
ಇಂದು (ಮೇ 04) ಮೊದಲ ಮುಖ್ಯಮಂತ್ರಿ ಕೆ ಸಿ ರೆಡ್ಡಿಯವರ ಜನ್ಮ ದಿನ. ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಮಧ್ಯಪ್ರದೇಶ ರಾಜ್ಯಪಾಲರಾಗಿ ಸುಧೀರ್ಘ ಅಧಿಕಾರ ರಾಜಕೀಯದಲ್ಲಿ ದುಡಿದ ಕೆ.ಸಿ.ರೆಡ್ಡಿ ಅರ್ಥಾತ್ ಕ್ಯಾಸಂಬಳ್ಳಿ ಚಂಗಲರಾಯ ರೆಡ್ಡಿಯವರ ಬದುಕು, ಹೋರಾಟ ಹಲವು ಕೌತುಕಗಳ ಸಂಕಲನ.
ಮೈಸೂರು ಸಂಸ್ಥಾನದಲ್ಲಿ ಅಧಿಕೃತ ಕಾಂಗ್ರೆಸ್ಸಿನ ಸ್ಥಾಪನೆ ಹಾಗೂ ಅದರ ಕಾರ್ಯ ಚಟುವಟಿಕೆ, ಹೋರಾಟಗಳಿಗೆ ರೆಡ್ಡಿಯವರ ಹೆಸರು ಅಗ್ರಸ್ಥಾನದಲ್ಲಿ ಬೆರೆತು ಹೋಗಿದೆ. ಕೆ.ಸಿ.ರೆಡ್ಡಿಯವರು ಈ ನಾಡು ಕಂಡ ಅಪರೂಪದ ನೇತಾರ. ಅವರ ಚಿಂತನೆ, ಹೋರಾಟದ ಹಾದಿ, ಸಾಧನೆಯ ಸರಮಾಲೆಗಳು ಅವಿಸ್ಮರಣೀಯ.
ಹುಟ್ಟು-ಬಾಲ್ಯ
ಕೋಲಾರ ಜಿಲ್ಲೆಯ ಕೆಜಿಎಫ್‌ನಿಂದ ಸುಮಾರು 6 ಕಿ.ಮೀ ದೂರದಲ್ಲಿರುವ ಕ್ಯಾಸಂಬಳ್ಳಿ ಗ್ರಾಮ ಚೆಂಗಲರಾಯ ರೆಡ್ಡಿಯರ ಹುಟ್ಟೂರು. ವೆಂಕಟರೆಡ್ಡಿ, ಗಂಗೋಜಮ್ಮ ದಂಪತಿಗಳ ಮೂವರು ಮಕ್ಕಳ ಪೈಕಿ ಒಬ್ಬರಾಗಿ 1902ನೇ ಇಸವಿ ಮೇ 4ನೇ ತಾರೀಖಿನಂದು ಜನಿಸಿದ ರೆಡ್ಡಿಯವರ ಆರಂಭಿಕ ಶಿಕ್ಷಣ ಕೆಜಿಎಫ್‌ನಲ್ಲಿಯೇ ನಡೆಯಿತು. ಕಾಲೇಜು ಶಿಕ್ಷಣಕ್ಕಾಗಿ ಮದ್ರಾಸಿಗೆ ಹೋದ ರೆಡ್ಡಿಯವರು ಪಚ್ಚಿಯಪ್ಪ ಕಾಲೇಜು ಸೇರಿ 1924ರಲ್ಲಿ ಬಿ.ಎ ಪದವಿ ಗಳಿಸಿದರು. ಅಲ್ಲಿಯೇ ಅವರು ಗಾಂಧಿಜೀಯನ್ನು ಮೊತ್ತಮೊದಲು ನೋಡಿದ್ದು. ಆಗಿನ್ನೂ ಇಂಟರ್ ಓದುತ್ತಿದ್ದ ರೆಡ್ಡಿಯವರ ಮೇಲೆ ಗಾಂಧೀಜಿ ಅವರ ಭಾಷಣ ವಿಪರೀತ ಪರಿಣಾಮ ಬೀರಿತು.
