಮಂತ್ರಿ...

ದಕ್ಷಿಣ ಭಾರತದಲ್ಲಿ ಮೂರು ರಾಜ್ಯಗಳಿಗೆ ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ರೆಡ್ಡಿ ಸಮುದಾಯದ ಧುರಿಣರೇ ಮೊದಲ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿರುವುದು ದೊಡ್ಡ ಹೆಮ್ಮೆಯ ಸಂಗತಿಯಾಗಿದೆ. ರೆಡ್ಡಿಗಳ ಆಳ್ವಿಕೆಯ ಪರಂಪರೆ, ಅವರ ಸಂಘಟನಾ ಶಕ್ತಿ, ಜನಮುಖಿ ವ್ಯಕ್ತಿತ್ವಗಳಿಗೆ ಇದು ಜ್ವಲಂತ ಸಾಕ್ಷಿ ಕೂಡ ಹೌದು.

ನಿಜವಾಗಲೂ ಸಮಸ್ತ ರೆಡ್ಡಿಗಳು ಹೆಮ್ಮೆಪಡುವಂತಹ ಅಮೋಘ ದಾಖಲೆ ಇದು. ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ಪ್ರಥಮ ಮುಖ್ಯಮಂತ್ರಿ ಚುಕ್ಕಾಣಿ ಹಿಡಿದು, ಜಗ ಮೆಚ್ಚುವ ಆಡಳಿತ ನೀಡಿದ ಘನತೆ ರೆಡ್ಡಿಗಳದ್ದು. ಈ ದಾಖಲೆ ರೆಡ್ಡಿ ಪರಂಪರೆಗೆ ಸುವರ್ಣ ಮೆರಗು ನೀಡಿರುವುದು ಸುಳ್ಳಲ್ಲ. ಆಧುನಿಕ ರಾಜಕಾರಣದ ಧೃವತಾರೆಗಳೆಂದೇ ಬಿಂಬಿತವಾಗಿರುವ ಆ ಮುತ್ಸದ್ಧಿಗಳ ಜೀವನ-ಸಾಧನೆ ಮತ್ತು ಸೇವೆಯನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ…

ಅಗರಂ ಸುಬ್ಬರಾಯಲು ರೆಡ್ಡಿಯಾರ್

ಅಕ್ಟೋಬರ್ 15, 1855ರಲ್ಲಿ ದಕ್ಷಿಣ ಅರ್ಕಾಟ್‌ನ ಪ್ರಭಾವಿ ತೆಲುಗು ರೆಡ್ಡಿ ಕುಟುಂಬದಲ್ಲಿ ಜನಿಸಿದ ದಿವಾನ್ ಬಹದ್ದೂರ್ ಅಗರಂ ಸುಬ್ಬರಾಯಲು ರೆಡ್ಡಿಯಾರ್ ಅವರು ಮೂಲತಃ ಜಮಿನ್ದಾರರು ಮತ್ತು ಜಸ್ಟೀಸ್ ಪಾರ್ಟಿಯ ಮುಂಚೂಣಿ ನಾಯಕರು. ಪಶ್ಚಿಮದ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಕಾನೂನು ವ್ಯಾಸಂಗ ಪೂರೈಸಿದ ಇವರು ಪ್ರಾರಂಭದಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದಲ್ಲಿ ತೊಡಗಿಸಿಕೊಂಡಿದ್ದರು. ಅನಂತರ 1916ರಲ್ಲಿ ಜಸ್ಟೀಸ್ ಪಕ್ಷವನ್ನು ಸೇರಿದರು. ಮೋಂಟ್ ಫಾರ್ಡ್ ಸುಧಾರಣೆಯಿಂದಾಗಿ ನವೆಂಬರ್ 1920ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮದ್ರಾಸ್ ಪ್ರಾಂತ್ಯದಿ೦ದ ಜಸ್ಟೀಸ್ ಪಕ್ಷವು ಚುನಾಯಿತವಾದಾಗ ಸುಬ್ಬರಾಯಲು ರೆಡ್ಡಿಯಾರ್‌ರು ಆಯ್ಕೆಯಾದರು.

