
ಸಹಕಾರ ಭೀಷ್ಮ ಕೆ.ಎಚ್. ಪಾಟೀಲ ಅಭಿಮಾನಿ ಬಳಗ ಹಾಗೂ ಬೆಂಗಳೂರು ನಗರದ ವಿವಿಧ ಸಹಕಾರ ಸಂಘಗಳ ಸಹಯೋಗದೊಂದಿಗೆ ಕಳೆದ ಮಾರ್ಚ್ 13ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕೆ.ಎಚ್.ಪಾಟೀಲ ಜನ್ಮ ಶತಮಾನೋತ್ಸವ ಆಚರಿಸಲಾಗಿದೆ. ಈ ಹಿನ್ನಲೆಯಲ್ಲಿ ಹುಲಕೋಟಿಯ ಹುಲಿ ಎಂದೆ ಪ್ರಸಿದ್ದರಾಗಿದ್ದ ಕೃಷ್ಣೆಗೌಡ ಹನುಮಂತೇಗೌಡ ಪಾಟೀಲರು ನಡೆದು ಬಂದ ದಾರಿಯ ಹೊರಳು ನೋಟ ಇಲ್ಲಿದೆ…
ಕೆ. ಹೆಚ್. ಪಾಟೀಲರ ಇಡೀ ಬದುಕು ಸಮೃದ್ದ ಕಣಜ. ಅವರ ಹೋರಾಟ, ಸೈದ್ದಾಂತಿಕ ಸಹಕಾರಿ ನಿಲುವು, ಮುತ್ಸದ್ದಿತನ, ದೈವ ನಿಷ್ಠೆ, ಸಚ್ಚಾರಿತ್ರö್ಯ, ಸರಳ ಸಜ್ಜನ ವ್ಯಕ್ತಿತ್ವ ಎಲ್ಲವೂ ಪ್ರಾತಃಸ್ಮರಣೀಯ. ರೆಡ್ಡಿ ಸಮಾಜದ ಧೀಮಂತ ನಾಯಕರ ಪೈಕಿ ಕೆ.ಹೆಚ್.ಪಾಟೀಲರೂ ಒಬ್ಬರು. ಗದಗ ಜಿಲ್ಲೆಯ ಜನರಿಗೆ ‘ಗೌಡರು’ ಎಂದೇ ಪ್ರಖ್ಯಾತರಾಗಿದ್ದ ಕೆ.ಹೆಚ್. ಪಾಟೀಲರದು ಪುಟ್‌ಬಾಲ್ ಗುಣ. ತುಳಿದಷ್ಟು ಪುಟಿದೇಳುವ ಪ್ರವೃತ್ತಿ. ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಅವರು ದಿಟ್ಟ ಸಹಕಾರಿ ಧುರೀಣರಾಗಿ ಬೆಳೆದ ಪರಿ ಬೆರುಗು ಮೂಡಿಸುವಂತದ್ದು.
ಪಾಟೀಲರು ಜನ್ಮ ತಾಳಿದ್ದು 1925ನೇ ಮಾರ್ಚ್ 16 ರಂದು. ಗದಗ ನಗರದಿಂದ ಸುಮಾರು 6 ಕಿ.ಮೀ ಅಂತರದಲ್ಲಿ ಇರುವ ಹುಲಕೋಟಿ ಅವರ ಜನ್ಮಸ್ಥಳ. ಮ್ಯಾಟ್ರಿಕ್ ಮುಗಿಸುತ್ತಲೇ ರೆಡ್ಡಿ ಸಹಕಾರಿ ಬ್ಯಾಂಕ್‌ನಲ್ಲಿ ಕೆಲಸಕ್ಕೆ ಸೇರಿಕೊಂಡ ಪಾಟೀಲರು ಆರಂಭದಿ೦ದಲೂ ಮಹತ್ವಾಕಾಂಕ್ಷಿಯ ಹಾಗೂ ಸಾಹಸ ಪ್ರವೃತ್ತಿಯುಳ್ಳವರಾಗಿದ್ದ ಕೃಷ್ಣಗೌಡರಿಗೆ ರೆಡ್ಡಿ ಬ್ಯಾಂಕಿನ ಕಾರಕೂನಿಕೆ ಕೆಲಸ ಸುಲಭಕ್ಕೆ ಒಗ್ಗಲೇ ಇಲ್ಲ. ಹೀಗಾಗಿ ಸಹಕಾರಿ ಕ್ಷೇತ್ರದ ಸೇವಾವೃತ್ತಿಯಲ್ಲಿದ್ದು ಅಲ್ಲಿನ ವಿದ್ಯಮಾನಗಳನ್ನು ತಿಳಿದುಕೊಂಡಿದ್ದ ಅವರು ಸಹಕಾರಿ ಕ್ಷೇತ್ರದ ರಾಜಕೀಯಕ್ಕಿಳಿದರು. ತಾವು ಕಾರಕೂನರಾಗಿ ಸೇವೆ ಸಲ್ಲಿಸಿದ್ದ ರೆಡ್ಡಿ ಸಹಕಾರಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಸುಮಾರು 22 ಶಾಖೆಗಳನ್ನು ನಾಡಿನ ಉದ್ದಗಲಕ್ಕೂ ಸ್ಥಾಪಿಸಿದರು.