ಅಂದಿನಿಂದಲೇ ಖಾದಿ ತೊಡುವ, ಕಾಲೇಜು ವ್ಯಾಸಾಂಗವನ್ನು ಬಿಟ್ಟು ಸ್ವಾತಂತ್ರ ಚಳುವಳಿಯಲ್ಲಿ ತೊಡಗುವ ನಿರ್ಧಾರವನ್ನು ಮಾಡಿದರು. ಬಳಿಕ ಕಾನೂನು ಪದವಿ ಪಡೆದು, ಮದ್ರಾಸಿನಲ್ಲಿ ಅತ್ಯಂತ ಪ್ರಸಿದ್ದರಾಗಿದ್ದ ಜಸ್ಟೀಸ್ ಸೋಮಯ್ಯನವರಲ್ಲಿ ಹಲವು ಕಾಲ ಶಿಷ್ಯವೃತ್ತಿ ಮಾಡಿ ಅನುಭವ ಪಡೆದ ನಂತರ ಸ್ವಂತ ಊರಿಗೆ ಹಿಂದಿರುಗಿದ್ದರು.
1927ರಲ್ಲಿ ಅರಳೇಪೇಟೆಯಲ್ಲಿದ್ದ ಕಾಂಗ್ರೆಸ್ ಆಫೀಸು ಕಟ್ಟಡದ ಒಡೆಯರಾಗಿದ್ದ ರಾಮರೆಡ್ಡಿಯವರ ಸಾಕು ಮಗಳು ಕೌಸಲ್ಯಮ್ಮನವರ ಜೊತೆ ಬಾಗೇಪಲ್ಲಿಯಲ್ಲಿ ಅವರ ವಿವಾಹವಾಯಿತು. ದುರಂತವೆಂದರೆ ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಕೌಸಲ್ಯಮ್ಮನವರು ಟೈಫಾಯಿಡ್‌ನಿಂದ ತೀರಿಕೊಂಡರು. ಅನಂತರ ರೆಡ್ಡಿಯವರು ಏಳು ವರ್ಷಗಳ ಕಾಲ ಮರು ಮದುವೆಯ ಯೋಚನೆಯನ್ನೇ ಮಾಡಲಿಲ್ಲ.
ವ್ಯವಹಾರದಲ್ಲಿ ನಷ್ಟ ಹಾಗೂ ಹೆಂಡತಿ ಕಳೆದುಕೊಂಡ ಸೂತಕ ಅವರಲ್ಲಿ ಒಂದು ರೀತಿಯ ವಿರಕ್ತಭಾವ ಮೂಡಿಸಿದ್ದವು. ಕ್ಯಾಸಂಬಳ್ಳಿಯನ್ನು ಬಿಟ್ಟು ಹೋಗುವ ನಿರ್ಧಾರಕ್ಕೆ ಇವು ಬಹುಮುಖ್ಯ ಕಾರಣ ಕೂಡ ಆದವು. ಕೋಲಾರದಲ್ಲಿ ಮನೆ ಮಾಡಿ ವಕೀಲಿ ವೃತ್ತಿ ಆರಂಭಿಸಬೇಕೆAದಿದ್ದರು. ಆದರೆ 1927ರಲ್ಲಿ ಮತ್ತೊಮ್ಮೆ ಗಾಂಧಿಜೀಯವರ ದರ್ಶನದ ನಂತರ ಅವರ ಬದುಕಿನ ದಿಕ್ಕೇ ಬದಲಾಯಿತು.

ರಾಜಕೀಯ ಪ್ರವೇಶ
ಖಾಯಿಲೆಯಿಂದ ತುಂಬಾ ನಿತ್ರಾಣರಾಗಿದ್ದ ಗಾಂಧಿಜೀಯವರು ವಿಶ್ರಾಂತಿಗಾಗಿ ಕೆಲವು ಕಾಲ ನಂದಿಬೆಟ್ಟದಲ್ಲಿ ತಂಗಿದ್ದರು. ಗಾಂಧಿಜೀಯವರಿಂದ ಸಲಹೆ ಪಡೆದು ಅದರಂತೆ ಮುನ್ನಡೆಯುವುದಕ್ಕಾಗಿ ಅನೇಕ ಮಂದಿ ಅವರನ್ನು ಭೇಟಿ ಮಾಡುತ್ತಿದ್ದರು. ಗಾಂಧಿಯವರ ಸಲಹೆಯಿಂದ ಪ್ರೇರಿತರಾದ ರೆಡ್ಡಿಯವರು ವಕೀಲಿ ವೃತ್ತಿ ಬಿಟ್ಟು ಸಾರ್ವಜನಿಕ ಸೇವೆಯಲ್ಲಿ ತೊಡಗಲು ನಿರ್ಧರಿಸಿದರು. ಈ ತೀರ್ಮಾನದ ನಂತರ ಅವರು ಮೈಸೂರು ಪ್ರಜಾಪ್ರತಿನಿಧಿ ಸಭೆಗೆ ಆಯ್ಕೆಯಾದರು. ಇದು ಅವರ ಪ್ರಥಮ ರಾಜಕೀಯ ಪ್ರವೇಶ.