Agaram Subbarayalu Reddiyar

ಅಂದು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷವು ತನ್ನ ಅಸಹಕಾರ ಚಳುವಳಿಯ ನೀತಿಗಳಿಗನುಗುಣವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಇದರಿಂದಾಗಿ ಚುನಾವಣೆ ನಡೆದ 98 ಅಸೆಂಬ್ಲಿ ಸ್ಥಾನಗಳಲ್ಲಿ 63 ಸ್ಥಾನದಲ್ಲಿ ಜಸ್ಟೀಸ್ ಪಕ್ಷವು ಜಯಗಳಿಸಿತ್ತು. ಸಹಜವಾಗಿಯೇ ಲಾರ್ಡ್ ವಿಲ್ಲಿಂಗ್ಡನ್‌ರವರು ಸರ್ ತ್ಯಾಗರಾಯ ಚೆಟ್ಟಿಯವರನ್ನು ಸರ್ಕಾರ ರಚಿಸಲು ಆಮಂತ್ರಿಸಿದ್ದರು. ಆದರೆ ಸಹೃದಯಿಗಳಾಗಿದ್ದ ಅವರು ಆ ಜವಾಬ್ದಾರಿಯನ್ನು ಸುಬ್ಬರಾಯಲು ರೆಡ್ಡಿಯಾರ್‌ರವರಿಗೆ ಹಸ್ತಾಂತರಿಸಿದರು.

ಹಾಗಾಗಿ ರೆಡ್ಡಿಯಾರ್‌ರವರು ಡಿಸೆಂಬರ್ 13, 1920ರಲ್ಲಿ ಮುಖ್ಯಮಂತ್ರಿ (ಪ್ರೀಮಿಯರ್ ಆಫ್ ಮದ್ರಾಸ್ ಪ್ರೆಸಿಡೆನ್ಸಿ) ಆಗುವುದರ ಜೊತೆಗೆ ಹೊಸ ಸರ್ಕಾರದಲ್ಲಿ ಹೆಚ್ಚುವರಿಯಾಗಿ ಶಿಕ್ಷಣ, ಸಾರ್ವಜನಿಕ ಸುಂಕ ಮತ್ತು ನೋಂದಣಿ ಖಾತೆಗಳ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಸುಬ್ಬರಾಯಲು ರೆಡ್ಡಿಯಾರ್‌ರು ತಮ್ಮ ಆರೋಗ್ಯದ ಕಾರಣವನ್ನು ನೀಡಿ ರಾಜೀನಾಮೆ ನೀಡುವವರೆಗೆ ಅಂದರೆ ಜುಲೈ 11, 1921ರ ವರೆಗೆ ಮುಖ್ಯಮಂತ್ರಿಗಳಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದರು. ಇದಾದ ಕೆಲವೇ ದಿನಗಳಲ್ಲಿ ಅಂದರೆ ನವೆಂಬರ್ 1921ರಂದು ಅವರು ವಿಧಿವಶರಾದರು.

ಒಮಂದೂರ್ ರಾಮಸಾಮಿ ರೆಡ್ಡಿಯಾರ್

1895ರಲ್ಲಿ ಮದ್ರಾಸ್ ಪ್ರಾಂತ್ಯದ ದಕ್ಷಿಣ ಅರ್ಕಾಟ್ ಜಿಲ್ಲೆಯ ತಿಂಡಿವನ೦ ಹತ್ತಿರದ ಒಮಂದೂರಿನ ತೆಲುಗು ರೆಡ್ಡಿ ಕುಟುಂಬದಲ್ಲಿ ಜನಿಸಿದ ಒಮಂದೂರ್ ರಾಮಸಾಮಿ ರೆಡ್ಡಿಯಾರ್‌ರವರು ಅಪ್ಪಟ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಜನಮುಖಿ ಮುತ್ಸದ್ಧಿಯಾಗಿದ್ದವರು. ಸ್ವಾತಂತ್ರ್ಯಾನಂತರದ ಮದ್ರಾಸ್ ಪ್ರೆಸಿಡೆನ್ಸಿಯ ಮೊದಲ ಮುಖ್ಯಮಂತ್ರಿಯಾಗಿ ಮಾರ್ಚ್ 23, 1947 ರಿಂದ ಏಪ್ರಿಲ್ 6, 1949ರ ವರೆಗೆ ಸೇವೆ ಸಲ್ಲಿಸಿದ್ದಾರೆ.

