Culture

Reddy Mane Devaru- ರೆಡ್ಡಿಕುಲ ದೇವರುಗಳು | ರೆಡ್ಡಿಗಳ ಮನೆಯಲ್ಲಿ ಉಳಿದು ಬಂದಿರುವ ದೈವ ಪರಂಪರೆ

ರೆಡ್ಡಿ ಜನರ ಮನೆದೇವರು, (Reddy Mane Devaru) ಸಪ್ತಮಾತೃಕೆ ಪೂಜೆ, ನಾಗರಕಟ್ಟೆ ಸಂಪ್ರದಾಯಗಳೆಲ್ಲ ಪ್ರಕೃತಿ, ಕುಟುಂಬ ಮತ್ತು ಭಕ್ತಿಯ ನಂಟು ಹೊಮ್ಮಿಸುವ ಸಂಸ್ಕೃತಿಯ ಹಿರಿಮೆಯನ್ನು ತೋರಿಸುತ್ತವೆ. ನಂಬಿಕೆ, ಪರಂಪರೆ ಹಾಗೂ ಕುಟುಂಬ ಸಂಸ್ಕೃತಿಯನ್ನು ಜೋಡಿಸುವ ಈ ಮನೆದೇವರ ಆರಾಧನೆ ರೆಡ್ಡಿ ಸಮಾಜದ ಸಾಂಸ್ಕೃತಿಕ ಬಲವಾಗಿದೆ….

ಭಾರತೀಯ ಸಮುದಾಯಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಬದುಕಿನಲ್ಲಿ ‘ಕುಲದೇವತೆ’ ಅಥವಾ ‘ಮನೆ ದೇವರು’ ಎಂಬ ಪರಿಕಲ್ಪನೆಗೆ ಅನನ್ಯ ಸ್ಥಾನವಿದೆ. ಹಳೆಯ ಪದಗಳಲ್ಲಿ ‘ಹದಿನೆಂಟು ಕುಲ, ಹದಿನೆಂಟು ಜಾತಿ’ ಎಂದು ಹೇಳುವ ಸಂಪ್ರದಾಯ, ಕಾಲಾನುಗತವಾಗಿ ರೂಪಾಂತರಗೊಂಡರೂ, ಕುಲದೇವರ ಆರಾಧನೆಯ ಶಕ್ತಿ ಇಂದಿಗೂ ಅನಾಯಾಸವಾಗಿ ಮುಂದುವರಿದಿದೆ.

ಸಾಂಪ್ರದಾಯಿಕ ಪೂಜಾ ಚಿತ್ರ
ಪ್ರಕೃತಿ ಮೂಲದ ದೈವಾರಾಧನೆ

ರೆಡ್ಡಿ ಜನಾಂಗದಲ್ಲೇ ಈ ಪರಂಪರೆ ಹೆಚ್ಚು ಜೀವಂತ, ಮೂಲಭೂತ ಮತ್ತು ಕುಟುಂಬ ಜೀವನಕ್ಕೆ ನೇರವಾಗಿ ಕೊಂಡೊಯ್ಯುವಂತದ್ದು. ಮೂಲತಃ ಕೃಷಿಕ ಸಮುದಾಯವಾಗಿರುವ ರೆಡ್ಡಿಗಳು ತಮ್ಮ ಆರಾಧನೆಯನ್ನು ಸಹ ಪ್ರಕೃತಿಯ ಸೂರ್ಯ, ಜಲ, ಮರಗಳಿಗೆ ಸೆರೆ ಹಿಡಿದಿದ್ದಾರೆ.

ಸೂರ್ಯನಿಗೆ ನೇರ ನಮಸ್ಕಾರ, ಗಂಗಾತೀರದ ಪಾವಿತ್ರ‍್ಯಕ್ಕೆ ಗೌರವ, ಅಶ್ವತ್ಥ, ಬೇವಿನ ಮರ, ಬನ್ನಿ ಮರಗಳ ಪೂಜೆ- ಹೀಗೆ ಪ್ರತಿ ಮರ, ಪ್ರತಿಯೊಂದು ಜಲ ಮೂಲವೂ ಇವರ ಧಾರ್ಮಿಕ ಜೀವನಕ್ಕೆ ಒಂದು ಆಧ್ಯಾತ್ಮಿಕ ಬಂಡವಾಳವಾಗಿದೆ.