ಆಗಿನ್ನೂ ಅವರಿಗೆ 26 ವರ್ಷ. ಪ್ರಥಮ ಅಧಿವೇಶನದಲ್ಲಿಯೇ ಅವರು ಒಳ್ಳೆಯ ವಾಗ್ಮಿಯೆಂದು ಪರಿಗಣಿಸಲ್ಪಟ್ಟರು. ಅವರನ್ನು ಪ್ರಜಾಪ್ರತಿನಿಧಿ ಸಭೆಯಿಂದ ಶಾಸನ ಸಭೆಗೆ ಚುನಾಯಿಸಲಾಯಿತು. ಈ ಸಭೆಗಳಲ್ಲಿ ಅವರು ಪ್ರಜೆಗಳ ಪರವಾಗಿ, ಮುಖ್ಯವಾಗಿ ಹಳ್ಳಿಗಾಡಿನ ರೈತರಿಗೆ ಸಂಬಂಧಪಟ್ಟ ವಿಷಯಗಳಲ್ಲಿ ನಿರ್ಭಯವಾಗಿ ವಾದಿಸುತ್ತಿದ್ದರು.
ಮುಂದೆ 1933ರಲ್ಲಿ ಡಿಸ್ಟ್ರಿಕ್ಟ್ ಬೋರ್ಡ್ ಅಧ್ಯಕ್ಷರಾದರು. ಕೋಲಾರ ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿ ಜಿಲ್ಲೆಯ ಉನ್ನತಿಗಾಗಿ ರೆಡ್ಡಿಯವರು ನಡೆಸಿದ ಕಾರ್ಯಗಳು ಕೋಲಾರ ಜಿಲ್ಲೆಯಲ್ಲಿ ಅವರ ಜನಪ್ರಿಯತೆಯನ್ನು ಹೆಚ್ಚಿಸಿದವು. ಹಾಗಂತ ರೆಡ್ಡಿಯವರ ಆಸಕ್ತಿ ರಾಜಕೀಯ ವಿಷಯಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. 1934ರಲ್ಲಿ ಗುರವಾರೆಡ್ಡಿಯವರ ಹಿರಿಯ ಪುತ್ರಿ ಸರೋಜಮ್ಮನೊಂದಿಗೆ ರೆಡ್ಡಿಯವರದು ಮತ್ತೆ ವಿವಾಹವಾಯಿತು.
ಮೈಸೂರು ಸಂಸ್ಥಾನದಲ್ಲಿ 1917ರಲ್ಲಿ ಸ್ಥಾಪನೆಯಾಗಿದ್ದ ಪ್ರಜಾಮಿತ್ರ ಮಂಡಳಿಯ ಕೆಲವು ನಿಲುವುಗಳ ವಿರುದ್ಧವಾಗಿ 1930ರಲ್ಲಿ ಪ್ರಜಾಪಕ್ಷ ಎಂಬ ಹೊಸ ಪಕ್ಷ ಉದಯವಾಯಿತು. 1935ರಿಂದ 1937ರವರೆಗೆ ಅಂದರೆ ಪ್ರಜಾ ಸಂಯುಕ್ತ ಪಕ್ಷ ಕಾಂಗ್ರೆಸ್ಸಿನೊಂದಿಗೆ ವಿಲೀನಗೊಳ್ಳುವವರೆಗೆ ಕೆ.ಸಿ.ರೆಡ್ಡಿಯವರು ಪ್ರಜಾಸಂಯುಕ್ತ ಪಕ್ಷದ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದರು. ಹಿಂದುಳಿದ ಪಂಗಡಗಳ ಉದ್ದಾರ ಹಾಗೂ ಜವಾಬ್ದಾರಿ ಸರ್ಕಾರದ ಸ್ಥಾಪನೆ ಇವು ಹೊಸ ಪಕ್ಷದ ಉದ್ದೇಶಗಳಾಗಿದ್ದವು.