ರಾಜಕೀಯ ರಂಗಕ್ಕೆ
ಹೋರಾಟ ಪ್ರವೃತ್ತಿಯನ್ನು ರಕ್ತಗತವಾಗಿಯೇ ಪಡೆದುಕೊಂಡಿದ್ದ ಕೃಷ್ಣಗೌಡರ ರಾಜಕೀಯ 1950ರಲ್ಲಿ ಸಹಕಾರಿ ಸಂಘದ ಅಧ್ಯಕ್ಷರಾಗುವ ಮೂಲಕ ಅವರ ಸ್ವಗ್ರಾಮದಿಂದಲೇ ಆರಂಭವಾಯಿತು. ರೈತ ಸಮುದಾಯದಿಂದ ಬಂದ ಅವರು ಮಧ್ಯವರ್ತಿಗಳಿಂದ ರೈತರು ಪಡುವ ಶೋಷಣೆಯನ್ನು ಕಂಡು ಸಂಕಟ ಪಟ್ಟರು. ಆ ಶೋಷಣೆಯನ್ನು ಕೊನೆಗಾಣಿಸುವುದಕ್ಕಾಗಿ ಹೋರಾಟ ಕೈಗೊಂಡರು. ಗದಗ ಅವರ ಕಾರ್ಯಕ್ಷೇತ್ರವಾಯಿತು. ಪ್ರಬಲ ಸಂಸ್ಥೆಯಾದ ಕಾಟನ್ ಸೇಲ್ಸ್ ಸೊಸೈಟಿಯನ್ನು ತಮ್ಮ ಹತೋಟಿಗೆ ತೆಗೆದುಕೊಂಡರು. ರೈತರ ಹಿತಕ್ಕಾಗಿ ಕ್ಷೀಪ್ರ ಬದಲಾವಣೆಗಳನ್ನು ಸಾಧಿಸಿದರು.
ಸ್ವಾತಂತ್ರ್ಯ ಚಳವಳಿ ಹಾಗೂ ನಂತರದ ಘಟನಾವಳಿಗಳಿಂದ ಪ್ರಭಾವಿತರಾದ ಅವರು ತಮ್ಮ ಇಪ್ಪತ್ತೆöÊದನೆಯ ವಯಸ್ಸಿನಲ್ಲಿ ರಾಷ್ಟ್ರೀಯ ಕಾಂಗ್ರೆಸ್ಸಿನ ಕಾರ್ಯಕರ್ತರಾಗಿ ಸೇರಿದರು. 1954ರಲ್ಲಿ ತರುಣರಾಗಿರುವಾಗಲೇ ಎಐಸಿಸಿ ಅಧಿವೇಶನದಲ್ಲಿ ಭಾಗ ವಹಿಸುವ ಮೂಲಕ ಸಕ್ರಿಯ ರಾಜಕೀಯಕ್ಕೆ ಕಾಲಿರಿಸಿದರು. ಆರಂಭದಲ್ಲೇ ಅಂದಿನ ಎಐಸಿಸಿ ಅಧ್ಯಕ್ಷರಾದ ನಿಜಲಿಂಗಪ್ಪರನ್ನು, ಧಾರವಾಡ ಜಿಲ್ಲಾ ಮುಖಂಡರಾದ ಹಳ್ಳಿಕೇರಿ ಗುದ್ಲೆಪ್ಪ ಅವರನ್ನು ಎದುರು ಹಾಕಿಕೊಳ್ಳಬೇಕಾಯಿತು.
ಅದರ ಪರಿಣಾಮವಾಗಿ 1962ರ ಸಾರ್ವತ್ರಿಕ ಚುನಾವಣೆಯಲ್ಲಿ ಗದಗ ವಿಧಾನಸಭಾ ಮತಕ್ಷೇತ್ರದಿಂದ ಕಾಂಗ್ರೆಸ್ ಹುರಿಯಾಳಾಗಿ ಸ್ಪರ್ಧಿಸಲು ಅವರಿಗೆ ಅವಕಾಶ ನಿರಾಕರಿಸಲಾಯಿತು. ಒಂದು ಬಾಗಿಲು ಮುಚ್ಚಿಕೊಂಡರೆ ತೆಪ್ಪಗೆ ಕೈಕಟ್ಟಿ ನಿಲ್ಲುವ ಜಾಯಮಾನವಲ್ಲ ಕೃಷ್ಣಗೌಡರದು. ರಾಜ್ಯ ಕಾಂಗ್ರೆಸ್ಸಿನಲ್ಲಿ ಆಗದವರು ತಮ್ಮನ್ನು ಮುಂದೆ ಬರದಂತೆ ನೋಡಿಕೊಂಡಾಗ, ತಾವೇ ಹಲವರೊಂದಿಗೆ ‘ಜನತಾ ಪಕ್ಷ’ ಎಂಬ ಹೊಸ ಪಕ್ಷ ಹುಟ್ಟು ಹಾಕಿ 1967ರ ಚುನಾವಣೆಯಲ್ಲಿ ಗದಗ ಮತಕ್ಷೇತ್ರದಿಂದಲೇ ಗೆದ್ದು ವೈರಿಗಳ ಎದೆ ನಡುಗಿಸಿದ್ದರು.