ಇದನ್ನೂ ಓದಿ: Mo Mu Anjanappa Reddy Sahitya Samskrutika Seve- ಮೊ ಮು ಆಂಜನಪ್ಪ ರೆಡ್ಡಿ ಅವರ ಸಾಹಿತ್ಯ, ಸಾಂಸ್ಕೃತಿಕ ಸೇವೆಗಳು

ಸಪ್ತಮಾತೃಕೆಯರ ಆರಾಧನೆ

ರೆಡ್ಡಿ ಮನೆಗಳಲ್ಲಿ ಯಾವುದೇ ಶುಭಕಾರ್ಯ ಆರಂಭಿಸುವ ಮುನ್ನ ಸಪ್ತಮಾತೃಕೆಗಳ ಪೂಜೆ ಕಡ್ಡಾಯ. ಹಳ್ಳಿಯ ಕೆರೆ ಅಥವಾ ಕುಂಟೆಯಲ್ಲಿ ಆಯ್ದ ಏಳು ಚಿಕ್ಕ ಕಲ್ಲುಗಳನ್ನೇ ದೇವಿಯ ರೂಪದಲ್ಲಿ ಕುಳ್ಳಿರಿಸಿ ಪೂಜೆ ಮಾಡುವ ಸಂಪ್ರದಾಯ ಇಂದಿಗೂ ಜೀವಂತವಾಗಿದೆ. ರೈತ ಕುಟುಂಬಗಳಲ್ಲಿ ಇದು ವಿಶೇಷ ವಿಧಿಪೂರ್ವಕವಾಗಿ ನಡೆಯುವುದುಂಟು.

ಈ ದೇವಿಯರ ಸಹೋದರನೆಂಬ ನಂಬಿಕೆಯೊಂದಿಗೆ ಮುನೇಶ್ವರ ಸ್ವಾಮಿ ಮನೆ ದೇವರಾಗಿ ಹಲವು ಕುಟುಂಬಗಳಲ್ಲಿ ಆರಾಧಿಸಲ್ಪಡುತ್ತಾರೆ. ದುಷ್ಟಶಕ್ತಿಗಳಿಂದ ರಕ್ಷಣೆ ಹಾಗೂ ಗಡಿಭಾಗದ ಕಾವಲು ಕಾಯುವ ಮುನೇಶ್ವರನ ಈ ಎರಡು ಗುಣಗಳು ರೆಡ್ಡಿ ಸಮಾಜದಲ್ಲಿ ಪ್ರಮುಖ ನಂಬಿಕೆಯಾಗಿ ಉಳಿದಿವೆ.

ಸಪ್ತಮಾತೃಕೆಯರ ಸಾಂದರ್ಭಿಕ ಚಿತ್ರ
ವೈಷ್ಣವ-ಶೈವ ಸಂಪ್ರದಾಯಗಳ ಸಂಗಮ

ರೆಡ್ಡಿ ಸಮುದಾಯದ ಧಾರ್ಮಿಕ ಜೀವನ ಒಂದು ರೀತಿಯಲ್ಲಿ ಶೈವ-ವೈಷ್ಣವ ಸಮ್ಮಿಲನ. ಕುಟುಂಬ, ವಂಶ ಮತ್ತು ಪ್ರದೇಶಕ್ಕೆ ಅನುಗುಣವಾಗಿ ಮನೆ ದೇವರುಗಳು ಬದಲಾಗುತ್ತಾ ಬಂದಂತಿದ್ದರೂ, ಅವುಗಳಲ್ಲಿರುವ ನಂಬಿಕೆಯ ತೀವ್ರತೆ ಎಲ್ಲರಲ್ಲೂ ಸಮಾನವಾಗಿದೆ. ಸಾಮಾನ್ಯವಾಗಿ ರೆಡ್ಡಿಗಳು ಈ ಕೆಳಗಿನ ದೈವಗಳನ್ನು ಮನೆ ದೇವರಾಗಿ ಆರಾಧಿಸುವುದುಂಟು:

  • ತಿರುಪತಿ ತಿಮ್ಮಪ್ಪ
  • ಶ್ರೀಶೈಲ ಮಲ್ಲಿಕಾರ್ಜುನ
  • ನಂಜನಗೂಡು ನಂಜುಂಡೇಶ್ವರ
  • ರೇಣುಕಾ ಯಲ್ಲಮ್ಮ
  • ನರಸಿಂಹಸ್ವಾಮಿ
  • ಶ್ರೀರಾಮ