ಅತಿ ಕಡಿಮೆ ವಯಸ್ಸಿಗೆ ಭಾರತೀಯ ಸ್ವಾತಂತ್ರ್ಯ ಚಳುವಳಿ ಪ್ರವೇಶಿಸಿದ ಹೆಗ್ಗಳಿಕೆ ಇವರದು. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ದಲಿತರು ಮತ್ತು ಇತರ ನಿಷಿದ್ಧ ಹಿಂದೂ ಜನರಿಗೆ ಹಿಂದೂ ದೇವಸ್ಥಾನಗಳನ್ನು ಪ್ರವೇಶಿಸುವ ಅಧಿಕಾರ ನೀಡುವ ಉದ್ದೇಶದಿಂದ ಮದ್ರಾಸ್ ಟೆಂಪಲ್ ಎಂಟ್ರಿ ಆಥರೈಸೇಶನ್ ಆಕ್ಟ್-1947ನ್ನು ಅಂಗೀಕರಿಸಲಾಯಿತು. ಜೊತೆಗೆ ಇವರ ಕಾಲದಲ್ಲಿಯೇ ಜಾರಿಗೆ ಬಂದ ದೇವದಾಸಿ ಸಮರ್ಪಣೆ ನಿರ್ಮೂಲನಾ ಕಾಯಿದೆ-1947 ಅಂದು ವಿಪರೀತ ರೂಢಿಯಲ್ಲಿದ್ದ ದೇವದಾಸಿ ಪದ್ಧತಿಗೆ ಇತಿಶ್ರೀ ಹಾಡಿತು.

Omandur Ramaswamy Reddyar

ರೆಡ್ಡಿಯಾರ್‌ರವರು ಮುಖ್ಯಮಂತ್ರಿಯಾದ ವರ್ಷದಲ್ಲಿಯೇ ಭಾರತವು ಬ್ರಿಟೀಷ್ ಪಾರುಪತ್ಯದಿಂದ ಮುಕ್ತವಾಗಿ ಸ್ವಾತಂತ್ರ್ಯ ಪಡೆದುಕೊಂಡಿತು. ಏಪ್ರಿಲ್ 6, 1949ರಲ್ಲಿ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿದ ಬಳಿಕ ಕಾನ್‌ಸ್ಟಿಟ್ಯೂಎಂಟ್ ಅಸೆಂಬ್ಲಿ ಆಫ್ ಇಂಡಿಯಾಗೆ ಚುನಾಯಿಸಲ್ಪಟ್ಟ ಅವರು ಅಲ್ಲಿಯೂ ಅಷ್ಟೇ ಬದ್ಧತೆಯಿಂದ ಕಾರ್ಯನಿರ್ವಹಿಸಿದರು.

ಇವತ್ತು ತಮಿಳುನಾಡು ಶಾಸಕಾಂಗ ಸಭೆ ಇರುವ ಕಟ್ಟಡಗಳ ಸುಮುದಾಯಕ್ಕೆ ರಾಮಸ್ವಾಮಿ ರೆಡ್ಡಿಯಾರ್‌ರ ಹೆಸರನ್ನೇ ಇಡಲಾಗಿದೆ. ಜೊತೆಗೆ ಇವರ ಸಂಸ್ಮರಣಾತ್ಮಕವಾಗಿ ಭಾರತೀಯ ಅಂಚೆ ಇಲಾಖೆ ಆಗಸ್ಟ್ 25, 2010ರಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ. ಹೀಗೆ ಸ್ವಾತಂತ್ರ್ಯ ಹೋರಾಟ, ಜನಪರ ರಾಜಕಾರಣದಲ್ಲಿ ತೊಡಗಿಸಿಕೊಂಡು ಜನಮನ್ನಣೆಗೆ ಪಾತ್ರರಾದ ರೆಡ್ಡಿಯಾರ್ ಅವರು 1970ರಲ್ಲಿ ವಿಧಿವಶವಾದರು.