ಪತ್ರಕರ್ತರಾಗಿ…
ಪ್ರಜಾಪಕ್ಷದ ಪ್ರಮುಖ ಬೆಂಬಲಿಗರಾಗಿದ್ದ ಹೆಸರಾಂತ ಪತ್ರಕರ್ತ ಬಿ.ಎನ್.ಗುಪ್ತ ಅವರು 1931ರಲ್ಲಿ ಮದ್ರಾಸಿನಿಂದ ಪ್ರಜಾಮತ ವಾರಪತ್ರಿಕೆಯನ್ನು ಹಾಗೂ ಜನವಾಣಿ (1934) ಎಂಬ ದಿನಪತ್ರಿಕೆಯನ್ನು ಆರಂಭಿಸಿದ್ದರು. ಗುಪ್ತ ಅವರು ಕೆ.ಸಿ.ರೆಡ್ಡಿಯವರ ಆಪ್ತ ಮಿತ್ರರೂ ಆಗಿದ್ದರಿಂದ ಜನವಾಣಿಗೆ 1937ರಲ್ಲಿ ಸುಮಾರು ಏಳು ತಿಂಗಳುಗಳ ಕಾಲ ರೆಡ್ಡಿ ಸಂಪಾದಕರಾಗಿದ್ದರು.
ಜನವಾಣಿ ಪ್ರಜೆಗಳ ಹಕ್ಕು ಬಾಧ್ಯತೆಗಳಿಗೆ ಹೋರಾಡುವ ಪತ್ರಿಕೆಗಳ ಶ್ರೇಣಿಯಲ್ಲಿ ಪ್ರಥಮ ಸ್ಥಾನ ಪಡೆದಿತ್ತು. ಸರ್ಕಾರದ ಅಧಿಕಾರಿಗಳಲ್ಲಿ ಕಂಡು ಬರುತ್ತಿದ್ದ ಅನ್ಯಾಯದ ಬಗ್ಗೆ ನಿರ್ಭಯವಾದ ಟೀಕೆ ಮತ್ತು ಖಂಡನಾತ್ಮಕ ಲೇಖನಗಳಿಗೆ ಜನವಾಣಿ ಹೆಸರಾಗಿತ್ತು. ಸರ್ಕಾರದ ಉನ್ನತಾಧಿಕಾರಿಗಳು ಪ್ರತಿದಿನವೂ ಜನವಾಣಿಯನ್ನು ಓದದೆ ಮಲಗುತ್ತಿರಲಿಲ್ಲ.
ಕಾರ್ಮಿಕರ ನಾಯಕರಾಗಿ
ಸ್ವಾತಂತ್ರಕ್ಕಾಗಿ ಹೋರಾಟ ನಡೆದಿದ್ದ ಕಾಲದಲ್ಲಿ ಮೈಸೂರು ಸಂಸ್ಥಾನದಲ್ಲಿ ಕಾರ್ಮಿಕ ಸಂಘಟನೆಗಳಿಗೆ ಮಾನ್ಯತೆ ಇರಲಿಲ್ಲ. ಕಾರ್ಮಿಕ ಸಂಘಟನೆಗಳನ್ನು ಬೆಳೆಸಲು ಕೆ.ಟಿ.ಭಾಷ್ಯಂ ಅವರು ಬಹುವಾಗಿ ಶ್ರಮಿಸಿದರು. ಕೋಲಾರ ಚಿನ್ನದ ಗಣಿಗಳಲ್ಲಿ ವಿದೇಶೀ ಕಂಪನಿಯವರಿಂದ ನಡೆದಿದ್ದ ಕಾರ್ಮಿಕ ಶೋಷಣೆಯಿಂದಾಗಿ ಕಾಂಗ್ರೆಸ್ ಮುಖಂಡರು ಈ ವಿಷಯದ ಕಡೆ ವಿಶೇಷ ಗಮನ ವಹಿಸಿದರು.
