Culture

Reddykula Shakhegalu- ವೈವಿಧ್ಯತೆಯಲ್ಲಿ ಐಕ್ಯತೆ ಸಾರುವ ರೆಡ್ಡಿಕುಲ ಶಾಖೆಗಳು

Reddykula Shakhegalu

ರೆಡ್ಡಿಕುಲದ ವೈವಿಧ್ಯಮಯ ಶಾಖೆಗಳು (Reddykula Shakhegalu) ಅವುಗಳ ಇತಿಹಾಸ, ಸಂಸ್ಕೃತಿ, ಜಾನಪದ ಮೂಲಗಳು ಮತ್ತು ದಖನ್ ಪ್ರದೇಶದಿಂದ ಹರಡಿದ ವಂಶಪಾರಂಪರ್ಯದ ಪಥಗಳನ್ನು ಇಲ್ಲಿ ವಿವರಿಸಲಾಗಿದೆ…

ರೆಡ್ಡಿಜನರ ಸಾಮಾಜಿಕ ಸಂರಚನೆ ಭಾರತೀಯ ಸಮಾಜದ ಇತಿಹಾಸ-ಸಂಸ್ಕೃತಿಗಳ ಅಧ್ಯಯನಕ್ಕೆ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಭಾರತದ ವಿವಿಧ ಭಾಗಗಳಲ್ಲಿ ನೆಲೆಸಿರುವ ರೆಡ್ಡಿ ಸಮಾಜವು ಒಂದು ಚೌಕಟ್ಟಿನೊಳಗೆ ಸೀಮಿತವಾಗದೆ, ಭೌಗೋಳಿಕ ಪ್ರದೇಶದಿಂದ ಪ್ರದೇಶಕ್ಕೆ ತಮ್ಮದೇ ಆದ ಸಂಪ್ರದಾಯ, ಆಚರಣೆ, ಮಾತೃಭಾಷೆಯ ರೂಪಾಂತರ, ಆಹಾರ ಸಂಸ್ಕೃತಿ, ಜಾನಪದ ನಂಬಿಕೆಗಳು ಎನ್ನುವ ಎಲ್ಲ ಕ್ಷೇತ್ರಗಳಲ್ಲಿಯೂ ವೈವಿಧ್ಯತೆಯನ್ನು ಬೆಳೆಸಿಕೊಂಡಿದೆ.

ಈ ಕಾರಣದಿಂದಲೇ ರೆಡ್ಡಿಜನರ ಒಳಪಂಗಡಗಳನ್ನು ಅಥವಾ ಶಾಖೆಗಳನ್ನು ನಿಖರವಾಗಿ ಗುರುತಿಸುವುದು ಸಂಶೋಧಕರಿಗೂ, ಇತಿಹಾಸಕಾರರಿಗೂ ಸವಾಲಾಗಿದೆ. ಅಕ್ಕಿಯ ವಿವಿಧ ತಳಿಗಳನ್ನು ಎಣಿಸುವುದು ಸಾಧ್ಯವಾದರೂ, ರೆಡ್ಡಿಗಳ ಒಳಪಂಗಡಗಳನ್ನು ಶೇ.100ರಷ್ಟು ಶುದ್ಧತೆಯಿಂದ ಗುರುತಿಸುವುದು ಸುಲಭದ ಕೆಲಸವಲ್ಲ.

ರೆಡ್ಡಿಗಳಲ್ಲಿ ಗೋತ್ರ-ವಂಶಾವಳಿಯ ಆಧಾರದ ಮೇಲೆ ಪಂಗಡಗಳ ವಿಭಜನೆ ನಡೆದುಬಂದಿದ್ದು; ಪ್ರತಿ ಪ್ರದೇಶವು ತನ್ನದೇ ಆದ ಜಾನಪದ ಸ್ಮೃತಿಗಳನ್ನು ಸೇರಿಸಿಕೊಂಡಿರುವುದೇ ಇದಕ್ಕೆ ಬಹುಮುಖ್ಯ ಕಾಣವಾಗಿದೆ.