ಕ್ಯಾಸಂಬಳ್ಳಿ ಚಂಗಲರಾಯರೆಡ್ಡಿ

ಕೋಲಾರ ಜಿಲ್ಲೆಯ ಕೆಜಿಎಫ್‌ನಿಂದ ಸುಮಾರು 6 ಕಿ.ಮೀ ದೂರದಲ್ಲಿರುವ ಕ್ಯಾಸಂಬಳ್ಳಿಯ ಶ್ರೀಮಂತ ರೆಡ್ಡಿ ಕುಟುಂಬದಲ್ಲಿ ಜನಿಸಿದ ಕೆ.ಸಿ.ರೆಡ್ಡಿ ಅರ್ಥಾತ್ ಕ್ಯಾಸಂಬಳ್ಳಿ ಚಂಗಲರಾಯ ರೆಡ್ಡಿಯವರು ಕರ್ನಾಟಕ ಕಂಡ ಅಪರೂಪದ ನೇತಾರರು. 1947 ಅಕ್ಟೋಬರ್ 24ನೇ ತಾರೀಖು ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿ ಅಚ್ಚಳಿಯದ ಸೇವೆ ಸಲ್ಲಿಸಿದ್ದಾರೆ.

1948ರಲ್ಲಿ ರಸ್ತೆ ಸಾರಿಗೆ ನಿಗಮ ರಚನೆ, ಶರಾವತಿಯಲ್ಲಿ ಮಹಾತ್ಮ ಗಾಂಧಿ ಜಲವಿದ್ಯುತ್ ಯೋಜನೆ ಸ್ಥಾಪನೆ ಮತ್ತು 1949ರಲ್ಲಿ ದಂಡು ಪ್ರದೇಶ ಮತ್ತು ಬೆಂಗಳೂರನ್ನು ಒಗ್ಗೂಡಿಸಿ ಬೆಂಗಳೂರು ಕಾರ್ಪೋರೇಷನ್ ಸ್ಥಾಪನೆ, ಅದರ ಬೆನ್ನಲ್ಲೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹುಟ್ಟು, ಮುಂದೆ ಬೆಂಗಳೂರು ನಗರದಂತೆ ರಾಜ್ಯದ ಎಲ್ಲಾ ನಗರಗಳು ಅಭಿವೃದ್ಧಿಯಾಗಬೇಕೆಂಬ ಉದ್ದೇಶದಿಂದ 1951ರಲ್ಲಿ ಪುರಸಭೆ ಕಾನೂನು ಜಾರಿ, 1949ರಲ್ಲಿ ಸಾಂಖ್ಯಿಕ ಇಲಾಖೆಯನ್ನು ಅಸ್ತಿತ್ವಕ್ಕೆ ತಂದಿದ್ದು, ಅದೇ ಪ್ರಕಾರ 1951ರಲ್ಲಿ ಸ್ಥಳಿಯ ಮತ್ತು ಸ್ವಾಯತ್ತ ಸಂಸ್ಥೆಗಳ ಇಲಾಖೆಯನ್ನು ಅಸ್ತಿತ್ವಕ್ಕೆ ತಂದಿದ್ದು…

Kyasamballi Changalaraya reddy (K C Reddy)