ಸಚಿವರಾಗಿ ಪಾಟೀಲರು…
1972ರಲ್ಲಿ ರಾಜ್ಯ ವಿಧಾನಸಭೆಗೆ ಗದಗ ಭಾಗದಿಂದಲೇ ಪುನಃ ಆಯ್ಕೆಯಾದ ಪಾಟೀಲರು ವಿಧಾನಸಭೆ ಪ್ರವೇಶಿಸಿದರು. ಬಹುಮತ ಹೊಂದಿದ ಇಂದಿರಾ ಕಾಂಗ್ರೆಸ್‌ನ ಡಿ.ದೇವರಾಜು ಅರಸರು ರಾಜ್ಯ ಆಡಳಿತ ಚುಕ್ಕಾಣಿ ಹಿಡಿದರು. ಸಿದ್ದವೀರಪ್ಪನವರ ನಂತರದ ಸ್ಥಾನವಾದ ಕೃಷಿ ಹಾಗೂ ಅರಣ್ಯ ಖಾತೆಯನ್ನು ಕೆ.ಹೆಚ್.ಪಾಟೀಲರು ವಹಿಸಿಕೊಂಡರು. ಸಚಿವರಾಗಿ ಅಧಿಕಾರ ಸ್ವೀಕರಿಸಿ ಅವರು ಕೈಗೊಂಡ ಮೊದಲ ನಿರ್ಧಾರ ಖಾಸಗಿ ವಿದ್ಯುತ್ ಕಂಪನಿಗಳನ್ನು ರಾಷ್ಟ್ರೀಕರಿಸುವುದಾಗಿತ್ತು.
ರಾಜ್ಯದ ಇತರ ನಗರ ಹಾಗೂ ಗ್ರಾಮಗಳಿಗೆ ರಾಜ್ಯ ವಿದ್ಯುತ್ ನಿಗಮದಿಂದ ವಿದ್ಯುತ್ ಪೂರೈಸಲ್ಪಡುತ್ತಿದ್ದರೂ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ ಮುಂತಾದ ಕೆಲವೇ ನಗರಗಳನ್ನು ಇನ್ನೂ ಕೆಲ ಖಾಸಗಿ ವಿದ್ಯುತ್ ಕಂಪನಿಗಳೇ ತಮ್ಮ ಬಿಗಿ ನಿಯಂತ್ರಣದಲ್ಲಿ ಇರಿಸಿಕೊಂಡಿದ್ದವು. ಅವುಗಳಿಂದ ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿರಲಿಲ್ಲ. ಪೂರೈಸುವ ವಿದ್ಯುತ್‌ಗೂ ಮತ್ತು ಗ್ರಾಹಕರಿಂದ ಪಡೆಯುವ ಹಣಕ್ಕೂ ಹೊಂದಾಣಿಕೆಯಿರಲಿಲ್ಲ.
ಅಂತಹ ಖಾಸಗಿ ವಿದ್ಯುತ ಕಂಪನಿಗಳನ್ನು ರಾಷ್ಟ್ರೀಕರಿಸುವುದು ಅನಿವಾರ್ಯವಾಗಿತ್ತು. ವಿದ್ಯುತ್ ಖಾತೆ ಸಚಿವರಾದ ಚನ್ನಬಸಪ್ಪ ಹಾಗೂ ಕೇಂದ್ರ ಸಚಿವೆ ಸರೋಜಿನಿ ಮಹಿಷಿ ಇವರ ಸಹಕಾರದಿಂದ ಅಂತಹ ಖಾಸಗಿ ಕಂಪನಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾನೂನು ತರುವಲ್ಲಿ ಕೆ.ಹೆಚ್ ಯಶಸ್ವಿಯಾಗುವ ಮೂಲಕ ಚುನಾವಣೆ ಕಾಲಕ್ಕೆ ತಮ್ಮ ಕ್ಷೇತ್ರದ ಮತದಾರರಿಗೆ ನೀಡಿದ ಆಶ್ವಾಸನೆ ಈಡೇರಿಸಿಕೊಂಡಿದ್ದರು.
ಗದಗ ತಾಲ್ಲೂಕು ಹತ್ತಿ ಬೆಳೆಗೆ ಹಾಗೂ ಹತ್ತಿ ಅರೆಯುವ, ಗಂಟು ಮಾಡುವ ಉದ್ದಿಮೆಗೆ ಸುಪ್ರಸಿದ್ದ. ಕೆ.ಹೆಚ್ ಅವರು ಗದಗ ನಗರಕ್ಕೆ ಸಮೀಪದಲ್ಲಿಯೇ ಇರುವ ತಮ್ಮ ಹುಲಕೋಟಿಯಲ್ಲಿ ಸಹಕಾರಿ ತತ್ವದ ಮೇಲೆ ಒಂದು ದೊಡ್ಡ ಪ್ರಮಾಣದ ನೂಲಿನ ಗಿರಣಿಯನ್ನು ಸ್ಥಾಪಿಸಿದರು. ಗದಗ ನಗರದಲ್ಲಿನ ಸಂಸ್ಕರಿತ ಅರಳೆ (ಬೀಜ ತೆಗೆದ ಹತ್ತಿ) ಹುಲಕೋಟೆ ನೂಲಿನ ಗಿರಣಿಗೆ ಸಹಜವಾಗಿ ಪೂರೈಕೆಯಾಗತೊಡಗಿತ್ತು.