ವಿಶೇಷವಾಗಿ ಉತ್ತರ ಕರ್ನಾಟಕ ಪ್ರದೇಶದಲ್ಲಿ ಅನೇಕ ರೆಡ್ಡಿ ಕುಟುಂಬಗಳು ತಮ್ಮ ಮನೆತನದ ಹೆಸರುಗಳನ್ನೇ ಕುಲನಾಮವಾಗಿ ಬಳಸುವ ಪದ್ಧತಿಯನ್ನು ಮುಂದುವರಿಸಿಕೊಂಡಿವೆ. ‘ರೆಡ್ಡಿ’ ಎಂಬ ಕುಲನಾಮವನ್ನು ನೇರವಾಗಿ ಬಳಸದಿರುವುದರಿಂದ, ಇಂದಿಗೂ ಹಲವಾರು ಪಂಗಡಗಳು ಅಧಿಕೃತ ದಾಖಲೆಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ!

ಇದನ್ನೂ ಓದಿ: Uyyalawada Narasimha Reddy- ಅಪ್ರತಿಮ ದೇಶಭಕ್ತ ಉಯ್ಯಾಲವಾಡ ನರಸಿಂಹರೆಡ್ಡಿ | ಜಯಂತೋತ್ಸವದ ವಿಶೇಷ ಲೇಖನ

ವೈವಿಧ್ಯತೆಯೊಳಗಿನ ಸಂಸ್ಕೃತಿ

ರೆಡ್ಡಿಜನರ ಒಂದು ದೊಡ್ಡ ಗುರುತು ಎಂದರೆ- ಅದು ವೈವಿಧ್ಯತೆಯಲ್ಲಿರುವ ಏಕತೆಯ ಪರಂಪರೆ. ಒಂದು ಪ್ರದೇಶದ ರೆಡ್ಡಿಗಳ ಸಂಪ್ರದಾಯ ಮತ್ತೊಂದು ಪ್ರದೇಶದವರಿಗಿಂತ ಭಿನ್ನವಾಗಿದ್ದರೂ, ಅವರ ಸಂಸ್ಕೃತಿಯ ಮೂಲಸ್ಥಂಭವಾದ ಗೌರವ, ಧೈರ್ಯ, ಭೂಮಿಯೊಂದಿಗೆ ಇರುವ ಸಂಬಂಧ ಮತ್ತು ಕುಟುಂಬ ವ್ಯವಸ್ಥೆಯ ಬಲ ಎಲ್ಲೆಡೆಯೂ ಒಂದೇ ಹಂತದಲ್ಲಿ ಕಾಣಸಿಗುತ್ತದೆ.

ಈ ಸಂಸ್ಕೃತಿಯ ವೈವಿಧ್ಯತೆಯಂತೆ, ಅವರ ಒಳಪಂಗಡಗಳ ಹಿಂದಿನ ಕಥೆಗಳೂ ಕೂಡ ರೋಚಕ. ಪ್ರತಿಯೊಂದು ಶಾಖೆಯೂ ತನ್ನದೇ ಆದ ಪರಂಪರೆ, ಪೌರಾಣಿಕ ಹಿನ್ನೆಲೆ ಮತ್ತು ಜಾನಪದ ನಂಬಿಕೆಗಳೊಂದಿಗೆ ಜೀವಂತವಾಗಿವೆ. ಉತ್ಸವಗಳ ಆಚರಣೆ, ಮದುವೆ ಸಂಪ್ರದಾಯಗಳು, ಪಿತೃತರ್ಪಣ ಪದ್ದತಿ ಇವೆಲ್ಲವೂ ಪಂಗಡಗಳ ವೈಶಿಷ್ಟ್ಯತೆಯನ್ನು ಮತ್ತಷ್ಟು ಉಜ್ವಲಗೊಳಿಸುತ್ತವೆ.