ಹೀಗೆ ಹುಡುಕುತ್ತಾ ಹೋದರೆ ಕೆ.ಸಿ.ರೆಡ್ಡಿಯವರ ಅಧಿಕಾರಾವಧಿಯಲ್ಲಿ ಮಾಡಿದ ಅಭಿವೃದ್ಧಿ ಮಹಾಪುರ ಒಂದೆರಡಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ರೆಡ್ಡಿಯವರು ರಾಜ್ಯದ ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ಸ್ಥಳಾಂತರಿಸಿ ವಿಧಾನಸೌಧ ನಿರ್ಮಾಣಕ್ಕೆ ಟೊಂಕ ಕಟ್ಟಿ ನಿಂತದ್ದು ವಿಶೇಷ. ಅದರ ಫಲವಾಗಿಯೇ ಮೂವತ್ತಮೂರು ಲಕ್ಷ ರೂಪಾಯಿಗಳ ಅಂದಾಜು ವೆಚ್ಚದಲ್ಲಿ 1951 ಜುಲೈ 13ರಂದು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂರವರ ಮೂಲಕ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಮುಂದೆ ಅದೇ ಶಂಕು ಸ್ಥಾಪನೆ ಅಡಿಗಲ್ಲಿನ ಮೇಲೆ ಕೆಂಗಲ್ ಹನುಮಂತಯ್ಯನವರು ಭವ್ಯವಾದ ವಿಧಾನಸೌಧ ನಿರ್ಮಿಸಿದರು. ಮುಂದೆ 1965ರಲ್ಲಿ ಮಧ್ಯಪ್ರದೇಶದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ರೆಡ್ಡಿಯವರು 1971ರಲ್ಲಿ ನಿವೃತ್ತಿ ಪಡೆದರು. 1976ರ ಫೆಬ್ರವರಿ 27 ರಂದು ಬೆಂಗಳೂರಿನ ಜಯನಗರದ ಮನೆಯಲ್ಲಿ ರೆಡ್ಡಿಯವರು ನಿಧನರಾದರು.

ನೀಲಂ ಸಂಜೀವರೆಡ್ಡಿ

ಸ್ವಾತಂತ್ರ್ಯ ಹೋರಾಟಗಾರರಾಗಿ, ವಿಶಾಲಾಂಧ್ರ ಪ್ರದೇಶದ ಪ್ರಥಮ ಮುಖ್ಯಮಂತ್ರಿಯಾಗಿ, ಭಾರತದ ಆರನೇ ರಾಷ್ಟ್ರಪತಿಗಳಾಗಿ ಸುಭದ್ರ, ಸುಭಿಕ್ಷ ಆಡಳಿತ ನೀಡಿದ ನೀಲಂ ಸಂಜೀವರೆಡ್ಡಿ ಅವರು ರಾಷ್ಟ್ರ ನಾಯಕರಾಗಿಯೂ ಸುಪ್ರಸಿದ್ಧರು. ಆಂಧ್ರಪ್ರದೇಶ ರಾಯಲ ಸೀಮೆಯ ಅನಂತಪುರ ತಾಲ್ಲೂಕಿನ ಇಲ್ಲೂರು ಗ್ರಾಮದ ಶ್ರೀಮಂತ ರೈತ ಕುಟುಂಬದಲ್ಲಿ 1913ನೇ ಮೇ 19ರಂದು ಜನಿಸಿದ ಸಂಜೀವರೆಡ್ಡಿ ಅಪ್ಪಟ ರಾಜಕಾರಣಿ.

ವಿಶಾಲಾಂಧ್ರ ಪ್ರದೇಶದ ಪ್ರಪ್ರಥಮ ಮುಖ್ಯಮಂತ್ರಿಯಾಗಿದ್ದಷ್ಟೇ ಅಲ್ಲದೇ ಮತ್ತೊಂದು ಬಾರಿ (1962ರಲ್ಲಿ) ಮುಖ್ಯಮಂತ್ರಿ ಸ್ಥಾನ ಅಲಂಕರಿಸಿ ತೆಲಗು ನಾಡಿನ ಪ್ರಗತಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಬಳಿಕ ಲಾಲ್‌ಬಹಾದ್ದೂರ್ ಶಾಸ್ತ್ರಿ ಅವರ ಕೇಂದ್ರ ಸಂಪುಟದಲ್ಲಿ ಉಕ್ಕು ಗಣಿ ಖಾತೆ ಮಂತ್ರಿಯಾಗಿ, ಲೋಕಸಭೆ ಸ್ಪೀಕರ್ ಆಗಿ, 1977 ಜುಲೈ 25 ರಂದು ದೇಶದ ಆರನೇ ರಾಷ್ಟ್ರಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

Neelam Sanjeeva Reddy

ವಿಶೇಷವೆಂದರೆ ಸ್ವತಂತ್ರ ಭಾರತದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಎಲ್ಲ ಪಕ್ಷಗಳ ಸಮ್ಮತಿಯಿಂದ ರಾಷ್ಟ್ರಪತಿ ಸ್ಥಾನಕ್ಕೆ ಏರಿದ ಹೆಗ್ಗಳಿಕೆ ಇವರದು. ತಮ್ಮ 70ನೇ ವಯಸ್ಸಿಗೆ ಅಂದರೆ 1982ರ ಜುಲೈ 24 ರಂದು ರಾಷ್ಟ್ರಪತಿ ಸ್ಥಾನದಿಂದ ನಿವೃತ್ತರಾದ ಸಂಜೀವರೆಡ್ಡಿಯವರು 1996ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು.