ಹತ್ತಿಕಾಳಿನಿಂದ ಎಣ್ಣೆ ಉತ್ಪಾದಿಸುವ ಹಾಗೂ ಪಶು ಆಹಾರ ತಯಾರಿಸುವ ಕಾರ್ಖಾನೆಗಳೂ ಪ್ರಾರಂಭಗೊ೦ಡವು. ತನ್ಮೂಲಕ ಅವರು ಗ್ರಾಮೀಣ ಭಾಗದ ಕೈಗಾರಿಕೋದ್ಯಮದ ಬುನಾದಿ ಹಾಕಿದರು. ಪಾಟೀಲರ ಚಾಣಾಕ್ಷ ಹಾಗೂ ದಕ್ಷ ಧುರೀಣತ್ವ ಹೊಂದಿದ ಕೃಷಿ ಹಾಗೂ ಅರಣ್ಯ ಇಲಾಖೆ ವಿನೂತನ ಸ್ಪೂರ್ತಿಯನ್ನು ಪಡೆಯಿತು.
ರಸಗೊಬ್ಬರ ವಿತರಣೆಯನ್ನು ಸಹಕಾರಿ ಕ್ಷೇತ್ರಕ್ಕೆ ವಹಿಸಿಕೊಟ್ಟಿದ್ದು ರೈತ ಸಮುದಾಯಕ್ಕೆ ಅವರು ನೀಡಿದ ಮಹತ್ವದ ಕೊಡುಗೆಯಾಗಿತ್ತು. ಅಗ್ರೋ ಇಂಡಸ್ಟ್ರೀಜ್ ಕಾರ್ಪೋರೇಶನ್ ಮತ್ತು ಫಾರೆಸ್ಟ್ ಇಂಡಸ್ಟ್ರೀಜ್ ಕಾರ್ಪೋರೇಶನ್‌ಗಳು ಹುಟ್ಟು ಪಡೆದುದು ಪಾಟೀಲರ ಅಧಿಕಾರವಧಿಯಲ್ಲಿಯೇ.
ವನ್ಯ ಜೀವಿಗಳ ರಕ್ಷಣೆಗಾಗಿ ಪ್ರತ್ಯೇಕ ಇಲಾಖೆ ಸ್ಥಾಪನೆಯಾದರೂ ಪಾಟೀಲರ ಸಚಿವ ಪದವಿಯಲ್ಲಿ ಆದ ಮತ್ತೊಂದು ಉಲ್ಲೇಖನೀಯ ಬೆಳವಣಿಗೆ. ಜಿಲ್ಲೆಗೊಂದು ಮಣ್ಣು ಪರೀಕ್ಷಣಾ ಪ್ರಯೋಗಾಲಯ, ವಿಭಾಗಕ್ಕೊಂದು ಸಂಚಾರಿ ಮಣ್ಣು ಪರೀಕ್ಷಾ ಪ್ರಯೋಗ ಘಟಕ ಒದಗಿಸಿದುದು ಆಧುನಿಕ ಸುಧಾರಿತ ಬೇಸಾಯದಲ್ಲಿ ಅವರಿಗಿದ್ದ ಆಸಕ್ತಿ ಹಾಗೂ ವಿಶ್ವಾಸಕ್ಕೆ ದ್ಯೋತಕ.

ಸಂಘರ್ಷದ ಹಾದಿಯಲ್ಲಿ….
1974ರಲ್ಲೊಮ್ಮೆ ಪಾಟೀಲರ ಆರೋಗ್ಯ ವಿಷಮ ಸ್ಥಿತಿಗೆ ತಲುಪಿತ್ತು. ಹುಬ್ಬಳ್ಳಿಯಲ್ಲಿದ್ದುಕೊಂಡು ಸಾವಿನಿಂದ ಸೆಣಸಾಡಿ ಗೆದ್ದಿದ್ದರು. ಅಂತಹ ಸಮಯದಲ್ಲಿಯೂ ಪ್ರದೇಶ ಕಾಂಗ್ರೆಸ್ (ಇ) ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಅವರು ಅರಸುರೊಂದಿಗೆ ವಿರಸ ಎದುರಿಸಬೇಕಾಯಿತು. ಮುಖ್ಯಮಂತ್ರಿ ಸ್ಥಾನಕ್ಕಿಂತಲೂ ಕಾಂಗ್ರೆಸ್ ಅಧ್ಯಕ್ಷ ಪದವಿ ಉನ್ನತವಾದುದೆಂದು ಮನಗಾಣಿಸಲು ಹೋರಾಡಿದರು. ತತ್ಪರಿಣಾಮ ಕೆ.ಹೆಚ್ ಕಟ್ಟಿ ಬೆಳೆಸಿದ ಸಹಕಾರಿ ಸಂಸ್ಥೆಗಳ ತನಿಖೆ ಏರ್ಪಟ್ಟವು. ಸರ್ಕಾರ ಅವರ ಸಂಸ್ಥೆಗಳನ್ನು ಸೂಪರ್‌ಸೀಡ್ ಮಾಡಲೂ ಹವಣಿಸಿತು. ಹಲವಾರು ಮೊಕದ್ದಮೆಗಳು ಹೂಡಲ್ಪಟ್ಟವು. ಆದರೆ ಅವೆಲ್ಲವನ್ನೂ ಎದುರಿಸಿ ಇನ್ನೂ ಎತ್ತರವಾಗಿ ಬೆಳೆದು ನಿಂತರು ಕೆ.ಹೆಚ್!