ಇದನ್ನೂ ಓದಿ: Vishwakavi Vemana- ಜನಮನ ಕಾಡುವ ವಿಶ್ವಕವಿ ವೇಮನ | ಸರ್ವಧರ್ಮ ಸೌಹಾರ್ದತೆ ಸಾರಿದ ಸಂತನ ವಿಶ್ವಸಂದೇಶ

ನಾಗರಪಂಚಮಿ ಮತ್ತು ನಾಗರಕಟ್ಟೆ ಪೂಜೆ

ಗ್ರಾಮ ಮತ್ತು ವೃತ್ತಿಗಳನ್ನು ಆಧರಿಸಿದ ರೆಡ್ಡಿ ಪರಂಪರೆಯಲ್ಲಿ ಗ್ರಾಮ ದೇವತೆಗಳಿಗೆ ವಿಶೇಷ ಸ್ಥಾನವಿದೆ. ವರ್ಷಕ್ಕೊಮ್ಮೆ ನಡೆಯುವ ನಾಗರಪಂಚಮಿಯ ನಾಗರಕಟ್ಟೆ ಪೂಜೆ, ಜಮೀನು, ಮನೆ, ಸಂತಾನಕ್ಕೆ ರಕ್ಷಣೆ ತರಲು ಮಾಡಲ್ಪಡುವ ಶುಭಾಚರಣೆಗಳಾಗಿವೆ. ನಗರಕ್ಕೆ ವಲಸೆ ಹೋಗಿರುವ ರೆಡ್ಡಿ ಕುಟುಂಬಗಳೂ ಕೂಡ ಈ ಆಚರಣೆಯನ್ನು ಕೈಬಿಡದೇ ಮುಂದುವರೆಸುತ್ತಿರುವುದು ಸಂಪ್ರದಾಯದ ಬಲವನ್ನು ಸೂಚಿಸುತ್ತದೆ.

ರಾಜಧಾನಿ ಪ್ರದೇಶದ ರೆಡ್ಡಿಗಳಲ್ಲಿ ಘಾಟಿ ಸುಬ್ರಹ್ಮಣ್ಯ ಭೇಟಿಗೆ ವಿಶೇಷ ಪ್ರಾಮುಖ್ಯತೆ ಇದೆ. ಹೊಸ ವಾಹನ ಪೂಜೆ, ಕುಟುಂಬ ಸಂಕಲ್ಪಗಳು, ಬಾಲಕ-ಬಾಲಕಿಯ ಮೊದಲ ಕೂದಲು ಸಂಸ್ಕಾರ- ಹೀಗೆ ಅನೇಕ ಸಂಪ್ರದಾಯಗಳು ಈ ದೇವಸ್ಥಾನಕ್ಕೆ ಸಂಬಂಧಪಟ್ಟಿವೆ.

ಹಿಂದೂ ಹಬ್ಬಗಳ ವೈಭವ

ಮನೆದೇವರು, ಗ್ರಾಮ ದೇವರು ಹಾಗೂ ದೈವ ಪರಂಪರೆಯ ಜೊತೆಗೆ ರೆಡ್ಡಿ ಜನಾಂಗ ಬಹುತೇಕ ಹಿಂದೂ ಹಬ್ಬ-ಹರಿದಿನಗಳನ್ನು ಕೂಡ ಚಾಚೂ ತಪ್ಪದೇ ಆಚರಿಸಿಕೊಂಡು ಬರುತ್ತಿದ್ದಾರೆ.

ಯುಗಾದಿ, ದೀಪಾವಳಿ, ಗೌರಿಹಬ್ಬ, ಸಂಕ್ರಾಂತಿ, ರಾಮನವಮಿ ಹಬ್ಬಗಳ ಹಬ್ಬಗಳ ಮೂಲಾರ್ಥವನ್ನು ಉಳಿಸಿಕೊಂಡೇ ಕಾಲಕ್ಕೆ ತಕ್ಕ ಬದಲಾವಣೆಗಳನ್ನು ಸೇರಿಸಿಕೊಂಡಿರುವುದೇ ರೆಡ್ಡಿ ಜನರ ಆಚರಣೆಯ ವೈಶಿಷ್ಟ್ಯ.

ವಿಶೇಷವೆಂದರೆ ಈಚೆಗೆ ಮಹಾಯೋಗಿ ವೇಮನ ಹಾಗೂ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಕೂಡ ರೆಡ್ಡಿಗಳ ಮನೆ-ಮನದಲ್ಲಿ ದೈವಸ್ಥಾನದಲ್ಲಿ ಪೂಜಿಸಲ್ಪಡುತ್ತಿದ್ದಾರೆ. ಐತಿಹಾಸಿಕ ಹಿನ್ನಲೆ ಹೊಂದಿರುವ ಈ ಮಹನೀಯರು ದೈವತ್ವಕ್ಕೇರಿ ಪೂಜಸಲ್ಪಡುತ್ತಿರುವುದು ಹೆಮ್ಮೆಯ ಸಂಗತಿ.

