ರೆಡ್ಡಿ ಪರಂಪರೆ ಸಮೃದ್ಧಗೊಳಿಸೋಣ… Reddy Parampare

ರೆಡ್ಡಿಗಳೆಂದರೆ ರಾಜರು, ರೆಡ್ಡಿಗಳೆಂದರೆ ವೀರಾಧಿವೀರರು, ರೆಡ್ಡಿಗಳೆಂದರೆ ಪರಮ ಪರಾಕ್ರಮಿಗಳು..! ಇತಿಹಾಸವನ್ನೊಮ್ಮೆ ಇಣುಕಿ ನೋಡಿದರೆ ರೆಡ್ಡಿಗಳು ಕಟ್ಟಿದ ಸಾಮ್ರಾಜ್ಯಗಳು ದೇಶದ ಪರಂಪರೆಯನ್ನೇ ಸಮೃದ್ಧಗೊಳಿಸಿವೆ. ವಿವಿಧ ಧರ್ಮ ಅವಲಂಬಿಗಳಾಗಿಯೂ ರೆಡ್ಡಿ ದೊರೆಗಳು ‘ತಮ್ಮತನ’ವನ್ನು ಚರಿತ್ರೆಯ ಪುಟ ಪುಟದಲ್ಲೂ ಅಚ್ಚಳಿಯದೇ ಉಳಿಸಿ ಹೋಗಿದ್ದಾರೆ.
ರೆಡ್ಡಿಗಳ ಪರಂಪರೆಗೆ ಮಣ್ಣಿನ ಸೊಗಡಿದೆ, ಪ್ರಭುತ್ವದ ಖದರ್ ಇದೆ. ರೆಡ್ಡಿಗಳು ಮೂಲತಃ ಕೃಷಿಕರೇ ಹೌದಾದರೂ ಆಡಳಿತ, ವ್ಯಾಪಾರ, ಉದ್ಯಮ, ಸರ್ಕಾರಿ ಸೇವೆ, ರಾಜಕಾರಣ, ಸಮಾಜಸೇವೆ ಇತ್ಯಾದಿ ರಂಗಗಳಲ್ಲಿ ತೊಡಗಿಸಿಕೊಂಡು ಬಂದಿದ್ದಾರೆ.
ಮಹಾಯೋಗಿ ವೇಮನ ಹಾಗೂ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಆಧ್ಯಾತ್ಮಿಕ ಲೋಕದಲ್ಲಿ ಎಂದಿಗೂ ಆರದ ನಂದಾದೀಪವಾಗಿ ಲೋಕವನ್ನು ಬೆಳಗುತ್ತಿದ್ದಾರೆ. ರೆಡ್ಡಿಗಳ ಮಾನವ ಪ್ರೇಮ, ಧಾರ್ಮಿಕ ಶ್ರದ್ಧೆ ಹಾಗೂ ಉದಾತ್ತ ಗುಣಗಳ ಸಂಕೇತದಂತಿರುವ ಈ ದೈವಾಂಶ ಸಂಭೂತರು ರೆಡ್ಡಿ ಪರಂಪರೆಗೇ ಕಳಸ ಪ್ರಾಯರಾಗಿದ್ದಾರೆ.
ವಿಶೇಷವೆಂದರೆ ವೇಮನ ಹಾಗೂ ಮಲ್ಲಮ್ಮರಂತೆಯೇ ಇನ್ನೂ ಅನೇಕ ಆಧ್ಯಾತ್ಮಿಕ ಪುರುಷರು, ಸಾಧ್ವಿಯರು, ವೀರ ವನಿತೆಯರು, ಸಾತಂತ್ರ್ಯ ಹೋರಾಟಗಾರರು, ಹೆಮ್ಮೆಯ ಮುಖ್ಯಮಂತ್ರಿಗಳು, ಶಿಕ್ಷಣ, ಆರೋಗ್ಯ, ಸಿನಿಮಾ, ಸಾಹಿತ್ಯ, ಸಮಾಜಸೇವೆ, ಸಹಕಾರಿ ರಂಗದ ಧುರೀಣರು ರೆಡ್ಡಿ ಪರಂಪರೆಯನ್ನು ಉಜ್ವಲಗೊಳಿಸಿದ್ದಾರೆ. ಕಾಲಕಾಲಕ್ಕೆ ಹೊಸ ಸಾಧಕರು ಜನಿಸಿ, ರೆಡ್ಡಿ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ರಚನಾತ್ಮಕ ಪ್ರ ಯತ್ನ, ಪ್ರಯೋಗಳಾಗುತ್ತಿವೆ.
ಈ ಯಾದಿಯಲ್ಲಿ ನಾವೆಲ್ಲಾ ತನ್ಮಯರಾಗೋಣ… ರೆಡ್ಡಿಗಳ ಉಜ್ವಲ ಪರಂಪರೆಯನ್ನು ಮತ್ತಷ್ಟು ಮಗದಷ್ಟು ಸಮೃದ್ಧಗೊಳಿಸೋಣ…