ನಂತರದ ಚುನಾವಣೆಯಲ್ಲಿ ಬ್ರಹ್ಮಾನಂದ ರೆಡ್ಡಿ ಕಾಂಗ್ರೆಸ್ಸಿನ ಉಮೇದುವಾರರಾಗಿ ಆಕಳು ಮತ್ತು ಕರುವಿನ ಸಂಕೇತದೊAದಿಗೆ ತಮ್ಮ ಹಳೆಯ ಮತಕ್ಷೇತ್ರದಿಂದ ಕೆ.ಹೆಚ್ ಸ್ಪರ್ಧೆಗಿಳಿದರು. ದುರಂತವೆ೦ದರೆ ಅವರ ಕಾಂಗ್ರೆಸ್ ಈ ಚುನಾವಣೆಯಲ್ಲಿ ಧೂಳಿಪಟವಾಯಿತು. ಸ್ವತಃ ಕೆ.ಹೆಚ್.ಪಾಟೀಲರು ಜನತಾ ಉಮೇದುವಾರ ಸಿ.ಎಸ್.ಮುತ್ತಿನಪೆಂಡಿಮಠರಿ೦ದ ಸೋಲಿನ ರುಚಿ ಕಂಡರು.
ರಾಜ್ಯದಲ್ಲಿ ಪುನಃ ಇಂದಿರಾ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ದೇವರಾಜ ಅರಸರು 2ನೇ ಬಾರಿಗೆ ಮುಖ್ಯಮಂತ್ರಿಯಾದರು. ಕೇಂದ್ರದಲ್ಲಿನ ಜನತಾ ಸರ್ಕಾರ ಹಿಂದಿನ ಕಾಂಗ್ರೆಸ್ ಸರ್ಕಾರಗಳ ಹಗರಣಗಳ ವಿಚಾರಣೆಗೆ ಹಲವಾರು ಆಯೋಗಗಳನ್ನು ನೇಮಿಸಿತು. ತಮ್ಮ ವಿರುದ್ಧ ಆರೋಪ ವಿಚಾರಣಾ ಗ್ರೋವರ್ ಆಯೋಗದ ಮುಂದೆ ಕೆ.ಹೆಚ್.ಪಾಟೀಲರು ಯಾವ ವಕೀಲರ ಸಹಾಯವಿಲ್ಲದೇ ತಾವೇ ವಾದಿಸಿ ನಿಷ್ಕಲಂಕಿತರರೆAದು ಸಾಧಿಸಿ ಯಶಸ್ವಿಯಾದರು.
ದೇವರಾಜ ಅರಸು ಕರ್ನಾಟಕ ಕಾಂಗ್ರೆಸ್ (ಯು) ಕಟ್ಟಿಕೊಂಡು ಕಾಂಗ್ರೆಸ್ಸಿನಿ೦ದ ದೂರವಾದಾಗ ಕೆ.ಹೆಚ್.ಪಾಟೀಲರು ಇಂದಿರಾ ಗಾಂಧಿಯವರ ಆದೇಶದಂತೆ ಕರ್ನಾಟಕದಲ್ಲಿ ಕಾಂಗ್ರೆಸ್ಸನ್ನು ಪುನಃ ಕಟ್ಟುವ ಕಾರ್ಯಕ್ಕೆ ಸನ್ನದ್ಧರಾದರು. ಪಾಟೀಲರಲ್ಲಿನ ವ್ಯಾಪಕ ಅನುಭವ ಹಾಗೂ ಛಲಗಾರಿಕೆಯನ್ನು ಬಲ್ಲ ಇಂದಿರಾಗಾ೦ಧಿ ರಾಜ್ಯ ಕಾಂಗ್ರೆಸ್ ಪುನಃಶ್ಚೇತನದ ಹೊಣೆಯನ್ನು ಅವರಿಗೇ ಹೊರಿಸಿದ ಫಲವಾಗಿ ಕಾಂಗ್ರೆಸ್ ಅಧ್ಯಕ್ಷ ಪದವಿ ಅವರನ್ನು ಅರಸಿಕೊಂಡು ಬಂದಿತು.
ತಮ್ಮ ರಾಜಕೀಯ ಅಜ್ಞಾತ ವಾಸದ ಅವಧಿಯಲ್ಲೂ ಕೆ.ಹೆಚ್.ಪಾಟೀಲರು ಸಮಯವನ್ನು ಸದ್ವಿನಿಯೋಗ ಪಡಿಸಿಕೊಂಡರು. ತಮ್ಮ 51ನೇ ವಯಸ್ಸಿನಲ್ಲವರು ಮೈಸೂರು ವಿಶ್ವವಿದ್ಯಾಲಯದ ಅಂಚೆ ಸೌಲಭ್ಯದ ಶಿಕ್ಷಣ ಪಡೆದು ರಾಜಕೀಯ ವಿಜ್ಞಾನದಲ್ಲಿ ಎಂ.ಎ ಪರಿಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ಅವರ ಈ ಶ್ರದ್ಧೆ-ಸಾಹಸ ಪ್ರಶಂಸನಾರ್ಹವೂ ಅನುಕರಣಿಯವಾದುದು.