ರೆಡ್ಡಿಕುಲದ ವೈವಿಧ್ಯಮಯ ಶಾಖೆಗಳು
ರೆಡ್ಡಿಗಳ ಸಾಮಾಜಿಕ ಸ್ಥಾನಮಾನ

ಇಂಗ್ಲಿಷ್ ವಿದ್ವಾಂಸ ಜೆ. ಹಚ್. ಹಟ್ಟನ್ ಅವರು ತಮ್ಮ ಸಂಶೋಧನೆಯಲ್ಲಿ ರೆಡ್ಡಿಗಳನ್ನು ಸಾಮಾಜಿಕ ಸ್ಥಾನಮಾನದಲ್ಲಿ ಬ್ರಾಹ್ಮಣರ ನಂತರದ ಸ್ಥಾನದಲ್ಲಿರಿಸಿದರೆ, ದೇಶೀಯ ಸಂಶೋಧಕ ಶ್ರೀ ಅನಂತ ಕೃಷ್ಣಯ್ಯರ್ ಅವರು ಶೂದ್ರ ವರ್ಗಗಳಲ್ಲಿ ರೆಡ್ಡಿಗಳು ಅತಿ ಮೇಲುಪಟ್ಟ ಸ್ಥಾನ ಪಡೆದವರು ಎಂದು ತಿಳಿಸುತ್ತಾರೆ. ಈ ಇಬ್ಬರ ಅಭಿಪ್ರಾಯಗಳು ರೆಡ್ಡಿಗಳಲ್ಲಿ ಅಡಗಿರುವ ಸಾಮಾಜಿಕ ಶಕ್ತಿಯ ಮತ್ತು ಐತಿಹಾಸಿಕ ಪ್ರಾಬಲ್ಯದ ಸೂಚಕವಾಗಿದೆ.

ಈ ಮಟ್ಟದ ಗೌರವ ಸ್ಥಾನದಲ್ಲಿರುವ ಸಮುದಾಯ ಆಗಿರುವುದರಿಂದಲೇ, ಅವರೊಳಗಿನ ಪಂಗಡಗಳೂ ತಮಗೆ ತಕ್ಕಂತೆ ಧಾರ್ಮಿಕ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಶ್ರೇಷ್ಠತೆಯನ್ನು ಉಳಿಸಿಕೊಂಡಿವೆ. ಒಂದು ಶಾಖೆಯ ಆಚರಣೆ ಮತ್ತೊಂದರಿಗಿಂತ ವಿಭಿನ್ನವಾದರೂ, ಸಮಗ್ರವಾಗಿ ನೋಡಿದರೆ ಎಲ್ಲವೂ ಒಂದೇ ಸಂಸ್ಕೃತಿ ಸಮುದಾಯದ ವೈವಿಧ್ಯಮಯ ಮುಖಗಳಾಗಿವೆ.

ಇದನ್ನೂ ಓದಿ: Reddy Mane Devaru- ರೆಡ್ಡಿಕುಲ ದೇವರುಗಳು | ರೆಡ್ಡಿಗಳ ಮನೆಯಲ್ಲಿ ಉಳಿದು ಬಂದಿರುವ ದೈವ ಪರಂಪರೆ

ಮೂಲಸ್ಥಾನದ ಪರಿವರ್ತನೆ

ರೆಡ್ಡಿಗಳ ಮೂಲ ಸ್ಥಾನದ ಬಗ್ಗೆ ವಿವಿಧ ಅಭಿಪ್ರಾಯಗಳಿದ್ದರೂ, ದಖನ್ ಪ್ರದೇಶವೇ ಅವರ ಪ್ರಾರಂಭಿಕ ನೆಲೆಯಾಗಿತ್ತು ಎಂಬುದು ಸಂಶೋಧಕರ ಸಮನ್ವಿತ ಅಭಿಪ್ರಾಯ. ದಖನ್ ಪ್ರಸ್ಥಭೂಮಿಯಿಂದ ಆರಂಭವಾದ ಈ ಸಮುದಾಯವು ಕಾಲಕ್ರಮದಲ್ಲಿ ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು ಸೇರಿದಂತೆ ಭಾರತದ ಅನೇಕ ಭಾಗಗಳಿಗೆ ವಲಸೆ ಹೋದರು. ವ್ಯಾಪಾರ, ಕೃಷಿ, ಸೈನಿಕ ಸೇವೆ, ರಾಜ್ಯಕಾರ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿನ ತೊಡಗಿಸಿಕೊಂಡ ಕಾರಣ, ಅವರು ನೆಲೆಸಿದ ಎಲ್ಲೆಡೆ ತಮ್ಮದೇ ವಿಭಿನ್ನ ಪಂಗಡಗಳನ್ನು ರೂಪಿಸಿಕೊಂಡರು.