ಸಂಸ್ಥಾನದ ಕಾಂಗ್ರೆಸ್‌ನವರ ಪ್ರಯತ್ನದಿಂದಾಗಿ ಕರ್ನಾಟಕದ ಬ್ರಿಟಿಷ್ ಜಿಲ್ಲೆಗಳಿಗೂ ಮೊದಲು ಬೆಂಗಳೂರಿನಲ್ಲಿ ಕಾರ್ಮಿಕ ಸಂಘಟನೆ ಆರಂಭವಾಯಿತು. ಕೆಜಿಎಫ್‌ನಲ್ಲಿ ಕಾರ್ಮಿಕ ಹಿತೈಷಿ ಸಂಘ ಹುಟ್ಟಿಕೊಂಡಿತು. ವಿ.ವಿ.ಗಿರಿಯವರ ಅಧ್ಯಕ್ಷತೆಯಲ್ಲಿ ಕೆಜಿಎಫ್‌ನಲ್ಲಿ ಕಾರ್ಮಿಕರ ಹಕ್ಕುಗಳಿಗಾಗಿ ನಡೆದ ಹೋರಾಟದಲ್ಲಿ ರೆಡ್ಡಿಯವರೂ ಸಹ ಭಾಗವಹಿಸಿದರು. ಈ ಹೋರಾಟದ ಫಲವಾಗಿ ಅಲ್ಲಿ ಕಾರ್ಮಿಕ ಸಂಘಟನೆಗೆ ಮಾನ್ಯತೆ ದೊರೆಯಿತು.
1942ರಲ್ಲಿ ಕಾರ್ಮಿಕ ಸಂಘಟನೆಗಳಿಗೆ ಚುನವಣೆಗಳು ನಡೆದವು. ಕೆಜಿಎಫ್‌ನ ಬೇರೆ ಬೇರೆ ಗಣಿಗಳ ಪೈಕಿ ಬಹುದೊಡ್ಡದಾದ ಚಾಂಪಿಯನ್ ರೀಫ್ ಗಣಿ ಪ್ರದೇಶದ ಕಾರ್ಮಿಕ ಸಂಘಕ್ಕೆ ರೆಡ್ಡಿಯವರು ಅಧ್ಯಕ್ಷರಾದರು. ಬೇರೆ ಬೇರೆ ಸಂಘಟನೆಗಳವರೆಲ್ಲ ರೆಡ್ಡಿಯವರಿಗೇ ಮಾನ್ಯತೆ ನೀಡಿದ್ದು ವಿಶೇಷ. ಮುಂದೆ ರೆಡ್ಡಿಯವರು ಕಾರ್ಮಿಕ ನಾಯಕರಾಗಿ ಬಹಳ ಜನಪ್ರಿಯತೆ ಗಳಿಸಿದರು. 1946ರಲ್ಲಿ ಮೈಸೂರು ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಕಾರ್ಮಿಕ ಸಂಘದ ಅಧ್ಯಕ್ಷತೆಗೆ ರಾಜಿನಾಮೆ ನೀಡಿದರು.
ಮೈಸೂರು ಚಲೋ
1947ರಲ್ಲಿ ಭಾರತ ಸ್ವತಂತ್ರವಾಯಿತು. ಬ್ರಿಟಿಷರು ಕಾಂಗ್ರೆಸ್ಸಿಗೆ ಆಡಳಿತ ಯಂತ್ರ ಒಪ್ಪಿಸಿದಾಗ ದೇಶೀಯ ಮಹಾರಾಜರು ಮತ್ತು ನವಾಬರು ಸ್ವತಂತ್ರರೆಂದು ಘೋಷಿಸಿದರು. ದೇಶೀಯ ಸಂಸ್ಥಾನಗಳು ಭಾರತ ಒಕ್ಕೂಟ ಸೇರಿಕೊಳ್ಳಲು ಒಪ್ಪದೆ ತಾವೇ ಸ್ವತಂತ್ರರಾಗಿರಲು ಪ್ರಯತ್ನಿಸಿದವು. ಒಟ್ಟಿನಲ್ಲಿ ಭಾರತಕ್ಕೆ ಸ್ವಾತಂತ್ರ ಬಂದರೂ ಮೈಸೂರು ಸಂಸ್ಥಾನದ ಜನರಿಗೆ ಅದು ಬರಲಿಲ್ಲ. ಅದಕ್ಕಾಗಿ ಇಲ್ಲಿನ ಕಾಂಗ್ರೆಸ್ ನಾಯಕರು ಮತ್ತೆ ಚಳುವಳಿ ನಡೆಸಬೇಕಾಯಿತು.
ಈ ಚಳವಳಿಯ ವಿಚಾರ ಮೊದಲು ಮೂಡಿದ್ದು ಕೆಂಗಲ್ ಹನುಂತಯ್ಯನವರಲ್ಲಿ. ಅವರು ಚಳವಳಿಗೆ ಕರೆ ನೀಡಿದಾಗ ಅವರ ಮೇಲೆ ರಾಜದ್ರೋಹದ ಆಪಾದನೆ ಹೊರಿಸಿ ಸರ್ಕಾರ ಅವರನ್ನು ಬಂಧಿಸಿತು. ಆಗ ಚಳವಳಿಯನ್ನು ನಡೆಸುವ ಜವಾಬ್ದಾರಿ ಮೈಸೂರು ಸಂಸ್ಥಾನ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದ ರೆಡ್ಡಿಯವರ ಹೆಗಲಿಗೆ ಬಿತ್ತು.