ಅಲ್ಲದೆ ತಾವು ಆರಂಭಿಸಿದ ‘ವಿಶಾಲ ಕರ್ನಾಟಕ’ ದಿನ ಪತ್ರಿಕೆ ಹಾಗೂ ‘ನಂದಾದೀಪ’ ಪತ್ರಿಕೆಗಳಿಗೆ ಹೆಚ್ಚಿನ ಗಮನ ಹರಿಸಿದರು. ಹುಲಕೋಟೆಯಲ್ಲಿ ಕೃಷಿ ತಂತ್ರಜ್ಞಾನ ಕಾಲೇಜು ಹಾಗೂ ಗ್ರಾಮೀಣ ಎಂಜಿನಿಯರಿAಗ್ ಕಾಲೇಜು ಸ್ಥಾಪಿಸಿದರು. ಜನತಾ ಸರ್ಕಾರದ ಆಳ್ವಿಕೆಯಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಗದಗ ನಗರಕ್ಕೆ ತುಂಗಭದ್ರ ನದಿಯಿಂದ ಕುಡಿಯುವ ನೀರಿನ ಪೂರೈಕೆಗಾಗಿ ಆಗ್ರಹಪಡಿಸಿ ಒಪ್ಪಿಗೆ ಪಡೆದುಕೊಂಡಿದ್ದು ಕೆ.ಹೆಚ್.ಪಾಟೀಲರ ಮಹತ್ವದ ಸಾಧನೆ.
1989ರ ಚುನಾವಣೆಯಲ್ಲಿ ಕೆ.ಹೆಚ್.ಪಾಟೀಲರು ಗದಗ ಮತಕ್ಷೇತ್ರದಿಂದಲೇ ಆಯ್ಕೆಗೊಂಡರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾದರು. ಕೆ.ಹೆಚ್.ಪಾಟೀಲರು ಕಂದಾಯ ಸಚಿವರಾದರು. ಬಳಿಕ ವೀರೇಂದ್ರ ಪಾಟೀಲರು ಹಾಸಿಗೆ ಹಿಡಿದುದನ್ನೇ ನೆಪವಾಗಿಸಿಕೊಂಡು ಕರ್ನಾಟಕ ಆಡಳಿತದಲ್ಲಿ ಬದಲಾವಣೆ ಮಾಡಿ ಬಂಗಾರಪ್ಪನವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಕಲ್ಪಿಸಿದರು.
ಕೆ.ಹೆಚ್.ಪಾಟೀಲರಿಗೆ ತಮಗೆ ಬಹುಸಂಖ್ಯೆಯ ಶಾಸಕ ಬೆಂಬಲ ಪಡೆದಿದ್ದರೂ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರ ಮಾತಿಗೆ ಬೆಲೆ ಕೊಟ್ಟು ಸಹಕಾರಿ ಮಂತ್ರಿಯಾದರು. ಅವರಿಗೆ ಅತ್ಯಂತ ಪ್ರೀತಿಯ ಇಲಾಖೆಯೇ ಪ್ರಾಪ್ತವಾದಾಗ ಅಲ್ಲಿ ಅನೇಕ ಮಹತ್ವದ ಸುಧಾರಣೆ ಕೈಗೊಳ್ಳಬೇಕೆಂದರು. ಅಷ್ಟರಲ್ಲಿಯೇ ಅವರನ್ನು ಸಹಕಾರಿ ಇಲಾಖೆಯಿಂದ ಗ್ರಾಮೀಣಾಭಿವೃದ್ಧಿ ಮಂತ್ರಿಯನ್ನಾಗಿಸಿದರು.

ರೆಡ್ಡಿ ಸಮಾಜದ ಏಳಿಗೆಗಾಗಿ…
ಪಾಟೀಲರು ಬಹುಮುಖ ಪ್ರತಿಭೆಯ ವರ್ಣಮಯ ವ್ಯಕ್ತಿಯಾಗಿದ್ದರು. ಹೋರಾಟ ಅವರಿಗೆ ರಕ್ತಗತವಾಗಿತ್ತು. ರೆಡ್ಡಿ ಸಮಾಜದ ಏಳ್ಗೆಗಾಗಿ ಸ್ಥಾಪಿತವಾದ ರೆಡ್ಡಿ ಸಹಕಾರಿ ಬ್ಯಾಂಕ್‌ನ್ನು ನಂತರ ಎಲ್ಲ ಸಮಾಜದ ಜನರಿಗೂ ಉಪಯೋಗವಾಗುವಂತೆ ಎಲ್ಲರೂ ಈ ಸಂಸ್ಥೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದ ಶ್ರೇಯಸ್ಸು ಪಾಟೀಲರಿಗೆ ಸಲ್ಲುತ್ತದೆ.
ಶೈಕ್ಷಣಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ರೆಡ್ಡಿ ಸಮುದಾಯದ ವಿದ್ಯಾಭ್ಯಾಸವೃದ್ಧಿಗಾಗಿ ಧಾರವಾಡದಲ್ಲಿ ಕಟ್ಟಲ್ಪಟ್ಟ ರೆಡ್ಡಿ ವಿದ್ಯಾವರ್ಧಕ ಮತ್ತು ಸಾಮಾಜಿಕ ಸಂಘದ ಆಡಳಿತ ಚುಕ್ಕಾಣಿಯನ್ನು 1960ರ ಸುಮಾರಿಗೆ ಕೆ.ಹೆಚ್.ಪಾಟೀಲರು ವಹಿಸಿಕೊಂಡ ಮೇಲೆ ಅದರ ಇತಿಹಾಸವೇ ಬದಲಾಯಿತೆಂದರೆ ಅತಿಶಯೋಕ್ತಿಯಲ್ಲ. ಹುಬ್ಬಳ್ಳಿಯ ವಿದ್ಯಾನಗರದಲ್ಲಿ ನಿರ್ಮಾಣವಾದ ರೆಡ್ಡಿ ವಿದ್ಯಾವರ್ಧಕ ನಿಲಯದ ಭವ್ಯ ಕಟ್ಟಡ ಅವರ ಕರ್ತೃತ್ವ ಶಕ್ತಿಗೆ ಜೀವಂತ ಸಾಕ್ಷಿಯಾಗಿದೆ.