ಆಂಧ್ರಪ್ರದೇಶವನ್ನು ವಿಶಾಲಾಂಧ್ರವಾಗಿ ರೂಪಿಸಿ ಅದರ ಪ್ರಥಮ ಮುಖ್ಯಮಂತ್ರಿ ಆಗಿ ಸಮರ್ಥ ಆಡಳಿತ ನೀಡುವ ಮೂಲಕ ತೆಲುಗು ನಾಡಿನ ರಾಜಕಾರಣದ ದ್ರುವತಾರೆಯಾಗಿ ಮಿಂಚಿದ ನೀಲಂ ಸಂಜೀವರೆಡ್ಡಿ ನಿಧನದ 12 ವರ್ಷಕ್ಕೆ ಅಖಂಡ ವಿಶಾಲಾಂಧ್ರ ಪ್ರದೇಶ ಛಿದ್ರವಾಗಿದೆ. ಸಂಜೀವರೆಡ್ಡಿಯವರ ನೆನೆಪುಗಳು ಮಾತ್ರ ಚಿರಸ್ಥಾಯಿಯಾಗಿ ಉಳಿದಿದೆ.

ವಿ.ವೆಂಕಟಸುಬ್ಬ ರೆಡ್ಡಿಯಾರ್

ಭಾರತದ ಏಳು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದಾಗಿರುವ ಪುದುಚೇರಿಯ ಮೊದಲ ಭಾರತೀಯ ಮುಖ್ಯಮಂತ್ರಿಯಾಗಿ ಸ್ಮರಣೀಯ ಸೇವೆ ಸಲ್ಲಿಸಿರುವ ವಿ.ವೆಂಕಟಸುಬ್ಬ ರೆಡ್ಡಿಯಾರ್‌ರು ಜನಪ್ರಿಯ ರಾಜಕಾರಣಿಗಳಲ್ಲಿ ಪ್ರಮುಖರು. ಪುದುಚೇರಿಯ ಮದುಕರಣಿ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಇವರು ಫ್ರೆಂಚರನ್ನು ಪಾಂಡಿಚೇರಿಯಿ೦ದ ಕಾಲು ತೆಗೆಯುವಂತೆ ಮಾಡಲು ನಡೆಸಿದ ಹೋರಾಟದಲ್ಲಿ ಮುಂಚೂಣಿಯ ನಾಯಕರಾಗಿದ್ದರು.

ಮಹಾತ್ಮ ಗಾಂಧಿ, ಜವಹರಲಾಲ್ ನೆಹರೂ ಮುಂತಾದವರೊ೦ದಿಗೆ ಚಳವಳಿಯಲ್ಲಿ ತೊಡಗಿಸಿಕೊಂಡ ರೆಡ್ಡಿಯಾರ್‌ರು ಪಾಂಡಿಚೇರಿ ಸ್ವಾತಂತ್ರ್ಯಕ್ಕಾಗಿ ಅವಿರತವಾಗಿ ಶ್ರಮಿಸಿದರು. ತತ್ಪರಿಣಾಮ 1954 ಮಾರ್ಚ್ 31ರಂದು ಫ್ರೆಂಚ್ ಸರ್ಕಾರದ ವಿರುದ್ಧ ಸಮಾನಾಂತರ ಸರ್ಕಾರ ನಿರ್ಮಾಣವಾಯಿತು.