ಈ ಚಳವಳಿಯ ನೇತಾರರಾಗಿ ವಿದ್ಯುಕ್ತವಾಗಿ ಆಯ್ಕೆಯಾಗಿದ್ದ ರೆಡ್ಡಿಯವರು ಮೈಸೂರು ಚಲೋ ಘೋಷಣೆ ಮಾಡಬೇಕಾಯಿತು. ಹೋರಾಟದ ಫಲವಾಗಿ 1947, ಅಕ್ಟೋಬರ್ 13ನೇ ತಾರೀಖು ಮೈಸೂರು ಸಂಸ್ಥಾನ ಇನ್‌ಸ್ಟ್ರೋಮೆಂಟ್ ಆಫ್ ಅಕ್ಸೇಷನ್‌ಗೆ ಸಹಿ ಮಾಡುವ ಮುಖೇನ ಭಾರತದ ಒಕ್ಕೂಟಕ್ಕೆ ಸೇರಲ್ಪಟ್ಟಿತು.

ಮೊದಲ ಮುಖ್ಯಮಂತ್ರಿಯಾಗಿ….
ಅಲ್ಲಿಂದ ಮುಂದೆ 1947 ಅಕ್ಟೋಬರ್ 24ನೇ ತಾರೀಖು ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿ ಆಯ್ಕೆಯಾದ ರೆಡ್ಡಿಯವರ ಜವಾಬ್ದಾರಿ ಹೆಚ್ಚಾಯಿತು. ಮುಖ್ಯಮಂತ್ರಿಯಾಗುವುದಕ್ಕೂ ಮುಂಚೆಯೇ ಸ್ವಾತಂತ್ರ ಚಳುವಳಿ, ಕಾರ್ಮಿಕ ಹೋರಾಟ ಮತ್ತು ರಾಜಕೀಯ ಪಕ್ಷಗಳ ಮುಂದಾಳತ್ವ ವಹಿಸಿ ಸಮರ್ಥವಾಗಿ ನಿಭಾಯಿಸಿದ್ದ ರೆಡ್ಡಿಯವರಿಗೆ ಮೈಸೂರು ರಾಜ್ಯ ಆಡಳಿತವನ್ನು ನಿರ್ವಹಿಸುವುದು ಕಷ್ಟವೇನಾಗಿರಲಿಲ್ಲ.
ಈ ಸಮಯದಲ್ಲಿ ರೆಡ್ಡಿಯವರಿಗೆ ಅನೇಕ ಸಮಸ್ಯೆಗಳು ತಲೆದೋರಿದವು. ಒಂದು ಕಡೆಗೆ ಸ್ವಾತಂತ್ರಕ್ಕಾಗಿ ಹೋರಾಡಿದ ರಾಜಕೀಯ ಮುಖಂಡರು ತಮಗೆ ಮಂತ್ರಿ ಪದವಿ ಸಿಗಲಿಲ್ಲವೆಂದು, ಜಾತಿ ಮತ್ತು ಪ್ರಾದೇಶಿಕ ಆಧಾರದ ಮೇಲೆ ನಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕಿತ್ತೆಂದು ಮುನಸಿಕೊಂಡಿದ್ದರು.
ಪ್ರತಿ ಅಭಿವೃದ್ಧಿ ಕಾರ್ಯದ ಹಿಂದೆಯೂ ಈ ಅಸಮಾಧಾನದ ಹೊಗೆ ಎಲ್ಲರ ಕಣ್ಣನ್ನು ಮುಸಕು ಮಾಡುವಷ್ಟು ವ್ಯಾಪಕವಾಗಿತ್ತು. ಪ್ರಾಯಶಃ ಕೆ.ಸಿ.ರೆಡ್ಡಿಯವರ ಬದಲು ಆಗ ಬೇರೆ ಯಾರಾದರೂ ಮುಳ್ಳಿನ ಗದ್ದುಗೆಯಂತಹ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದರೆ ಆರಂಭದ ಹೆಜ್ಜೆಯಲ್ಲಿ ಕರ್ನಾಟಕ ರಾಜಕಾರಣದ ದಾರಿ ಬಿಕ್ಕಟ್ಟಿಗೆ ಸಿಲುಕಿಬಿಡುತ್ತಿತ್ತೇನೋ? ಆದರೆ, ಯಾವುದಕ್ಕೂ ಅಳುಕದೇ ಮುನ್ನಡೆದ ರೆಡ್ಡಿಯವರು ತಮ್ಮ ಅವಧಿಯಲ್ಲಿ ಅನೇಕ ಮಹತ್ತರ ಯೋಜನೆಗಳನ್ನು ಜಾರಿಗೊಳಿಸಿದರು.