ಅದೇ ರೀತಿ 1971ರಲ್ಲಿ ಹುಬ್ಬಳ್ಳಿಯಲ್ಲಿ ಪ್ರಾರಂಭವಾದ ವಿಶ್ವಭಾರತಿ ಗರ್ಲ್ಸ್ ಹೈಸ್ಕೂಲ್, ಹುಲಕೋಟಿ ಬಾಲಕಿಯರ ಮಾದ್ಯಮಿಕ ಶಾಲೆ, ಗದಗದಲ್ಲಿನ ಮಾದ್ಯಮಿಕ ಶಾಲೆ, ಕಿರಿಯ ಹಾಗೂ ಹಿರಿಯ ಮಹಾವಿದ್ಯಾಲಯಗಳು, ಧಾರವಾಡ ಕೃಷಿ ವಿಶ್ವವಿದ್ಯಾಲಯ, ಹುಲಕೋಟಿಯ ರೂರಲ್ ಇಂಜಿನಿಯರಿAಗ್ ಕಾಲೇಜ್ ಮತ್ತು ರೆಸಿಡೆನ್ಷಿಯಲ್ ಸ್ಕೂಲ್ ಇವೆಲ್ಲ ಅವರ ಅನನ್ಯ ವಿದ್ಯಾ ಪ್ರೇಮಕ್ಕೆ ಸಬಲ ಉದಾಹರಣೆಯಾಗಿವೆ. ಪತ್ರಿಕೋದ್ಯಮದಲ್ಲೂ ಅವರ ಆಸಕ್ತಿ ಅಪಾರವಾಗಿತ್ತು.
ವಿಶಾಲ ಕರ್ನಾಟಕ ದಿನಪತ್ರಿಕೆಯನ್ನು, ನಂದಾದೀಪ ಪತ್ರಿಕೆಯನ್ನು ಹೊರಡಿಸಿದರು. ಅಲ್ಲದೆ ಹಿರಿಯ ನಾಯಕ ಮೂರಾರ್ಜಿ ದೇಸಾಯಿಯವರ ಬಗ್ಗೆ ಒಂದು ಪುಸ್ತಕವನ್ನು ಬರೆದು ಪ್ರಕಟಿಸಿದ್ದರು. ಹುಲಕೋಟಿಯಲ್ಲಿನ ಮೂರು ನೂಲಿನ ಗಿರಣಿಗಳು, ಬಿಂಕದಟ್ಟಿಯ ಎಣ್ಣೆ ಗಿರಣಿ, ಅಣ್ಣೀಗೇರಿಯ ನೂಲಿನ ಗಿರಣಿ, ಪಶು ಆಹಾರ ಉತ್ಪಾದಕ ಘಟಕ ಇವು ಔದ್ಯಮಿಕ ರಂಗದಲ್ಲಿನ ಅವರ ಸಾಧನೆಯಾಗಿವೆ.
ಕೆ.ಹೆಚ್.ಪಾಟೀಲರು ಕಟ್ಟಿಬೆಳೆಸಿದ ಸಹಕಾರಿ ಸಂಘ ಸಂಸ್ಥೆಗಳ ಪಟ್ಟಿ ಬಹಳ ಉದ್ದವೇ ಇದೆ. ಗದಗ ತಾಲ್ಲೂಕನ್ನು ಅವರು ಸಹಕಾರಿ ರಂಗದ ಓಯಾಸಿಸ್ ಆಗಿ ಪರಿವರ್ತಿಸಿದ್ದರು. ಗದಗ-ಹುಲಕೋಟಿಗಳಲ್ಲಿ ಅವರು ಸಹಕಾರಿ ಸಂಸ್ಥೆಗಳ ಸಾಮ್ರಾಜ್ಯವನ್ನೇ ನಿರ್ಮಿಸಿದರು. ಅಂತೆಯೇ ಅವರು ಸಹಕಾರಿ ರಂಗದ ಭೀಷ್ಮರೆಂದೇ ಗುರುತಿಸಲ್ಪಟ್ಟರು.
ಅವರಿಗೆ ಸಹಕಾರಿ ಆಂದೋಲನದಲ್ಲಿ ಅಪಾರ ಶೃದ್ಧೆ ಇದ್ದಿತು. ವಿಶ್ವದ ಹಲವಾರು ದೇಶಗಳಲ್ಲಿನ ಸಹಕಾರ ವ್ಯವಸ್ಥೆಯ ಕುರಿತು ಧೀರ್ಘವಾಗಿ ಅಧ್ಯಯನಗೈದಿದ್ದರು. ನಮ್ಮಲ್ಲಿನ ಸಹಕಾರಿ ಕಾನೂನಿಗೆ ಅವರು ತಮ್ಮ ಆಳ ಅಭ್ಯಾಸ ಹಾಗೂ ಸ್ವಾನುಭವಗಳ ಎರಕಹೊಯ್ದು ಜ್ಞಾನದಿಂದ ಹಲವಾರು ತಿದ್ದುಪಡಿಗಳನ್ನು ತಂದಿದ್ದರು. ಆದರೆ ಅವರ ಹಠಾತ್ ನಿಧನದಿಂದ ಅವು ಕಾಗದಲ್ಲೇ ಉಳಿದವು.