ಮುಂದೆ ಪುದುಚೇರಿಯ ಎರಡನೇ ಹಾಗೂ ಭಾರತೀಯ ಮೊದಲ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ರೆಡ್ಡಿಯಾರ್‌ರು ಫ್ರೆಂಚ್‌ಮಯವಾಗಿದ್ದ ಪಾಂಡಿಚೇರಿಯಲ್ಲಿ ಅಪ್ಪಟ ಭಾರತೀಯ ಸಂಸ್ಕೃತಿ ನೆಲೆಗೊಳ್ಳುವಂತೆ ಪಣ ತೊಟ್ಟರು. ಎರಡು ಬಾರಿ ಮುಖ್ಯಮಂತ್ರಿಯಾಗುವ ಮೂಲಕ ಪಾಂಡಿಚೇರಿಯ ಸಮಗ್ರತೆಗೆ ವಿಶಿಷ್ಟ ಕೊಡುಗೆ ನೀಡಿದರು.

V. Venkatasubba Reddiyar

1982ರ ಜೂನ್ 6ರಂದು ತಮ್ಮ 72ನೇ ವಯಸ್ಸಿಗೆ ನಿಧನರಾದ ವೆಂಕಟಸುಬ್ಬ ರೆಡ್ಡಿಯಾರ್‌ರು ಪಾಂಡಿಚೇರಿಯ ರಾಜಕೀಯ ರಂಗದ ದೃವತಾರೆಯಾಗಿ ಉಳಿದಿದ್ದಾರೆ. ಯಾರೇ ಪಾಂಡಿಚೇರಿಯ ಆಡಳಿತ ಚುಕ್ಕಾಣಿ ಹಿಡಿದರೂ ರೆಡ್ಡಿಯಾರ್‌ರ ಪ್ರತಿಮೆಗೆ ಗೌರವ ಸಮರ್ಪಿಸಿ ಪ್ರಮಾಣ ವಚನ ಸ್ವೀಕರಿಸುವ ಪರಿಪಾಠವಿದೆ. ಗಮನಾರ್ಹವೆಂದರೆ ರೆಡ್ಡಿಯಾರ್‌ರ ಪುತ್ರ ವೈಥಿಲಿಂಗA ಕೂಡ ತಂದೆಯAತೆ ಪಾಂಡಿಚೇರಿಯ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿ ಗಮನ ಸೆಳೆದಿದ್ದಾರೆ.

ಹೀಗೆ ಸಮ್ಮಿಶ್ರ ಸಂಸ್ಕೃತಿಯುಳ್ಳ, ಸುಶಿಕ್ಷಿತರೇ ಹೆಚ್ಚಿನ ಸಂಖ್ಯೆಯಲ್ಲಿರುವ ಕೇಂದ್ರಾಡಳಿತ ಪ್ರದೇಶವೊಂದಕ್ಕೆ ಒಂದೇ ಕುಟುಂಬದ ತಂದೆ-ಮಗ ಇಬ್ಬರೂ ಮೇಲಿಂದ ಮೇಲೆ ಮುಖ್ಯಮಂತ್ರಿಗಳಾಗಿ ಜನಪ್ರಿಯ ಆಡಳಿತ ನೀಡುವ ಮೂಲಕ ರೆಡ್ಡಿಯಾರ್ ಕುಟುಂಬ ಭಾರತ ರಾಜಕೀಯ ಇತಿಹಾಸದಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ. ನಿಜವಾಗಲೂ ಈ ಆಧುನಿಕ ರಾಜಕಾರಣದ ದೃವತಾರೆಗಳಾಗಿರುವ ಈ ಮಹನೀಯರ ಸಾಧನೆ ಮತ್ತು ಸೇವೆ ಸಮಸ್ತ ರೆಡ್ಡಿಗಳು ಗರ್ವದಿಂದ ಅಭಿಮಾನ ಪಡುವಂತಹ ಹೆಮ್ಮೆಯ ಸಂಗತಿಯಾಗಿದೆ.

ಲೇಖಕರು: ಮೊ ಮು ಆಂಜನಪ್ಪರೆಡ್ಡಿ (‘ರೆಡ್ಡಿ ಪರಂಪರೆ’ ಕೃತಿಯಿಂದ…)

Leave a Reply

Your email address will not be published. Required fields are marked *

Back to top button
error: Content is protected !!