ಇದನ್ನೂ ಓದಿ: Reddy Contribution To Kannada Nadu Nudi – ಕನ್ನಡ ನಾಡು-ನುಡಿಗೆ ರೆಡ್ಡಿಗಳ ಚಿರಸ್ಮರಣೀಯ ಕೊಡುಗೆ

ದೈತ್ವಕ್ಕೇರಿದ ವೇಮನ-ಹೇಮರಡ್ಡಿ ಮಲ್ಲಮ್ಮ

ವಿಶೇಷವೆಂದರೆ, ಇತ್ತೀಚಿನ ದಶಕಗಳಲ್ಲಿ ಮಹಾಯೋಗಿ ವೇಮನ ಹಾಗೂ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ರೆಡ್ಡಿ ಸಮುದಾಯದ ಮನೆ-ಮನಗಳಲ್ಲಿ ಮಾತ್ರವಲ್ಲ, ಗ್ರಾಮ-ಕ್ಷೇತ್ರ ದೈವಸ್ಥಾನಗಳಲ್ಲಿಯೂ ಪೂಜಿಸಲ್ಪಡುತ್ತಿರುವುದು ಅತ್ಯಂತ ಮಹತ್ವದ ಬೆಳವಣಿಗೆ.

ಮಹಾಯೋಗಿ ವೇಮನ

ತಮ್ಮ ಬದುಕಿನಲ್ಲೇ ಮಾನವೀಯತೆ, ನೈತಿಕತೆ, ಭಕ್ತಿ ಮತ್ತು ತಪಸ್ಸಿನ ಮೌಲ್ಯಗಳನ್ನು ಅನಾವರಣಗೊಳಿಸಿದ ಈ ಇಬ್ಬರು ಮಹನೀಯರು, ಕಾಲಕ್ರಮೇಣ ಜನಮನದಲ್ಲಿ ಕುಲದೇವರು-ಗ್ರಾಮದೇವತೆಗಳ ಸ್ಥಾನಕ್ಕೆ ಏರಿರುವುದು ಸಮುದಾಯದ ಸಂಸ್ಕೃತಿಯಲ್ಲಿ ಕಾಣಬಹುದಾದ ಮಹತ್ತರ ಪರಿವರ್ತನೆಯ ಪ್ರತೀಕ.

ಪೂಜಾ ಜಗುಲಿ ಅಲಂಕರಿಸಿದ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ

ಐತಿಹಾಸಿಕ ಮತ್ತು ಆದ್ಯಾತ್ಮಿಕ ಹಿನ್ನಲೆಗಳಿಂದಾಗಿ, ಇವರನ್ನು ಪೂಜಿಸುವ ಸಂಪ್ರದಾಯವು ಇತ್ತೀಚಿನ ದಿನಗಳಲ್ಲಿ ರೆಡ್ಡಿಗಳಲ್ಲಿ ಬೇರೂರಿದೆ. ಮನೆ-ಮನೆಗಳಲ್ಲಿ, ವಿಶೇಷವಾಗಿ ರೆಡ್ಡಿಗಳ ದೈವಸ್ಥಾನಗಳಲ್ಲಿ ‘ಮನೆದೇವರು’ಗಳ ಪಟ್ಟಿಗೆ ಸೇರುವಂತೆ ಈ ಮಹನೀಯರು ಗೌರವಿತವಾಗುತ್ತಿರುವುದು ಸಮುದಾಯದ ಸಂಸ್ಕೃತಿಗೆ ಹೊಸ ಅಧ್ಯಾಯವನ್ನು ಸೇರಿಸಿದೆ.

  • ಲೇಖಕರು: ಮೊ ಮು ಆಂಜನಪ್ಪ ರೆಡ್ಡಿ

Hemareddy Mallamma History- ಸ್ತ್ರೀಕುಲದ ಸ್ಫೂರ್ತಿ ದೇವತೆ ಮಾಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ | ಹೇಮರೆಡ್ಡಿ ಮಲ್ಲಮ್ಮ ಜಯಂತಿಯ ಶುಭಾಶಯಗಳು

One Comment

Leave a Reply

Your email address will not be published. Required fields are marked *

Related Articles

Back to top button