ಇದೆಲ್ಲದರ ಜೊತೆಗೆ ಆಧುನಿಕ ಯುಗದಲ್ಲಿ ವಿದೇಶಗಳಿಗೂ ವಲಸೆ ಆಗಿ, ಅಲ್ಲಿ ಸಹ ತಮ್ಮ ಪರಂಪರೆ-ಪಂಗಡಗಳನ್ನು ಸಣ್ಣ ಬದಲಾವಣೆಗಳೊಂದಿಗೆ ಉಳಿಸಿಕೊಂಡಿರುವುದು ಗಮನಾರ್ಹ. ವಲಸೆ ಮತ್ತು ಕಾಲಾಂತರದಲ್ಲಿ ನಡೆದ ಸಂಸ್ಕೃತಿ ಸಮ್ಮಿಶ್ರಣದಿಂದ ಹೊಸ ಪಂಗಡಗಳು ಉದಯಿಸಿ ಬಂದಿರುವ ಸಾಧ್ಯತೆಯೂ ಇದೆ.

38 ಪ್ರಮುಖ ಶಾಖೆಗಳ ಗುರುತು

ಅನೇಕ ಮಹನೀಯರು, ಇತಿಹಾಸಕಾರರು, ಪ್ರಾದೇಶಿಕ ಸಂಶೋಧಕರು, ರೆಡ್ಡಿ ಸಮುದಾಯದ ಹಿರಿಯರು ನಡೆಸಿದ ಅನೇಕ ವರ್ಷಗಳ ಅಧ್ಯಯನಗಳ ಆಧಾರದ ಮೇಲೆ ಇಂದಿನ ದಾಖಲೆಗಳಿಗೆ ಸಿಕ್ಕಿರುವ ರೆಡ್ಡಿಗಳ 38 ಪ್ರಮುಖ ಶಾಖೆಗಳನ್ನು ಗುರುತಿಸಲಾಗಿದೆ.

ಆದರೆ, ಇದು ಸಮಗ್ರ ಪಟ್ಟಿ ಅಲ್ಲ; ಕಳೆದ ಹಲವು ಶತಮಾನಗಳಲ್ಲಿ ರೂಪಗೊಂಡ ಹಲವಾರು ಉಪಪಂಗಡಗಳು ಇನ್ನೂ ಹುಡುಕಾಟಕ್ಕೆ ಸಿಕ್ಕಿಲ್ಲ.ಅಂದರೆ ರೆಡ್ಡಿಕುಲದ ಒಳಪಂಗಡಗಳ ಇತಿಹಾಸ ಇನ್ನೂ ಪೂರ್ಣವಾದ ಅಧ್ಯಯನವನ್ನು ನಿರೀಕ್ಷಿಸುತ್ತಿದೆ. ಹೊಸ ಸಂಶೋಧನೆಗಳು ಇದನ್ನು ಮತ್ತಷ್ಟು ವಿಸ್ತರಿಸಬೇಕಾಗಿದೆ.

ಇದನ್ನೂ ಓದಿ: Vishwakavi Vemana- ಜನಮನ ಕಾಡುವ ವಿಶ್ವಕವಿ ವೇಮನ | ಸರ್ವಧರ್ಮ ಸೌಹಾರ್ದತೆ ಸಾರಿದ ಸಂತನ ವಿಶ್ವಸಂದೇಶ

38 ಶಾಖೆಗಳ ವಿವರವಾದ ಪರಿಚಯ ನಿರೀಕ್ಷಿಸಿ

ಈ ಸಂಚಿಕೆಯಲ್ಲಿ ರೆಡ್ಡಿಕುಲದ ಹಿನ್ನೆಲೆ ಮತ್ತು ವೈವಿಧ್ಯತೆಯನ್ನು ವಿವರಿಸಿದ್ದೇವೆ. ಮುಂದಿನ ಸಂಚಿಕೆಯಲ್ಲಿ ಲಭ್ಯ ದಾಖಲೆಗಳ ಆಧಾರದ ಮೇಲೆ ಗುರುತಿಸಲಾದ 38 ಶಾಖೆಗಳ ಪೂರ್ಣ ವಿವರಣೆ, ಅವುಗಳ ವಂಶಪಾರಂಪರ್ಯ, ಸಂಸ್ಕೃತಿ ವೈಶಿಷ್ಟ್ಯ, ಜಾನಪದ ಮೂಲಗಳು ಸೇರಿದಂತೆ ಸಮಗ್ರವಾಗಿ ನಿಮ್ಮ ಮುಂದಿಡಲಿದ್ದೇವೆ. ನಿರೀಕ್ಷಿಸಿ…

ಲೇಖಕರು: ಮೊ ಮು ಆಂಜನಪ್ಪರೆಡ್ಡಿ

Leave a Reply

Your email address will not be published. Required fields are marked *

Related Articles

Back to top button