1948ರಲ್ಲಿ ರಸ್ತೆ ಸಾರಿಗೆ ನಿಗಮ ರಚನೆ, ಶರಾವತಿಯಲ್ಲಿ ಮಹಾತ್ಮ ಗಾಂಧಿ ಜಲವಿದ್ಯುತ್ ಯೋಜನೆ ಸ್ಥಾಪನೆ ಮತ್ತು 1949ರಲ್ಲಿ ದಂಡು ಪ್ರದೇಶ ಮತ್ತು ಬೆಂಗಳೂರನ್ನು ಒಗ್ಗೂಡಿಸಿ ಬೆಂಗಳೂರು ಕಾರ್ಪೋರೇಷನ್ ಸ್ಥಾಪನೆ, ಅದರ ಬೆನ್ನಲ್ಲೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹುಟ್ಟು, ಮುಂದೆ ಬೆಂಗಳೂರು ನಗರದಂತೆ ರಾಜ್ಯದ ಎಲ್ಲಾ ನಗರಗಳು ಅಭಿವೃದ್ಧಿಯಾಗಬೇಕೆಂಬ ಉದ್ದೇಶದಿಂದ 1951ರಲ್ಲಿ ಪುರಸಭೆ ಕಾನೂನು ಜಾರಿ, 1949ರಲ್ಲಿ ಸಾಂಖ್ಯಿಕ ಇಲಾಖೆಯನ್ನು ಅಸ್ತಿತ್ವಕ್ಕೆ ತಂದಿದ್ದು, ಅದೇ ಪ್ರಕಾರ 1951ರಲ್ಲಿ ಸ್ಥಳಿಯ ಮತ್ತು ಸ್ವಾಯತ್ತ ಸಂಸ್ಥೆಗಳ ಇಲಾಖೆಯನ್ನು ಅಸ್ತಿತ್ವಕ್ಕೆ ತಂದಿದ್ದು…
ಹೀಗೆ ಹುಡುಕುತ್ತಾ ಹೋದರೆ ಕೆ.ಸಿ.ರೆಡ್ಡಿಯವರ ಐದು ವರ್ಷ ಅವಧಿಯಲ್ಲಿ ಆದ ಅಭಿವೃದ್ಧಿ ಮಹಾಪುರ ಒಂದೆರಡಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ರೆಡ್ಡಿಯವರು ರಾಜ್ಯದ ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ಸ್ಥಳಾಂತರಿಸಿ, ಅಠಾರ ಕಛೇರಿಯಲ್ಲಿದ್ದ ಸಚಿವಾಲಯಕ್ಕೆ ಇಡೀ ರಾಜ್ಯದ ಆಡಳಿತ ನಿಭಾಯಿಸಲು ಸಿಬ್ಬಂದಿ ವರ್ಗ ಮತ್ತು ಕಡತಗಳಿಗೆ ಜಾಗ ಸಾಕಾಗದೇ ದೊಡ್ಡದೊಂದು ಆಡಳಿತ ಕಛೇರಿ ಅಥವಾ ವಿಧಾನಸೌಧ ನಿರ್ಮಾಣಕ್ಕೆ ಟೊಂಕ ಕಟ್ಟಿ ನಿಂತದ್ದು ವಿಶೇಷ. ಅದರ ಫಲವಾಗಿಯೇ 33 ಲಕ್ಷ ರೂಪಾಯಿಗಳ ಅಂದಾಜು ವೆಚ್ಚದಲ್ಲಿ 1951 ಜುಲೈ 13ರಂದು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂರವರ ಮೂಲಕ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಮುಂದೆ ಅದೇ ಶಂಕು ಸ್ಥಾಪನೆ ಅಡಿಗಲ್ಲಿನ ಮೇಲೆ ಕೆಂಗಲ್ ಹನುಮಂತಯ್ಯನವರು ಭವ್ಯವಾದ ವಿಧಾನಸೌಧ ನಿರ್ಮಿಸಿದರು. ಸೌಧದ ಮುಂದೆ ಹನುಮಂತಯ್ಯನವರ ಆಳೆತ್ತರದ ಪ್ರತಿಮೆ ಎದ್ದು ನಿಂತಿತು. 1952ರಲ್ಲಿ ಅಧಿಕಾರ ಮುಗಿಸಿದ ರೆಡ್ಡಿಯವರು ಕೇವಲ ರಾಜ್ಯಕ್ಕೆ ಮಾತ್ರವಲ್ಲ, ಕೇಂದ್ರ ಉತ್ಪಾದನ ಸಚಿವರಾಗಿ ಇಡೀ ದೇಶಕ್ಕೇ ಮಾದರಿಯಾದ ಅಭಿವೃದ್ಧಿ ಮಾಡಿದ್ದಾರೆ.