ಕೆ ಹೆಚ್ ಪಾಟೀಲರು ಸಾಗಿ ಬಂದ ದಾರಿ ಸುಗಮವಾದುದೇನಲ್ಲ. ಹಲವು ಎಡರು ತೊಡರುಗಳನ್ನು ಎದುರಿಸಿ, ಸೋಲು-ಸಂಕಷ್ಟಗಳಿಗೆ ಕಂಗೆಡದೆ ದಾಪುಗಾಲಿಕ್ಕಿ ನಡೆದು ಬುಲ್‌ಡೋಜರ್ ಗೌಡರೆಂದೇ ಪ್ರಖ್ಯಾತಿ ಪಡೆದರು. ಚುನಾವಣಾ ಕಣಕ್ಕಿಳಿದಾಗಲೆಲ್ಲ ಗದುಗಿನ ಓಣಿಗಳಲ್ಲಿ ಅವರ ಕಾರಿನ ಮೇಲೆ ಕಲ್ಲುಗಳು ಬೀಳುತ್ತಿದ್ದವು. ಸಭೆಯಲ್ಲಿ ಮಾತನಾಡಲೆದ್ದರೆ ಕಲ್ಲು, ಕೊಳೆತ ಹಣ್ಣು, ಕೋಳಿ ಮೊಟ್ಟೆಗಳ ಸುರಿಮಳೆಯಾಗುತ್ತಿತ್ತು.
ಎದೆ ನಡುಗಿಸುವ ಪ್ರಸಂಗದಲ್ಲೂ ಕೂದಲೆಳೆಯಷ್ಟು ವಿಚಲಿತರಾಗದೆ ಕೆಚ್ಚೆದೆಯ ಕಲಿಯಂತೆ ನಿಂತು ‘ನಿಮಗೆಲ್ಲ ನನ್ನ ಮೇಲೆ ಪ್ರೀತಿ ವಿಶ್ವಾಸ ಇದೆ, ಆದರೂ ಯಾರೋ ಕೆಲವರು ನಿಮ್ಮನ್ನು ದಾರಿ ತಪ್ಪಿಸಿ ಕಲ್ಲೆಸೆಯುವಂತೆ ಮಾಡುತ್ತಿದ್ದಾರೆ. ನೀವು ಕಲ್ಲು, ಕತ್ತಿ ಎಸೆದರೂ ಅವು ನನ್ನ ಬಳಿ ಬರುವಷ್ಟರಲ್ಲಿ ಹೂವಾಗಿ ಬಿಡುತ್ತವೆ’ ಎಂದು ಹೇಳುತ್ತಿದ್ದರು ಮತ್ತು ಜಯವನ್ನು ಸಾಧಿಸುತ್ತಿದ್ದರು. ಸೋತಾಗ ಕುಗ್ಗದೆ ಗೆದ್ದಾಗ ಹಿಗ್ಗದೆ ತಾವು ಕಂಡ ಗುರಿಸಾಧನೆಗಾಗಿ ನಿರಂತರ ಯತ್ನ ನಡೆಸಿದ ಕೀರ್ತಿ ಕೃಷ್ಣಗೌಡರದು.
…ಹೇಗೆ ನೋಡಿದರೂ ಕೆ.ಹೆಚ್.ಪಾಟೀಲರು ಒಬ್ಬ ವರ್ಣಮಯ ವ್ಯಕ್ತಿಯಾಗಿದ್ದರು. ಆದರ್ಶ ಕನಸುಗಾರರಾಗಿದ್ದ ಅವರು ಇನ್ನೂ ಹಲವಾರು ಸುಂದರ ಕನಸುಗಳನ್ನು ಕಂಡಿದ್ದರು. ಆದರೆ ಅವನ್ನು ಸಾಧಿಸುವ ಹಾದಿಯಲ್ಲಿಯೇ ಅವರು ಅಗಲಿದುದು ದುರಾದೃಷ್ಟವೆನ್ನಬೇಕು. 1992 ಮಾರ್ಚ್ 9 ರಂದು ಮದ್ರಾಸ್‌ನಲ್ಲಿ ಕಿಡ್ನಿ ಬದಲಿಸಲೆತ್ನಿಸುತ್ತಿದ್ದಾಗ ಕೊನೆಯುಸಿರೆದ ಪಾಟೀಲರ ಸಾವಿನಲ್ಲಿ ಕರ್ನಾಟಕ ಒಬ್ಬ ದಕ್ಷ ಆಡಳಿತಗಾರರನ್ನು, ಧೀಮಂತ ನಾಯಕನನ್ನು, ದಣಿವರಿಯದ ಹೋರಾಟಗಾರನನ್ನು, ರೈತರ, ಬಡವರ ಹಿತಾಸಕ್ತನನ್ನು, ಸಹಕಾರಿ ರಂಗದ ದಿಗ್ಗಜನನ್ನು ಕಳೆದುಕೊಂಡಿತು.
ಲೇಖಕರು: ಮೊ ಮು ಆಂಜನಪ್ಪ ರೆಡ್ಡಿ (‘ರೆಡ್ಡಿ ಪರಂಪರೆ’ ಕೃತಿಯಿಂದ ಆಯ್ದ ಭಾಗ)