ರಾಜ್ಯಪಾಲರಾಗಿ..
ಮುಂದೆ 1965ರಲ್ಲಿ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ರೆಡ್ಡಿಯವರು ಆರೂವರೆ ವರ್ಷದ ಕಾಲ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿ ನಂತರ 1971ರಲ್ಲಿ ನಿವೃತ್ತಿ ಪಡೆದರು. ಮಧ್ಯಪ್ರದೇಶದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿರುವಾಗಲೇ ಶಾಸ್ತ್ರಿಜಿಯವರು ತಾಷ್ಕೆಂಟ್‌ನಲ್ಲಿ ನಿಧನರಾದ ಸುದ್ದಿ ಬಂದಿತು. ಆ ಸುದ್ದಿ ತಿಳಿದ ಕೂಡಲೇ ಹೃದಯಾಘಾತಕ್ಕೊಳಗಾದ ರೆಡ್ಡಿಯವರು ದೀರ್ಘಕಾಲ ಚಿಕಿತ್ಸೆ ಪಡೆಯಬೇಕಾಯಿತು.
ರಾಜ್ಯಪಾಲ ಹುದ್ದೆಯಿಂದ ನಿವೃತ್ತರಾದ ನಂತರ ಬೆಂಗಳೂರಿನ ಜಯನಗರದಲ್ಲಿ ಮಾವ ಗುರುವಾರೆಡ್ಡಿಯವರು ಮಗಳಿಗಾಗಿ ಕಟ್ಟಿಸಿಕೊಟ್ಟಿದ್ದ ಮನೆಯಲ್ಲಿ ನೆಲೆಸಿದರು. ನಿವೃತ್ತಿಯ ನಂತರ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ರೆಡ್ಡಿಯವರು ತೊಡಗಿಸಿಕೊಂಡರು. ಅವರಿಗೆ ಪ್ರಕೃತಿ ಚಿಕಿತ್ಸೆ ಪದ್ಧತಿಯಲ್ಲಿ ತುಂಬ ಆಸಕ್ತಿ ಇತ್ತು. ಅವರು ಜಯನಗರದಲ್ಲಿ ಈಗಿರುವ ಪ್ರಕೃತಿ ಚಿಕಿತ್ಸಾ ಕೇಂದ್ರದ ಸ್ಥಾಪಕ ಅಧ್ಯಕ್ಷರಾಗಿದ್ದರು.
ಕೊನೆ ಕೊನೆಯಲ್ಲಿ ಅವರ ಆರೋಗ್ಯ ತೀರಾ ಬಿಗಡಾಯಿಸಿತು. 1976ರಲ್ಲಿ ಜಯನಗರದ ಮನೆಯಲ್ಲಿರುವಾಗಲೇ ಅವರಿಗೆ ಮತ್ತೊಮ್ಮೆ ಹೃದಯಾಘಾತವಾಯಿತು. ತಕ್ಷಣ ಮಾರ್ಥಾಸ್ ಆಸ್ಪತ್ರೆಗೆ ಸೇರಿಸಲಾಯಿತು. 1976ರ ಫೆಬ್ರವರಿ 27 ರಂದು ರೆಡ್ಡಿ ನಿಧನರಾದರು!
ಲೇಖಕರು: ಮೊ ಮು ಆಂಜನಪ್ಪ ರೆಡ್ಡಿ (‘ರೆಡ್ಡಿ ಪರಂಪರೆ’ ಕೃತಿಯಿಂದ ಆಯ್ದ ಭಾಗ)